
ಗುವಾಹಟಿ: ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಇದೇ ಮೊದಲ ಬಾರಿಗೆ ಆತಿಥ್ಯ ವಹಿಸುತ್ತಿರುವ ಗುವಾಹಟಿಯ ಈಗ ಸಂಭ್ರಮ ಗರಿಗೆದರಿದೆ. ಟೆಸ್ಟ್ ಪಂದ್ಯ ಆಯೋಜಿಸುತ್ತಿರುವ ದೇಶದ 28ನೇ ತಾಣವಾಗಿ ಈ ಊರು ಇತಿಹಾಸದ ಪುಟ ಸೇರಲಿದೆ.
ಎರಡು ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 1–0 ಮುನ್ನಡೆ ಸಾಧಿಸಿದೆ. ಕೋಲ್ಕತ್ತದಲ್ಲಿ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ ಜಯಿಸಿದ್ದ ಪ್ರವಾಸಿ ಬಳಗವು ಐತಿಹಾಸಿಕ ಸಾಧನೆ ಮಾಡಲು ತುದಿಗಾಲಿನಲ್ಲಿ ನಿಂತಿದೆ. ಒಂದೊಮ್ಮೆ ಗುವಾಹಟಿಯ ಪಂದ್ಯದಲ್ಲಿ ಗೆದ್ದರೆ 25 ವರ್ಷಗಳ ನಂತರ ಭಾರತದ ನೆಲದಲ್ಲಿ ಸರಣಿ ಜಯಿಸಿದ ಸಾಧನೆಯನ್ನು ದಕ್ಷಿಣ ಆಫ್ರಿಕಾ ಮಾಡಲಿದೆ. ಆದರೆ ಕಳೆದ ಆತಿಥೇಯ ಭಾರತಕ್ಕೆ ಕಳೆದ ಮೂರು ಸರಣಿಗಳಲ್ಲಿ ಎರಡನೇ ಸೋಲು ಇದಾಗಲಿದೆ. ಆದರೆ ಭಾರತವು ಈ ಪಂದ್ಯ ಗೆದ್ದರೆ ಸರಣಿ 1–1ರಿಂದ ಸಮ ಆಗಲಿದೆ. ಅಲ್ಲದೇ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರ 11 ಟೆಸ್ಟ್‌ಗಳ ಅಜೇಯ ಓಟಕ್ಕೂ ತಡೆ ಬೀಳಲಿದೆ. ತೆಂಬಾ ಅವರು 10 ಜಯ ಮತ್ತು ಒಂದು ಡ್ರಾ ಸಾಧಿಸಿದ್ದಾರೆ.
ಆತಿಥೇಯ ಬಳಗದ ನಾಯಕ ಶುಭಮನ್ ಗಿಲ್ ಅವರು ಇನ್ನೂ ಫಿಟ್ ಆಗಿಲ್ಲದ ಕಾರಣ ಈ ಪಂದ್ಯದಲ್ಲಿ ಆಡುವುದಿಲ್ಲ. ಅದರಿಂದಾಗಿ ತಂಡವನ್ನು ರಿಷಭ್ ಪಂತ್ ತಂಡವನ್ನು ಮುನ್ನಡೆಸುವರು. ಪಂತ್ ಅವರಿಗೆ ತವರಿನಲ್ಲಿ ಟೆಸ್ಟ್ ನಾಯಕನಾಗಿ ಆಡಲಿರುವ ಮೊದಲ ಪಂದ್ಯವಾಗಲಿದೆ. ಅವರು ಭಾರತ ತಂಡಕ್ಕೆ 38ನೇ ನಾಯಕರಾಗಲಿದ್ದಾರೆ. ಈಚೆಗಷ್ಟೇ ಅವರು ಭಾರತ ಎ ತಂಡದ ನಾಯಕತ್ವ ವಹಿಸಿದ್ದರು. ದಕ್ಷಿಣ ಆಫ್ರಿಕಾ ಎ ವಿರುದ್ಧದ ಸರಣಿಯನ್ನು ಪಂತ್ ಬಳಗವು 1–1ರಿಂದ ಸಮಬಲ ಮಾಡಿತ್ತು.
ಕೋಲ್ಕತ್ತ ಟೆಸ್ಟ್‌ನಲ್ಲಿ ಭಾರತ ತಂಡವು 124 ರನ್‌ಗಳ ಗುರಿಯನ್ನು ಸಾಧಿಸುವಲ್ಲಿ ವಿಫಲವಾಗಿತ್ತು. ಗುವಾಹಟಿಯಲ್ಲಿ ಆತಿಥೇಯ ತಂಡದ ಕೈಗಳಿಂದ ಫಲಿತಾಂಶ ಕೈಜಾರದಂತೆ ನೋಡಿಕೊಳ್ಳುವ ಸವಾಲು ಅವರ ಮುಂದಿದೆ.
ಪಂದ್ಯಕ್ಕಿಂತ ಮುನ್ನ ಸಹಜವಾಗಿಯೇ ಪಿಚ್ ಕುರಿತ ಕೂತೂಹಲ ಮೂಡಿದೆ. ಇಲ್ಲಿಯ ಅಂಗಣದ ಮೇಲ್ಮೈನಲ್ಲಿ ಗರಿಕೆಗಳಿವೆ. ಆದರೆ ಈಡನ್ ಗಾರ್ಡನ್ ಕ್ರೀಡಾಂಗಣದ ಪಿಚ್‌ಗಿಂತ ತುಸು ಭಿನ್ನವಾಗಿವೆ. ಅಲ್ಲಿ ಚೆಂಡು ಅನಿರೀಕ್ಷಿತವಾಗಿ ತಿರುವು ಪಡೆಯುತ್ತಿತ್ತು. ಆದರೆ ಇಲ್ಲಿ ಬ್ಯಾಟರ್‌ಗಳಿಗೆ ಒಂದಿಷ್ಟು ನೆರವು ಸಿಗುವ ನಿರೀಕ್ಷೆ ಇದೆ.
ಭಾರತ ತಂಡದಲ್ಲಿ ಒಂದು ಬದಲಾವಣೆ ಆಗುವ ಸಾಧ್ಯತೆ ಇದೆ. ಗಿಲ್ ಬದಲಿಗೆ ಸ್ಥಾನ ಪಡೆಯಲು ಇಬ್ಬರು ಎಡಗೈ ಬ್ಯಾಟರ್‌ಗಳಾದ ಸಾಯಿ ಸುದರ್ಶನ್ ಮತ್ತು ದೇವದತ್ತ ಪಡಿಕ್ಕಲ್ ಅವರು ಸ್ಪರ್ಧೆಯಲ್ಲಿದ್ದಾರೆ. ಕೋಲ್ಕತ್ತದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ವಾಷಿಂಗ್ಟನ್ ಸುಂದರ್ ಅವರು ಇಲ್ಲಿ ಯಾವ ಸ್ಥಾನದಲ್ಲಿ ಆಡುವರು ಎಂಬ ಕುತೂಹಲ ಗರಿಗೆದರಿದೆ.
ಇನ್ನೊಂದು ಬದಲಾವಣೆ ಆಗುವ ಸಾಧ್ಯತೆಯೂ ಇದ್ದು, ನಿತೀಶ್ ಕುಮಾರ್ ರೆಡ್ಡಿ ಅವರು ಅಕ್ಷರ್ ಪಟೇಲ್ ಬದಲಿಗೆ ಆಡಬಹುದು. ಏಕೆಂದರೆ; ಇಲ್ಲಿಯ ಪಿಚ್ ಮೇಲೆ ನಾಲ್ವರು ಸ್ಪಿನ್ನರ್‌ಗಳ ಅಗತ್ಯ ಬೀಳಲಿಕ್ಕಿಲ್ಲ. ದಕ್ಷಿಣ ಆಫ್ರಿಕಾ ತಂಡಕ್ಕೆ ವೇಗಿ ಕಗಿಸೊ ರಬಾಡ ಅವರು ಅಲಭ್ಯರಾಗಿದ್ದಾರೆ. ಲುಂಗಿ ಎನ್‌ಗಿಡಿ ಅವರು ಕಣಕ್ಕಿಳಿಯಬಹುದು.
ಉಭಯ ತಂಡಗಳೂ ಈಶಾನ್ಯ ಭಾರತದ ಈ ಊರಿನಲ್ಲಿ ನಡೆಯುತ್ತಿರುವ ಚೊಚ್ಚಲ ಟೆಸ್ಟ್‌ನಲ್ಲಿ ಗೆಲುವಿನ ಇತಿಹಾಸ ಬರೆಯುವ ಒತ್ತಡದಲ್ಲಿವೆ.
ಪಂದ್ಯ ಆರಂಭ: ಬೆಳಿಗ್ಗೆ 9
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.