
ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ
ಪಿಟಿಐ ಚಿತ್ರ
ಜೋಹಾನೆಸ್ ಬರ್ಗ್: ನಾಯಕ ತೆಂಬಾ ಬವುಮ ಅವರು ಭಾರತ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯನ್ನು ಆಡುವ ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳಿದ್ದಾರೆ. ಅವರು ಮೀನಖಂಡದ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ.
ನವೆಂಬರ್ 14ರಂದು ಮೊದಲ ಟೆಸ್ಟ್ ಪಂದ್ಯ ಕೋಲ್ಕತ್ತದಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಪಂದ್ಯದ ತಾಣವಾದ ಗುವಾಹಟಿಯ ಅಸ್ಸಾಂ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣವು ಮೊದಲ ಬಾರಿ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಇಲ್ಲಿ 22ರಿಂದ ಪಂದ್ಯ ನಡೆಯಲಿದೆ.
ಪಾಕಿಸ್ತಾನ ವಿರುದ್ಧ ಇತ್ತೀಚೆಗೆ ನಡೆದಿದ್ದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬವುಮಾ ಅವರು ಗಾಯಾಳಾಗಿದ್ದ ಕಾರಣ ಆಡಿರಲಿಲ್ಲ. ಅವರಿಗಾಗಿ ಈಗ ಬ್ಯಾಟರ್ ಡೇವಿಡ್ ಬೆಡಿಂಗಮ್ ಸ್ಥಾನ ತೆರವು ಮಾಡಿದ್ದಾರೆ.
ಈ ಟೆಸ್ಟ್ ಸರಣಿಗೆ ಮೊದಲು ಭಾರತ ‘ಎ’ ವಿರುದ್ಧ ನ.2 ರಿಂದ ನಡೆಯುವ ಟೆಸ್ಟ್ ಸರಣಿಯಲ್ಲೂ ಬವುಮಾ ಆಡಲಿದ್ದಾರೆ. ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ಈ ಸರಣಿ ಮೂಲಕ ‘ಎ’ ತಂಡದ ಮೂಲಕ ಪುನರಾಗಮನ ಮಾಡುತ್ತಿದ್ದಾರೆ.
ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ಮೂವರು ಸ್ಪಿನ್ನರ್‌ಗಳಿಗೆ ಅವಕಾಶ ನೀಡಿದೆ. ಸೈಮನ್ ಹರ್ಮರ್, ಕೇಶವ ಮಹಾರಾಜ್ ಮತ್ತು ಸೆನುರಾನ್ ಮುತ್ತುಸಾಮಿ ತಂಡದಲ್ಲಿದ್ದಾರೆ. ಈ ಬೌಲರ್‌ಗಳು ಪಾಕ್ ನೆಲದಲ್ಲಿ ಪರಿಣಾಮಕಾರಿಯಾಗಿದ್ದರು.
15 ಮಂದಿಯ ತಂಡ ಕೆಳಕಂಡಂತೆ ಇದೆ:
ತೆಂಬಾ ಬವುಮ (ನಾಯಕ), ಏಡನ್ ಮರ್ಕರಂ, ರಯಾನ್ ರಿಕೆಲ್ಟನ್ ಟ್ರಿಸ್ಟನ್ ಸ್ಟಬ್ಸ್, ಕೈಲ್ ವೇರಿಯನ್, ಡೆವಾಲ್ಡ್ ಬ್ರೆವಿಸ್, ಜುಬೇರ್ ಹಂಝ, ಟೋನಿ ಡಿ ಝೋರ್ಜಿ, ಕಾರ್ಬಿನ್ ಬಾಷ್, ವಿಯಾನ್ ಮುಲ್ಡರ್, ಮಾರ್ಕೊ ಯಾನ್ಸನ್, ಕೇಶವ ಮಹಾರಾಜ್, ಸೆನುರಾನ್ ಮುತ್ತುಸಾಮಿ, ಕಗಿಸೊ ರಬಾಡ ಮತ್ತು ಸೈಮನ್ ಹರ್ಮರ್.
ವೇಳಾಪಟ್ಟಿ:
ನವೆಂಬರ್ 14–18: ಕೋಲ್ಕತ್ತ
ನವೆಂಬರ್ 22–26: ಗುವಾಹಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.