ADVERTISEMENT

IND vs AFG 3RD T20: ಎರಡು ಸೂಪರ್ ಓವರ್ ಕಂಡ ಪಂದ್ಯದಲ್ಲಿ ಗೆದ್ದ ಭಾರತಕ್ಕೆ ಸರಣಿ

ಪಿಟಿಐ
Published 17 ಜನವರಿ 2024, 18:27 IST
Last Updated 17 ಜನವರಿ 2024, 18:27 IST
   

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ಅಫ್ಗಾನಿಸ್ತಾನ ವಿರುದ್ಧ ನಡೆದ 3ನೇ ಟಿ20 ಪಂದ್ಯದಲ್ಲೂ ಜಯ ಗಳಿಸುವ ಮೂಲಕ ಭಾರತ ತಂಡ 3–0ರಿಂದ ಸರಣಿ ಗೆದ್ದಿದೆ.

ಎರಡು ಸೂಪರ್ ಓವರ್ ಕಂಡ ಈ ಪಂದ್ಯದಲ್ಲಿ ಕ್ರಿಕೆಟ್‌ ಲೋಕದಲ್ಲಿ ಹದಿವಯದ ತಂಡವಾಗಿರುವ ಅಫ್ಗಾನಿಸ್ತಾನ ದಿಟ್ಟ ಹೋರಾಟದಿಂದ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿತು. ಆತಿಥೇಯ ಭಾರತ ಕೂಡ ಛಲದ ಆಟವಾಡಿತು.

ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 212 ರನ್‌ ಗಳಿಸಿತು. ರೋಹಿತ್ ಶರ್ಮಾ ಅಜೇಯ ಶತಕ ದಾಖಲಿಸಿದರು. ರಿಂಕು ಸಿಂಗ್ ಅಜೇಯ ಅರ್ಧಶತಕ ಹೊಡೆದರು. ಆದರೆ ದಿಟ್ಟ ತಿರುಗೇಟು ನೀಡಿದ ಅಫ್ಗನ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 212 ರನ್‌ ಗಳಿಸಿ ಟೈ ಮಾಡಿಕೊಂಡಿತು.ಕ್ರೀಡಾಂಗಣದಲ್ಲಿ ಸೇರಿದ್ದ 23 ಸಾವಿರ ಪ್ರೇಕ್ಷಕರು ರೋಚಕತೆಯ ರಸದೌತಣ ಸವಿದರು.

ADVERTISEMENT

ನಂತರ ನಡೆದ ಸೂಪರ್‌ ಓವರ್‌ನಲ್ಲಿ ಅಫ್ಗನ್ ತಂಡವು 16 ರನ್‌ ಗಳಿಸಿತು. ಆದರೆ ಭಾರತ ತಂಡವು 17 ರನ್‌ ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಇದು ಕೂಡ ಸಮಬಲವಾಯಿತು. ನಂತರ ಎರಡನೇ ಸೂಪರ್ ಓವರ್‌ ಘೋಷಿಸಲಾಯಿತು. ಬ್ಯಾಟಿಂಗ್ ಮಾಡಿದ ಭಾರತ ತಂಡ 11 ರನ್ ಕಲೆ ಹಾಕಿತು. ಗುರಿ ಬೆನ್ನತ್ತಿದ ಅಫ್ಗಾನಿಸ್ತಾನ 1 ರನ್‌ಗೆ ರನ್ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.

22 ರಿಂದ 212 ರನ್

ಭಾರತ ತಂಡವು 22 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಅಫ್ಗನ್ ಬೌಲರ್ ಫರೀದ್ ಅಹಮ‌ದ್ (20ಕ್ಕೆ3) ಅವರ ಬೌಲಿಂಗ್ ಮುಂದೆ ಅಗ್ರಕ್ರಮಾಂಕ ಕುಸಿಯಿತು. ಯಶಸ್ವಿ ಜೈಸ್ವಾಲ್ ನಾಲ್ಕು ರನ್ ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ ಮತ್ತು ಸಂಜು ಸ್ಯಾಮ್ಸನ್ ಖಾತೆ ತೆರೆಯದೇ ನಿರ್ಗಮಿಸಿದರು.

ಆದರೆ ಈ ಸಂದರ್ಭದಲ್ಲಿ ಕ್ರೀಸ್‌ನಲ್ಲಿದ್ದ ನಾಯಕ ರೋಹಿತ್ ಅವರೊಂದಿಗೆ ಸೇರಿಕೊಂಡ ರಿಂಕು ಸಿಂಗ್ ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ 190 ರನ್‌ ಗಳಿಸಿದರು. ರೋಹಿತ್ (ಅಜೇಯ 121; 69ಎ, 4X11, 6X8) ಟಿ20 ಕ್ರಿಕೆಟ್ ಮಾದರಿಯಲ್ಲಿ ಐದು ವರ್ಷಗಳ ನಂತರ ತಮ್ಮ ಖಾತೆಗೆ ಶತಕ ಸೇರಿಸಿಕೊಂಡರು. ಚುಟುಕು ಮಾದರಿಯಲ್ಲಿ ಇದು ಅವರ ಐದನೇ ಶತಕ.

ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದ ರೋಹಿತ್ ಇಲ್ಲಿ ಎಚ್ಚರಿಕೆಯಿಂದ ಆಟ ಆರಂಭಿಸಿದರು. ತಾವೆದುರಿಸಿದ ಏಳನೇ ಎಸೆತದಲ್ಲಿ ಅವರು ಒಂದು ರನ್ ಗಳಿಸಿದರು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಒಂದು ಬೌಂಡರಿ ಗಳಿಸಿದರು. ಮೊದಲ ಓವರ್‌ನಲ್ಲಿ ಅವರು ಹೊಡೆತಕ್ಕೆ ಯತ್ನಿಸಿದ ಎರಡು ಎಸೆತಗಳಲ್ಲಿ ಚೆಂಡು ಪ್ಯಾಡ್‌ ಸವರಿ ಬೌಂಡರಿಗೆರೆ ದಾಟಿದವು. ಅದರಿಂದಾಗಿ ಆ ಎಂಟೂ ರನ್‌ಗಳು ಲೆಗ್‌ಬೈ ಖಾತೆ ಸೇರಿದವು.

ಇನಿಂಗ್ಸ್‌ನ ಮೊದಲ ಹತ್ತು ಓವರ್‌ಗಳಲ್ಲಿ ಭಾರತ ತಂಡವು ನಾಲ್ಕು ವಿಕೆಟ್‌ಗಳಿಗೆ 61 ರನ್‌ ಮಾತ್ರ ಗಳಿಸಿತ್ತು. ನಂತರದ ಹತ್ತು ಓವರ್‌ಗಳಲ್ಲಿ ರೋಹಿತ್ ಮತ್ತು ರಿಂಕು ರನ್‌ ಹೊಳೆ ಹರಿಸಿದರು. ಅದರಲ್ಲಿ ರಿಂಕು ಪಾಲು 69 ರನ್‌ಗಳು. ಅದರಲ್ಲೂ ಕೊನೆಯ ಓವರ್‌ನಲ್ಲಿ 36 ರನ್‌ಗಳು ಹರಿದುಬಂದವು. ಈ ಓವರ್‌ನಲ್ಲಿ ಒಟ್ಟು ಐದು ಸಿಕ್ಸರ್‌ಗಳು ಸಿಡಿದವು. ಇದರಲ್ಲಿ ಒಂದು ಫ್ರೀಹಿಟ್ ಕೂಡ ಇತ್ತು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 212 (ರೋಹಿತ್ ಶರ್ಮಾ ಔಟಾಗದೆ 121, ರಿಂಕು ಸಿಂಗ್ ಔಟಾಗದೆ 69, ಫರೀದ್ ಅಹಮದ್ 20ಕ್ಕೆ3) ಅಫ್ಗಾನಿಸ್ತಾನ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 212 (ರೆಹಮಾನುಲ್ಲಾ ಗುರ್ಬಾಜ್ 50, ಇಬ್ರಾಹಿಂ ಝದ್ರಾನ್ 50, ಗುಲ್ಬದೀನ್ ನೈಬ್ ಔಟಾಗದೆ 55, ಮೊಹಮ್ಮದ್ ನಬಿ 34, ವಾಷಿಂಗ್ಟನ್ ಸುಂದರ್ 18ಕ್ಕೆ3)

ಕೊಹ್ಲಿ ಗೋಲ್ಡನ್ ಡಕ್; ಕ್ರೀಡಾಂಗಣ ಸ್ತಬ್ಧ

ಎಡಗೈ ವೇಗಿ ಫರೀದ್ ಅಹಮದ್ ಹಾಕಿದ ಮೂರನೇ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರು ಮೊಹಮ್ಮದ್ ನಬಿ ಪಡೆದ ಕ್ಯಾಚ್‌ಗೆ ನಿರ್ಗಮಿಸಿದರು. ಆಗ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮ ಅಲೆಯಾಯಿತು. ಏಕೆಂದರೆ ಅಭಿಮಾನಿಗಳ ನೆಚ್ಚಿನ ವಿರಾಟ್ ಕೊಹ್ಲಿ ಬ್ಯಾಟಿಂಗ್‌ ಬಂದರು.

ಇಡೀ ಕ್ರೀಡಾಂಗಣದಲ್ಲಿ ಕೇಕೆ, ಚಪ್ಪಾಳೆಗಳ ಸದ್ದಿನಿಂದ ತುಂಬಿತು. ಕೊಹ್ಲಿ..ಕೊಹ್ಲಿ.. ಕೂಗು ಪ್ರತಿಧ್ವನಿಸಿತು. ಆದರೆ ಎದುರಿಸಿದ ಮೊದಲ ಎಸೆತದಲ್ಲಿ ನೇರವಾಗಿ ಸಿಕ್ಸರ್‌ ಎತ್ತುವ ವಿರಾಟ್ ಪ್ರಯತ್ನ ಫಲಿಸಲಿಲ್ಲ.

ಮಿಡ್‌ಆಫ್‌ನಲ್ಲಿದ್ದ ನಬಿ ಓಡಿ ಬಂದು ಕ್ಯಾಚ್ ಪಡೆದರು. ಚಿನ್ನಸ್ವಾಮಿ ಕ್ರೀಡಾಂಗಣ ಸ್ತಬ್ಧವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.