ADVERTISEMENT

IND vs ENG: ಜೈಸ್ವಾಲ್, ರಾಹುಲ್, ಜಡೇಜ ಫಿಫ್ಟಿ; ಭಾರತ 421/7

​ಪ್ರಜಾವಾಣಿ ವಾರ್ತೆ
Published 26 ಜನವರಿ 2024, 8:59 IST
Last Updated 26 ಜನವರಿ 2024, 8:59 IST
<div class="paragraphs"><p>ರವೀಂದ್ರ ಜಡೇಜ ಹಾಗೂ ಅಕ್ಷರ್ ಪಟೇಲ್</p></div>

ರವೀಂದ್ರ ಜಡೇಜ ಹಾಗೂ ಅಕ್ಷರ್ ಪಟೇಲ್

   

(ರಾಯಿಟರ್ಸ್ ಚಿತ್ರ)

ಹೈದರಾಬಾದ್: ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ರವೀಂದ್ರ ಜಡೇಜ ಅವರ ಅರ್ಧಶತಕಗಳ ಬಲದಿಂದ ಭಾರತ ತಂಡವು ಇಂಗ್ಲೆಂಡ್ ಎದುರಿನ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮುನ್ನಡೆ ಸಾಧಿಸಿದೆ.

ADVERTISEMENT

ಉಪ್ಪಳದ ರಾಜೀವಗಾಂಧಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ ಭಾರತ  ತಂಡವು 175 ರನ್‌ಗಳ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್‌ ತಂಡವು ಗಳಿಸಿದ್ದ 246 ರನ್‌ಗಳಿಗೆ ಉತ್ತರವಾಗಿ ಆತಿಥೇಯ ತಂಡವು 110 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 421 ರನ್ ಗಳಿಸಿದೆ. ಜಡೇಜ (ಬ್ಯಾಟಿಂಗ್ 81; 155ಎ, 4X7, 6X2) ಮತ್ತು ಅಕ್ಷರ್ ಪಟೇಲ್ (ಬ್ಯಾಟಿಂಗ್ 35; 62ಎ, 4X5, 6X1) ಕ್ರೀಸ್‌ನಲ್ಲಿದ್ದಾರೆ. ಮೂರು ಮಹತ್ವದ ಜೊತೆಯಾಟಗಳಲ್ಲಿ ಭಾಗಿಯಾದ ಜಡೇಜ, ತಂಡವು ಉತ್ತಮ ಸ್ಥಿತಿ ತಲುಪಲು ಕಾರಣರಾದರು. ಅವರು ಬೌಲಿಂಗ್‌ನಲ್ಲಿಯೂ ಮಿಂಚಿದ್ದರು.

ಪಂದ್ಯದ ಮೊದಲ ದಿನದಾಟವಾದ ಗುರುವಾರದ ಮುಕ್ತಾಯಕ್ಕೆ ಭಾರತ ತಂಡವು 1 ವಿಕೆಟ್‌ಗೆ 119 ರನ್ ಗಳಿಸಿತ್ತು.  ಎರಡನೇ ದಿನ ಬೆಳಿಗ್ಗೆ ಆಟ ಮುಂದುವರಿಸಿದ ಯಶಸ್ವಿ ಜೈಸ್ವಾಲ್ ಅವರಿಗೆ ಶತಕ ಗಳಿಸುವ ಆಸೆ ಈಡೇರಲಿಲ್ಲ. 80 ರನ್‌ ಗಳಿಸಿದ ಅವರು ಜೋ ರೂಟ್ ಬೌಲಿಂಗ್‌ನಲ್ಲಿ ಔಟಾದರು. ಹತ್ತು ಓವರ್‌ಗಳ ನಂತರ ಶುಭಮನ್ ಗಿಲ್ ಕೂಡ ಔಟಾದರು.

ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಕೆ.ಎಲ್. ರಾಹುಲ್ (86; 123ಎ, 4X8, 6X2) ಮತ್ತು ಶ್ರೇಯಸ್ ಅಯ್ಯರ್ (35; 63ಎ) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 64 ರನ್‌ ಸೇರಿಸಿದರು.  ಅದರಲ್ಲೂ ರಾಹುಲ್ ಸುಂದರವಾದ ಹೊಡೆತಗಳ ಮೂಲಕ ಕಣ್ಮನ ಸೆಳೆದರು. 

50ನೇ ಟೆಸ್ಟ್ ಆಡುತ್ತಿರುವ ರಾಹುಲ್ 14ನೇ ಅರ್ಧಶತಕವನ್ನು 72 ಎಸೆತಗಳಲ್ಲಿ ಪೂರೈಸಿದರು. ಊಟದ ವಿರಾಮದ ನಂತರ ಶ್ರೇಯಸ್ ವಿಕೆಟ್ ಗಳಿಸಿದ ರೆಹಾನ್ ಅಹಮದ್ ಜೊತೆಯಾಟವನ್ನು ಮುರಿದರು.

ರಾಹುಲ್ –ಜಡೇಜ ಜೊತೆಯಾಟ: ಶ್ರೇಯಸ್ ನಿರ್ಗಮನದ ನಂತರ ಕ್ರೀಸ್‌ಗೆ ಬಂದ ರವೀಂದ್ರ ಜಡೇಜ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು. ತಮ್ಮ ಎಂದಿನ ಆಕ್ರಮಣಶೈಲಿಗೆ ಕಡಿವಾಣ ಹಾಕಿ ರಾಹುಲ್ ಜೊತೆಗೆ ಇನಿಂಗ್ಸ್‌ ಬೆಳೆಸಿದರು. ಇದರಿಂದಾಗಿ ಐದನೇ ವಿಕೆಟ್ ಜೊತೆಯಾಟದಲ್ಲಿ 65 ರನ್‌ಗಳು ಸೇರಿದವು. ಶತಕದತ್ತ ಸಾಗಿದ್ದ ರಾಹುಲ್ ಅವರ ವಿಕೆಟ್ ಗಳಿಸಿದ ಟಾಮ್ ಹಾರ್ಟ್ಲಿ ಜೊತೆಯಾಟವನ್ನೂ ಮುರಿದರು.

ಆದರೆ ಕ್ರೀಸ್‌ನಲ್ಲಿ ಗಟ್ಟಿಯಾಗಿದ್ದ ಜಡೇಜ ಮಾತ್ರ ಎಲ್ಲ ಬೌಲರ್‌ಗಳಿಗೂ ಕಠಿಣ ಸವಾಲೊಡ್ಡಿದರು. ಒಂದು ಹಂತದಲ್ಲಿ ಇಂಗ್ಲೆಂಡ್ ಬೌಲರ್‌ಗಳು ಜಡೇಜ ಅವರನ್ನು ಕಟ್ಟಿಹಾಕುವ ಯತ್ನದಲ್ಲಿ ಲೈನ್ ಮತ್ತು ಲೆಂಗ್ತ್ ಕೂಡ ಕಳೆದುಕೊಂಡು ಬಸವಳಿದರು. ಆದರೆ ಶಾಂತಚಿತ್ತರಾಗಿ ಬ್ಯಾಟಿಂಗ್ ಮಾಡಿದ 35 ವರ್ಷದ ಆಲ್‌ರೌಂಡರ್ ಜಡೇಜ 84 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅದರಲ್ಲಿ ಎರಡು ಸಿಕ್ಸರ್ ಮತ್ತು ಐದು ಬೌಂಡರಿ ಇದ್ದವು.

ಅವರು ಭರತ್ (35; 62ಎ) ಅವರೊಂದಿಗೆ ಜಡೇಜ ಆರನೇ ವಿಕೆಟ್ ಜೊತೆಯಾಟದಲ್ಲಿ 68 ರನ್‌ಗಳನ್ನು ಸೇರಿಸಿದರು. ಭರತ್ ವಿಕೆಟ್ ಗಳಿಸಿದ ರೂಟ್ ಜೊತೆಯಾಟವನ್ನು ಮುರಿದರು. ಆರ್. ಅಶ್ವಿನ್ ಕೇವಲ ಒಂದು ರನ್ ಗಳಿಸಿ ರನ್‌ಔಟ್ ಆದರು.

ಜಡೇಜ ಜೊತೆಗೂಡಿದ ಆಲ್‌ರೌಂಡರ್ ಅಕ್ಷರ್ ಅವರು ವಿಕೆಟ್ ಪತನ ತಡೆದರು.  ಮುರಿಯದ  ಎಂಟನೇ ವಿಕೆಟ್ ಜೊತೆಯಾಟದಲ್ಲಿ 63 ರನ್‌ ಸೇರಿಸಿದರು.  

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್

  • ಇಂಗ್ಲೆಂಡ್: 64.3 ಓವರ್‌ಗಳಲ್ಲಿ 246

  • ಭಾರತ: 110 ಓವರ್‌ಗಳಲ್ಲಿ 7 ವಿಕೆಟ್‌ಗೆ 421 (ಗುರುವಾರ 1 ವಿಕೆಟ್‌ಗೆ 119) (ಯಶಸ್ವಿ ಜೈಸ್ವಾಲ್‌ 80, ಶುಭಮನ್‌ ಗಿಲ್‌ 23, ಕೆ.ಎಲ್‌. ರಾಹುಲ್‌ 86, ಶ್ರೇಯಸ್‌ ಅಯ್ಯರ್‌ 35, ರವೀಂದ್ರ ಜಡೇಜ ಔಟಾಗದೆ 81, ಕೆ.ಎಸ್‌. ಭರತ್‌ 41, ಅಕ್ಷರ್ ಪಟೇಲ್ ಔಟಾಗದೆ 35; ಟಾಮ್ ಹಾರ್ಟ್ಲಿ 131ಕ್ಕೆ 2, ಜೋ ರೂಟ್ 77ಕ್ಕೆ 2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.