ADVERTISEMENT

ದೀಪಕ್ ಹೂಡಾ ಶತಕ: ಐರ್ಲೆಂಡ್ ವಿರುದ್ಧ ಭಾರತಕ್ಕೆ ಟಿ–20 ಸರಣಿ ಜಯ

ಟಿ20: ಐರ್ಲೆಂಡ್‌ಗೆ ವೀರೋಚಿತ ಸೋಲು

ಪಿಟಿಐ
Published 29 ಜೂನ್ 2022, 5:49 IST
Last Updated 29 ಜೂನ್ 2022, 5:49 IST
ದೀಪಕ್‌ ಹೂಡಾ –ಎಎಫ್‌ಪಿ ಚಿತ್ರ
ದೀಪಕ್‌ ಹೂಡಾ –ಎಎಫ್‌ಪಿ ಚಿತ್ರ   

ಡಬ್ಲಿನ್: ದೀಪಕ್‌ ಹೂಡಾ ಅವರ ಬಿರುಸಿನ ಶತಕ (104) ಮತ್ತು ಸಂಜು ಸ್ಯಾಮ್ಸನ್ (77) ಅಬ್ಬರದ ಅರ್ಧಶತಕ ನೆರವಿನಿಂದ ಭಾರತ ತಂಡ ಎರಡನೇ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ 4 ರನ್‌ಗಳ ರೋಚಕ ಜಯ ಸಾಧಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ, 20 ಓವರ್‌ಗಳಲ್ಲಿ 7 ವಿಕೆಟ್‌ಗೆ 225 ರನ್‌ ಕಲೆಹಾಕಿತು. ಪ್ರಬಲ ಪೈಪೋಟಿ ನೀಡಿದ ಐರ್ಲೆಂಡ್ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ಗೆ 221 ರನ್‌ ಗಳಿಸಿತು. ಎರಡು ಪಂದ್ಯಗಳ ಸರಣಿಯನ್ನು ಭಾರತ 2–0 ರಲ್ಲಿ ಜಯಿಸಿತು.

ಕಠಿಣ ಗುರಿ ಬೆನ್ನಟ್ಟಿದ ಐರ್ಲೆಂಡ್‌, ಕೊನೆಯವರೆಗೂ ಗೆಲುವಿಗಾಗಿ ಹೋರಾಟ ನಡೆಸಿತು. ಅಂತಿಮ ಓವರ್‌ನಲ್ಲಿ 17 ರನ್‌ಗಳು ಬೇಕಿದ್ದವು. ಉಮ್ರನ್‌ ಮಲಿಕ್‌ 12 ರನ್‌ ಬಿಟ್ಟುಕೊಟ್ಟು ಭಾರತ ನಿಟ್ಟುಸಿರು ಬಿಡುವಂತೆ ಮಾಡಿದರು.

ADVERTISEMENT

ಹೂಡಾ ಅಬ್ಬರದ ಆಟ: ಇದಕ್ಕೂ ಮುನ್ನ ಭಾರತ ತಂಡ, ಹೂಡಾ ಶತಕದ ನೆರವಿನಿಂದ ಉತ್ತಮ ಮೊತ್ತ ಪೇರಿಸಿತು. ಎರಡನೇ ವಿಕೆಟ್‌ಗೆ ಜತೆಯಾದ ಹೂಡಾ ಮತ್ತು ಸ್ಯಾಮ್ಸನ್‌ ದಾಖಲೆಯ 176 ರನ್‌ ಸೇರಿಸಿದರು. ಟಿ20 ಪಂದ್ಯದಲ್ಲಿ ಭಾರತದ ಪರ ದಾಖಲಾದ ಅತಿದೊಡ್ಡ ಜತೆಯಾಟ ಇದು.

57 ಎಸೆತಗಳನ್ನು ಎದುರಿಸಿದ ಹೂಡಾ 9 ಬೌಂಡರಿ, 6 ಸಿಕ್ಸರ್‌ ಗಳಿಸಿದರು. ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಶತಕ ಗಳಿಸಿದ ಭಾರತದ 4ನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್: ಭಾರತ 7ಕ್ಕೆ 225 (20 ಓವರ್) ಸಂಜು ಸ್ಯಾಮ್ಸನ್‌ 77, ದೀಪಕ್‌ ಹೂಡಾ 104, ಸೂರ್ಯಕುಮಾರ್‌ ಯಾದವ್ 15, ಮಾರ್ಕ್‌ ಅಡೇರ್‌ 42ಕ್ಕೆ 3, ಜೋಸ್‌ ಲಿಟ್ಲ್‌ 38ಕ್ಕೆ 2) ಐರ್ಲೆಂಡ್‌: 5ಕ್ಕೆ 221 (20 ಓವರ್) ಪೌಲ್‌ ಸ್ಟರ್ಲಿಂಗ್‌ 40, ಆ್ಯಂಡಿ ಬಾಲ್ಬರ್ನಿ 60, ಹ್ಯಾರಿ ಟೆಕ್ಟರ್‌ 39, ಜಾರ್ಜ್‌ ಡಾಕ್ರೆಲ್ ಔಟಾಗದೆ 34, ರವಿ ಬಿಷ್ಣೋಯ್‌ 41ಕ್ಕೆ 1, ಉಮ್ರನ್‌ ಮಲಿಕ್ 42ಕ್ಕೆ 1

ಫಲಿತಾಂಶ: ಭಾರತಕ್ಕೆ 4 ರನ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.