ದಂಬುಲಾ (ಪಿಟಿಐ): ಶಫಾಲಿ ವರ್ಮಾ ಅವರ ಬಿರುಸಿನ ಬ್ಯಾಟಿಂಗ್ ಮತ್ತು ದೀಪ್ತಿ ಶರ್ಮಾ ಅವರ ಸ್ಪಿನ್ ಮೋಡಿಯ ಬಲದಿಂದ ಭಾರತ ಮಹಿಳಾ ತಂಡವು ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ನೇಪಾಳ ವಿರುದ್ಧ ಸುಲಭ ಜಯ ಸಾಧಿಸಿತು.
ರಣಗಿರಿ ದಂಬುಲಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡವು 82 ರನ್‌ಗಳಿಂದ ಜಯಿಸಿತು. ಇದರೊಂದಿಗೆ ಗುಂಪಿನ ಎಲ್ಲ ಮೂರು ಪಂದ್ಯಗಳನ್ನೂ ಜಯಿಸಿ ಸೆಮಿಫೈನಲ್‌ಗೆ ಸಾಗಿತು.
ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಶಫಾಲಿ (81; 48ಎ, 4X12, 6X1) ಮತ್ತು ಹೇಮಲತಾ ದಯಾಳನ್ (47; 42ಎ, 4X5, 6X1) ಮೊದಲ ವಿಕೆಟ್ ಜೊತೆಯಾಟದಲ್ಲಿ 122 ರನ್ ಸೇರಿಸಿದರು. ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 178 ರನ್ ಗಳಿಸಿತು. ಶಫಾಲಿ ಮತ್ತು ಹೇಮಲತಾ ಅವರು ಹಾಕಿದ ಗಟ್ಟಿ ಅಡಿಪಾಯದ ಮೇಲೆ 200ಕ್ಕಿಂತಲೂ ಹೆಚ್ಚು ರನ್‌ಗಳು ಸೇರುವ ನಿರೀಕ್ಷೆ ಇತ್ತು. ಆದರೆ, ನೇಪಾಳದ ಎಡಗೈ ಬೌಲರ್ ಸೀತಾ ರಾಣಾ ಮಗರ್ ಅವರು 14 ಹಾಗೂ 16ನೇ ಓವರ್‌ನಲ್ಲಿ ಕ್ರಮವಾಗಿ ಹೇಮಲತಾ ಮತ್ತು ಶಫಾಲಿ ಅವರ ವಿಕೆಟ್ ಗಳಿಸಿದರು.
ಸಜನಾ (10; 12ಎ) ಅವರು ಹೆಚ್ಚು ಹೊತ್ತು ನಿಲ್ಲದಂತೆ ಕಬಿತಾ ಜೋಶಿ ಎಲ್‌ಬಿಡಬ್ಲ್ಯು ಬಲೆ ಬೀಸಿದರು. ಇದರಿಂದಾಗಿ ರನ್ ವೇಗ ಕಡಿಮೆಯಾಯಿತು. ಜೆಮಿಮಾ ರಾಡ್ರಿಗಸ್15 ಎಸೆತಗಳಲ್ಲಿ 28 ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಗುರಿ ಬೆನ್ನಟ್ಟದ ನೇಪಾಳ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 96 ರನ್ ಗಳಿಸಿತು. ಸೀತಾ ರಾಣಾ ಮಗರ್ ಅವರು (18 ರನ್) ತಮ್ಮ ತಂಡದ ಪರ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆದರು. ರುಬಿನಾ ಚೆಟ್ರಿ ಅವರು ಒಂದು ಸಿಕ್ಸರ್ ಸಹಿತ 15 ರನ್ ಗಳಿಸಿದರು. ಭಾರತ ತಂಡದ ಅನುಭವಿ ಬೌಲರ್‌ಗಳ ಎದುರು ಸಂಪೂರ್ಣ 20 ಓವರ್‌ಗಳನ್ನು ಆಡಿದ್ದು ನೇಪಾಳ ತಂಡದ ಹೆಗ್ಗಳಿಕೆ ಎನಿಸಿತು.
ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 178 (ಶಫಾಲಿ ವರ್ಮಾ 81, ಹೇಮಲತಾ ದಯಾಳನ್ 47, ಜಿಮಿಮಾ ರಾಡ್ರಿಗಸ್ ಔಟಾಗದೆ 28, ಸೀತಾ ರಾಣಾ ಮಗರ್ 25ಕ್ಕೆ2) ನೇಪಾಳ: 20 ಓವರ್‌ಗಳಲ್ಲಿ 9ಕ್ಕೆ 96 (ಸೀತಾ ರಾಣಾ ಮಗರ್ 18, ರುಬಿನಾ ಚೆಟ್ರಿ 15, ಬಿಂದು ರಾವಳ್ ಔಟಾಗದೆ 17, ಇಂದೂ ಬರ್ಮಾ 14, ಅರುಂಧತಿ ರೆಡ್ಡಿ 28ಕ್ಕೆ2, ದೀಪ್ತಿ ಶರ್ಮಾ 10ಕ್ಕೆ3, ರಾಧಾ ಯಾದವ್ 12ಕ್ಕೆ2) ಫಲಿತಾಂಶ: ಭಾರತ ತಂಡಕ್ಕೆ 82 ರನ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.