ADVERTISEMENT

ನಾಲ್ಕರ ಘಟ್ಟಕ್ಕೆ ಭಾರತ ಲಗ್ಗೆ

ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿ: ಶೆಫಾಲಿ ವರ್ಮಾ ಬಿರುಸಿನ ಬ್ಯಾಟಿಂಗ್‌

ಪಿಟಿಐ
Published 27 ಫೆಬ್ರುವರಿ 2020, 19:09 IST
Last Updated 27 ಫೆಬ್ರುವರಿ 2020, 19:09 IST
ಭಾರತದ ಶೆಫಾಲಿ ವರ್ಮಾ ಬ್ಯಾಟಿಂಗ್‌ ವೈಖರಿ –ಪಿಟಿಐ ಚಿತ್ರ
ಭಾರತದ ಶೆಫಾಲಿ ವರ್ಮಾ ಬ್ಯಾಟಿಂಗ್‌ ವೈಖರಿ –ಪಿಟಿಐ ಚಿತ್ರ   

ಮೆಲ್ಬರ್ನ್: ‘ಹರಿಯಾಣದ ಹುಡುಗಿ’ ಶೆಫಾಲಿ ವರ್ಮಾ ಕೇವಲ ನಾಲ್ಕು ರನ್‌ಗಳ ಅಂತರದಿಂದ ಅರ್ಧ ಶತಕ ತಪ್ಪಿಸಿಕೊಂಡರು. ಆದರೆ, ಭಾರತ ತಂಡವು ಮಹಿಳೆಯರ ಟಿ20 ವಿಶ್ವಕಪ್‌ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಕಾರಣರಾದರು.

ಗುರುವಾರ ಜಂಕ್ಷನ್‌ ಓವಲ್‌ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ ತಂಡವು 3 ರನ್‌ಗಳಿಂದ ನ್ಯೂಜಿಲೆಂಡ್ ವಿರುದ್ಧ ಜಯಿಸಿತು. ಗುಂಪಿನಲ್ಲಿ ‘ಹ್ಯಾಟ್ರಿಕ್‌’ ಜಯದ ಸಾಧನೆಯೊಂದಿಗೆ ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿತು.

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡದ ಬ್ಯಾಟಿಂಗ್ ದೌರ್ಬಲ್ಯ ಮತ್ತೊಮ್ಮೆ ಅನಾವರಣಗೊಂಡಿತು. ಆರಂಭಿಕ ಆಟಗಾರ್ತಿ ಶೆಫಾಲಿ (46; 34ಎಸೆತ, 4ಬೌಂಡರಿ, 3ಸಿಕ್ಸರ್) ಮತ್ತು ತಾನಿಯಾ ಭಾಟಿಯಾ (23;25ಎ, 3ಬೌಂ) ಅವರಿಬ್ಬರ ಹೋರಾಟದ ಫಲವಾಗಿ ಭಾರತ ತಂಡವು 20 ಓವರ್‌ ಗಳಲ್ಲಿ 8 ವಿಕೆಟ್‌ಗಳಿಗೆ 133 ರನ್‌ ಗಳಿಸಿತು.

ADVERTISEMENT

ಕಿವೀಸ್ ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್‌ವುಮನ್‌ಗಳು ಕಾಲೂರದಂತೆ ನೋಡಿಕೊಂಡ ಬೌಲರ್‌ಗಳ ಸಂಘಟಿತ ಪ್ರಯತ್ನವು ಭಾರತದ ರೋಚಕ ಜಯಕ್ಕೆ ಕಾರಣವಾಯಿತು. ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 6ಕ್ಕೆ 130 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಸೋಫಿ ಡಿವೈನ್ ನಾಯಕತ್ವದ ತಂಡವು ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಜಯಿಸಿತ್ತು. ಅದರಲ್ಲಿ ಮಿಂಚಿದ್ದ ಸೋಫಿ ಈ ಪಂದ್ಯದಲ್ಲಿ ಬೇಗನೆ ಔಟಾದರು. 14 ರನ್‌ ಗಳಿಸಿದ ಅವರನ್ನು ಪೆವಿಲಿಯನ್‌ಗೆ ಕಳಿಸುವಲ್ಲಿ ಲೆಗ್‌ಸ್ಪಿನ್ನರ್ ಪೂನಂ ಯಾದವ್ ಯಶಸ್ವಿಯಾದರು. ರಚೆಲ್ ಪ್ರೀಸ್ಟ್ (12) ಮತ್ತು ಸೂಜಿ ಬೇಟ್ಸ್‌ (6) ಅವರೂ ಕೂಡ ಬೇಗನೆ ಔಟಾಗಿದ್ದು ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು.

ಆದರೆ, ಮಧ್ಯಮ ಕ್ರಮಾಂಕದ ಆಟ ಗಾರ್ತಿಯರಾದ ಮ್ಯಾಡಿ ಗ್ರೀನ್ (24; 23ಎ), ಕೇಟಿ ಮಾರ್ಟಿನ್ (25; 28ಎ) ಮತ್ತು ಅಮೇಲಿಯಾ ಕೆರ್ (ಔಟಾಗದೆ 34; 19ಎ, 6ಬೌಂ) ತಮ್ಮ ತಂಡವನ್ನು ಜಯದ ಗೆರೆಯತ್ತ ಕೊಂಡೊಯ್ದರು. ಆದರೆ, ತಂಡದ ಜಯಕ್ಕೆ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಮೂರು ರನ್‌ಗಳ ಅಗತ್ಯವಿದ್ದ ಸಂದರ್ಭದಲ್ಲಿ ಶಿಖಾ ಪಾಂಡೆ ಚುರುಕಿನ ಆಟಕ್ಕೆ ಹೀಲಿ ಜೆನ್ಸೆನ್ (11 ರನ್) ರನ್‌ಔಟ್ ಆದರು. ಇದರಿಂದಾಗಿ ಜಯದ ಕೊನೆಯ ಅವಕಾಶ ಕೈತಪ್ಪಿತು.

ಶೆಫಾಲಿ ಮಿಂಚು: ಹದಿನಾರು ವರ್ಷದ ಶೆಫಾಲಿ ಜೊತೆಗೆ ಅನುಭವಿ ಆಟಗಾರ್ತಿ ಸ್ಮೃತಿ ಮಂದಾನ ಇನಿಂಗ್ಸ್ ಆರಂಭಿಸಿದರು. ಎರಡನೇ ಪಂದ್ಯದಲ್ಲಿ ಸ್ಮೃತಿ ಜ್ವರದಿಂದಾಗಿ ಆಡಿರಲಿಲ್ಲ. ಆದರೆ ಇಲ್ಲಿ ಅವರು ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ಎಡವಿದರು. ಕೇವಲ 11 ರನ್‌ ಗಳಿಸಿದ ಅವರು ತಹುಹು ಬೌಲಿಂಗ್‌ನಲ್ಲಿ ಕ್ಲೀನ್‌ಬೌಲ್ಡ್ ಆದರು.

ಜೆಮಿಮಾ ರಾಡ್ರಿಗಸ್ (10) ಕೂಡ ಹೆಚ್ಚು ಹೊತ್ತು ಇರಲಿಲ್ಲ. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಬ್ಯಾಟಿಂಗ್ ವೈಫಲ್ಯ ಮುಂದುರಿಯಿತು. ದೀಪ್ತಿ ಶರ್ಮಾ ಮತ್ತು ವೇದಾ ಕೃಷ್ಣಮೂರ್ತಿ ಕೂಡ ಎರಡಂಕಿ ಮುಟ್ಟಲಿಲ್ಲ.

ಶಿಖಾ ಪಾಂಡೆ (ಔಟಾಗದೆ 10) ಮತ್ತು ರಾಧಾ ಯಾದವ್ (14ರನ್) ಮಹತ್ವದ ಕಾಣಿಕೆ ನೀಡಿದರು. ಭಾರತ ತಂಡವು ಇನ್ನೊಂದು ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಲಿದೆ.

ಸ್ಕೋರು

ಭಾರತ

8ಕ್ಕೆ133 (20 ಓವರ್‌ಗಳಲ್ಲಿ)

ಶೆಫಾಲಿ ವರ್ಮಾ ಸಿ ಹೀಲಿ ಜೆನ್ಸೆನ್ ಬಿ ಅಮೇಲಿಯಾ ಕೆರ್ 46

ಸ್ಮೃತಿ ಮಂದಾನ ಬಿ ಲೀ ತಹುಹು 11

ತಾನಿಯಾ ಭಾಟಿಯಾ ಸಿ ಅಮೇಲಿಯಾ ಕೆರ್ ಬಿ ರೋಸ್‌ಮೆರಿ ಮೇರ್ 23

ಜೆಮಿಮಾ ರಾಡ್ರಿಗಸ್ ಸಿ ಅಮೇಲಿಯಾ ಕೆರ್ ಬಿ ರೋಸ್‌ಮೆರಿ ಮೇರ್ 10

ಹರ್ಮನ್‌ಪ್ರೀತ್ ಕೌರ್ ಸಿ ಮತ್ತು ಬಿ ಲೀ ಕ್ಯಾಸ್ಪರೆಕ್ 01

ದೀಪ್ತಿ ಶರ್ಮಾ ಸಿ ಹೀಲಿ ಜೆನ್ಸೆನ್ ಬಿ ಸೋಫಿ ಡಿವೈನ್ 08

ವೇದಾ ಕೃಷ್ಣಮೂರ್ತಿ ಎಲ್‌ಬಿಡಬ್ಲ್ಯು ಬಿ ಅಮೇಲಿಯಾ ಕೆರ್ 06

ಶಿಖಾ ಪಾಂಡೆ ಔಟಾಗದೆ 10

ರಾಧಾ ಯಾದವ್ ರನ್‌ಔಟ್ (ಕಾಸ್ಪರೆಕ್/ಪ್ರೀಸ್ಟ್) 14

ಇತರೆ: 4 (ಲೆಗ್‌ಬೈ 1, ವೈಡ್‌ 3)

ವಿಕೆಟ್ ಪತನ: 1–17 (ಸ್ಮೃತಿ; 2.2), 2–68 (ತಾನಿಯಾ;9.1), 3–80 (ಜೆಮಿಮಾ;11.1), 4–93 (ಹರ್ಮನ್‌ಪ್ರೀತ್;12.6), 5–95 (ಶೆಫಾಲಿ;13.5), 6–104 (ವೇದಾ;15.3), 7–111 (ದೀಪ್ತಿ; 17.1), 8–133 (ರಾಧಾ; 19.6)

ಬೌಲಿಂಗ್

ಲೀ ತಹುಹು 2–0–14–1 (ವೈಡ್ 1), ರೋಸ್‌ಮೆರಿ ಮೇರ್ 3–0–27–2, ಸೋಫಿ ಡಿವೈನ್ 2–0–12–1 (ವೈಡ್ 1), ಅನ್ನಾ ಪೀಟರ್ಸನ್ 2–0–19–0, ಹೀಲಿ ಜೆನ್ಸೆನ್ 3–0–20–0, ಅಮೇಲಿಯಾ ಕೆರ್ 4–0–21–2, ಲೀಗ್ ಕ್ಯಾಸ್ಪೆರೆಕ್ 4–0–19–1 (ವೈಡ್ 1).

ನ್ಯೂಜಿಲೆಂಡ್

6ಕ್ಕೆ130 (20 ಓವರ್‌ಗಳಲ್ಲಿ)

ರಚೆಲ್ ಪ್ರೀಸ್ಟ್ ಸಿ ರಾಧಾ ಯಾದವ್ ಬಿ ಶಿಖಾ ಪಾಂಡೆ 12

ಸೋಫಿ ಡಿವೈನ್ ಸಿ ರಾಧಾ ಯಾದವ್ ಬಿ ಪೂನಂ ಯಾದವ್ 14

ಸೂಜಿ ಬೇಟ್ಸ್ ಬಿ ದೀಪ್ತಿ ಶರ್ಮಾ 06

ಮ್ಯಾಡಿ ಗ್ರೀನ್ ಸಿ ತಾನಿಯಾ ಭಾಟಿಯಾ ಬಿ ರಾಜೇಶ್ವರಿ ಗಾಯಕವಾಡ್ 24

ಕೇಟಿ ಮಾರ್ಟಿನ್ ಸಿ ಜೆಮಿಮಾ ರಾಡ್ರಿಗಸ್ ಬಿ ರಾಧಾ ಯಾದವ್ 25

ಅಮೇಲಿಯಾ ಕೆರ್ ಔಟಾಗದೆ 34

ಹೀಲಿ ಜೆನ್ಸೆನ್ ರನ್‌ಔಟ್ (ಶಿಖಾ ಪಾಂಡೆ) 11

ಇತರೆ: 4 (ಲೆಗ್‌ಬೈ 3, ವೈಡ್ 1)

ವಿಕೆಟ್ ಪತನ: 1–13 (ರಚೆಲ್;1.4), 2–30 (ಸೂಜಿ;5.4), 3–34 (ಸೋಫಿ;8.1), 4–77 (ಗ್ರೀನ್;14.2), 5–90 (ಕೇಟಿ;16.3), 6–130 (ಹೀಲಿ;19.6)

ಬೌಲಿಂಗ್

ದೀಪ್ತಿ ಶರ್ಮಾ 4–0–27–1, ಶಿಖಾ ಪಾಂಡೆ 4–0–21–1, ರಾಜೇಶ್ವರಿ ಗಾಯಕವಾಡ್ 4–0–22–1, ಪೂನಂ ಯಾದವ್ 4–0–32–1, ರಾಧಾ ಯಾದವ್ 4–0–25–1 (ವೈಡ್ 1)

ಫಲಿತಾಂಶ: ಭಾರತ ತಂಡಕ್ಕೆ 3 ರನ್‌ಗಳಿಂದ ಜಯ

ಪಂದ್ಯ ಆಟಗಾರ್ತಿ: ಶೆಫಾಲಿ ವರ್ಮಾ

ಮುಂದಿನ ಪಂದ್ಯ: ಭಾರತ–ಶ್ರೀಲಂಕಾ (ಫೆ. 29)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.