ADVERTISEMENT

India vs South Africa | ರೋಚಕ ಘಟ್ಟದಲ್ಲಿ ಸೆಂಚುರಿಯನ್ ಟೆಸ್ಟ್

ಡೀನ್ ಎಲ್ಗರ್ ಅರ್ಧಶತಕ: ಜಸ್‌ಪ್ರೀತ್ ಬೂಮ್ರಾ ಮಿಂಚು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 20:37 IST
Last Updated 29 ಡಿಸೆಂಬರ್ 2021, 20:37 IST
   

ಸೆಂಚುರಿಯನ್: ಸೂಪರ್ ಸ್ಪೋರ್ಟ್ ಪಾರ್ಕ್‌ ಕ್ರೀಡಾಂಗಣದತ್ತ ಈಗ ಕ್ರಿಕೆಟ್‌ಪ್ರೇಮಿಗಳ ಕುತೂಹಲದ ದೃಷ್ಟಿ ನೆಟ್ಟಿದೆ.

ಏಕೆಂದರೆಇಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಮೊದಲ ಟೆಸ್ಟ್ ರೋಚಕ ಘಟ್ಟ ತಲುಪಿದೆ. ಪಂದ್ಯದ ಕೊನೆಯ ದಿನವಾದ ಗುರುವಾರ 305 ರನ್‌ಗಳ ಗುರಿ ಬೆನ್ನತ್ತಿರುವ ಆತಿಥೇಯ ತಂಡವು, ಕೊನೆಯ ದಿನದಂದು ಇನ್ನೂ 211 ರನ್‌ಗಳನ್ನು ಗಳಿಸಿದರೆ ಜಯಿಸುವ ಅವಕಾಶ ಇದೆ.

ಆದರೆ ಬೌಲರ್‌ಗಳಿಗೆ ನೆರವು ನೀಡುತ್ತಿರುವ ಪಿಚ್‌ನಲ್ಲಿ ಭಾರತ ತಂಡವು ಆರು ವಿಕೆಟ್‌ಗಳನ್ನು ಕಿತ್ತು ಬುಟ್ಟಿಗೆ ಹಾಕಿಕೊಂಡರೆ ಜಯದ ಕೇಕೆ ಹಾಕಬಹುದು. ಜಸ್‌ಪ್ರೀತ್ ಬೂಮ್ರಾ (22ಕ್ಕೆ2), ಮೊಹಮ್ಮದ್ ಶಮಿ (29ಕ್ಕೆ1) ಮತ್ತು ಮೊಹಮ್ಮದ್ ಸಿರಾಜ್ (25ಕ್ಕೆ1) ಉತ್ತಮ ಬೌಲಿಂಗ್ ಮಾಡಿರುವುದರಿಂದ ಪ್ರವಾಸಿ ತಂಡದ ಆತ್ಮವಿಶ್ವಾಸ ಇಮ್ಮಡಿಸಿದೆ.

ADVERTISEMENT

ನಾಲ್ಕನೇ ದಿನದಾಟದ ಮುಕ್ತಾಯಕ್ಕೆ ಆತಿಥೇಯ ತಂಡವು 40.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 94 ರನ್ ಗಳಿಸಿದೆ. ಕ್ರೀಸ್‌ನಲ್ಲಿರುವ ನಾಯಕ ಡೀನ್ ಎಲ್ಗರ್ (ಬ್ಯಾಟಿಂಗ್ 52; 122ಎ) ಹಾಗೂ ಬ್ಯಾಟಿಂಗ್‌ಗೆ ಬರಬೇಕಿರುವ ತೆಂಬಾ ಬವುಮಾ ಮತ್ತು ಕ್ವಿಂಟನ್ ಡಿ ಕಾಕ್ ಅವರತ್ತ ಈಗ ದಕ್ಷಿಣ ಆಫ್ರಿಕಾ ಅಭಿಮಾನಿಗಳ ನಿರೀಕ್ಷೆಯ ನೋಟ ಇದೆ.

ರನ್‌ಗಳಿಕೆಗೆ ಹರಸಾಹಸ: ವೇಗಿಗಳ ಸ್ವರ್ಗದಂತಿರುವ ಪಿಚ್‌ನಲ್ಲಿ ಬ್ಯಾಟರ್‌ಗಳು ರನ್‌ ಗಳಿಸಲು ಹರಸಾಹಸ ಪಡಬೇಕಾಯಿತು. ಕಗಿಸೊ ರಬಾಡ (42ಕ್ಕೆ4) ಮತ್ತು ಮಾರ್ಕೊ ಜೇಸನ್ (55ಕ್ಕೆ4) ಅವರ ಮೊನಚಾದ ದಾಳಿಯ ಮುಂದೆ ಭಾರತದ ಬ್ಯಾಟರ್‌ಗಳು ರನ್‌ ಗಳಿಸಲು ಬಹಳಷ್ಟು ಶ್ರಮಪಡಬೇಕಾಯಿತು. ಇದರಿಂದಾಗಿ ತಂಡವು ಎರಡನೇ ಇನಿಂಗ್ಸ್‌ನಲ್ಲಿ 50.3 ಓವರ್‌ಗಳಲ್ಲಿ 174 ರನ್‌ಗಳನ್ನು ಗಳಿಸಿತು.

ರಾಹುಲ್ (23) ಮತ್ತು ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ (34; 34ಎಸೆತ) ಅವರಿಬ್ಬರೇ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ಗಳಾದರು.ವಿರಾಟ್ ಬಳಗವು ಮೊದಲ ಇನಿಂಗ್ಸ್‌ ನಲ್ಲಿ 130 ರನ್‌ಗಳ ಮುನ್ನಡೆ ಪಡೆದಿತ್ತು. ಆದ್ದರಿಂದ ಮೂನ್ನುರಕ್ಕೂ ಹೆಚ್ಚು ರನ್‌ಗಳ ಗುರಿಯೊಡ್ಡಲು ಸಾಧ್ಯವಾಯಿತು.

ಡೀನ್ ಎಲ್ಗರ್ ಅರ್ಧಶತಕ: ಭಾರತದ ಬೌಲರ್‌ಗಳ ಚಾಣಾಕ್ಷ ಬೌಲಿಂಗ್‌ ಮುಂದೆ ಒಂದು ಕಡೆ ವಿಕೆಟ್‌ಗಳು ಪತನವಾಗುತ್ತಿದ್ದರೂ ನಾಯಕ ಡೀನ್ ಎಲ್ಗರ್ ತಾಳ್ಮೆಯಿಂದ ಆಡಿದರು. ಅರ್ಧಶತಕ ಬಾರಿಸಿ, ಕ್ರೀಸ್‌ನಲ್ಲಿ ಉಳಿದರು.

ಇನಿಂಗ್ಸ್‌ನ ಎರಡನೇ ಓವರ್‌ನಲ್ಲಿಯೇ ಮೊಹಮ್ಮದ್ ಶಮಿಯ ಸ್ವಿಂಗ್‌ ಎಸೆತಕ್ಕೆ ಏಡನ್ ಮಾರ್ಕರಮ್ ಕ್ಲೀನ್‌ಬೌಲ್ಡ್‌ ಆದರು. 15ನೇ ಓವರ್‌ನಲ್ಲಿ ಕೀಗನ್ ಪೀಟರ್ಸನ್‌ ಅವರು ಸಿರಾಜ್ ಎಸೆತವನ್ನು ಕೆಣಕಿ ರಿಷಭ್ ಪಂತ್‌ಗೆ ಕ್ಯಾಚ್ ಆದರು.

ಡೀನ್ ಜೊತೆಗೆ ಉತ್ತಮ ಜೊತೆಯಾಟ ಕುದುರಿಸಿದ್ದ ರಸಿ ವ್ಯಾನ್‌ ಡರ್ ಡಸೆ 37ನೇ ಓವರ್‌ನಲ್ಲಿ ಬೂಮ್ರಾ ಇನ್‌ಸ್ವಿಂಗರ್‌ ಎಸೆತವನ್ನು ಅಂದಾಜಿಸುವಲ್ಲಿ ತಪ್ಪಿದರು. ಆಘಾತ ಅನುಭವಿಸಿದರು. ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಬೂಮ್ರಾ ಹಾಕಿದ ಯಾರ್ಕರ್‌ಗೆ ರಾತ್ರಿಕಾವಲುಗಾರ ಕೇಶವ್ ಮಹಾರಾಜ್ ಅವರ ವಿಕೆಟ್ ಉರುಳಿತು.

ಆದರೆ ಇದೆಲ್ಲದರ ನಡುವೆಯೂ ಡೀನ್ ಚೆಂದದ ಬ್ಯಾಟಿಂಗ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.