ಬೆಂಗಳೂರು: ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಅಂಗವಿಕಲರ (ಕಾಲಿನ ನ್ಯೂನತೆಯಿದ್ದವರ) ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯು ಕುಂಬಳಗೋಡಿನ ಕಿಣಿ ಸ್ಪೋರ್ಟ್ಸ್ ಅರೇನಾದಲ್ಲಿ ಮಂಗಳವಾರ ಆರಂಭವಾಗಲಿದೆ.
ಭಿನ್ನ ಸಾಮರ್ಥ್ಯದ ಭಾರತ ಕ್ರಿಕೆಟ್ ಮಂಡಳಿ (ಡಿಸಿಸಿಐ) ಮತ್ತು ವಿಲ್‌ಸ್ಪೋಕ್ ಸ್ಪೋರ್ಟ್ಸ್ ಅಂಡ್ ಎಂಟರ್ಟೈನ್‌ಮೆಂಟ್ ಸಂಸ್ಥೆಯ ಆಶ್ರಯದಲ್ಲಿ ಮೊದಲ ಬಾರಿಗೆ ಭಾರತ–ಲಂಕಾ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಯೋಜಿಸಲಾಗಿದೆ. ಏಪ್ರಿಲ್ 29, 30, ಮೇ 2, 3 ಮತ್ತು 5ರಂದು ಬೆಳಿಗ್ಗೆ 9ರಿಂದ 12.30ರವರೆಗೆ ಪಂದ್ಯಗಳು ನಡೆಯಲಿವೆ.
‘ಕೊಲಂಬೊದಲ್ಲಿ ಜನವರಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ ಸೇರಿದಂತೆ ಐದು ತಂಡಗಳು ಸೆಣಸಾಟ ನಡೆಸಿತ್ತು. ಈ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು. ಅದೇ ಆತ್ಮವಿಶ್ವಾಸದಲ್ಲಿ ಭಾರತ ತಂಡವು ಕಣಕ್ಕೆ ಇಳಿಯಲಿದ್ದು, ಸರಣಿ ಗೆಲ್ಲುವ ವಿಶ್ವಾಸವಿದೆ. ರಾಷ್ಟ್ರೀಯ ಜೆರ್ಸಿಯಲ್ಲಿ ಆಡುವುದೇ ಹೆಮ್ಮೆಯ ಕ್ಷಣ’ ಎಂದು ಭಾರತ ತಂಡದ ನಾಯಕ ರವೀಂದ್ರ ಸಾಂಟೆ ಸೋಮವಾರ ಮಾಧ್ಯಮ ಸಂವಾದದಲ್ಲಿ ತಿಳಿಸಿದರು.
‘ಉತ್ತಮ ತರಬೇತಿಯೊಂದಿಗೆ ನಮ್ಮ ತಂಡವು ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ. ಸರಣಿಯನ್ನು ಗೆಲ್ಲಲು ಪ್ರಯತ್ನಿಸುತ್ತೇವೆ’ ಎಂದು ಲಂಕಾ ತಂಡದ ನಾಯಕ ಪಿ.ಆರ್.ಶಾಂತೊ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.