ADVERTISEMENT

ಭಾರತ – ವೆಸ್ಟ್ ಇಂಡೀಸ್ ನಡುವಣ ಎರಡನೇ ಏಕದಿನ ಕ್ರಿಕೆಟ್ ಪಂದ್ಯ ಇಂದು

ವಿಂಡೀಸ್ ಬಳಗಕ್ಕೆ ವಿರಾಟ್ ಭಯ!

ಪಿಟಿಐ
Published 23 ಅಕ್ಟೋಬರ್ 2018, 20:15 IST
Last Updated 23 ಅಕ್ಟೋಬರ್ 2018, 20:15 IST
ವಿಶಾಖಪಟ್ಟಣದಲ್ಲಿ ಮಂಗಳವಾರ ಭಾರತದ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜ ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ
ವಿಶಾಖಪಟ್ಟಣದಲ್ಲಿ ಮಂಗಳವಾರ ಭಾರತದ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜ ಅಭ್ಯಾಸ ನಡೆಸಿದರು –ಎಎಫ್‌ಪಿ ಚಿತ್ರ   

ವಿಶಾಖಪಟ್ಟಣ: ಯಾವುದೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಮೂನ್ನೂರಕ್ಕೂ ಹೆಚ್ಚು ರನ್‌ಗಳ ಮೊತ್ತದ ಗುರಿ ಸಾಧಿಸುವುದು ಸವಾಲಿನ ಕೆಲಸ. ಆದರೆ, 322 ರನ್‌ಗಳ ಸವಾಲನ್ನು ಪಂದ್ಯದಲ್ಲಿ ಇನ್ನೂ 47 ಎಸೆತಗಳು ಬಾಕಿಯಿರುವಾಗಲೇ ತಲುಪಿದರೆ ಗುರಿ ಕೊಟ್ಟವರ ಎದೆಯಲ್ಲಿ ನಡುಕ ಹುಟ್ಟುವುದು ಸಹಜ.

ನಾಲ್ಕು ದಿನಗಳ ಹಿಂದೆ ಗುವಾಹಟಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಅಬ್ಬರದ ಶತಕಗಳಿಂದಾಗಿ ಬೆಟ್ಟದಂತ ಗುರಿ ಮಂಜಿನಂತೆ ಕರಗಿ ಹೋಗಿತ್ತು. ಅದರಲ್ಲೂ ವಿರಾಟ್ ಮಾಡಿದ ನಿರ್ಭೀತ ಬ್ಯಾಟಿಂಗ್‌ ಎದುರಾಳಿಗಳ ನಿದ್ದೆಗೆಡಿಸಿದ್ದು ಸುಳ್ಳಲ್ಲ. ಬುಧವಾರ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್‌ ಬಳಗಕ್ಕೆ ಕಡಿವಾಣ ಹಾಕುವುದು ಹೇಗೆ ಎಂಬ ಚಿಂತೆಯಲ್ಲಿ ವಿಂಡೀಸ್ ಇದೆ.

ಏಕೆಂದರೆ, ಮೊದಲ ಪಂದ್ಯದಲ್ಲಿ ಭಾರತದ ಬೌಲರ್‌ಗಳ ತಂತ್ರಗಾರಿಕೆಯನ್ನು ವಿಫಲಗೊಳಿಸಿದ್ದ ಶಿಮ್ರೊನ್ ಹೆಟ್ಮೆಯರ್ ಅಮೋಘ ಶತಕ ಬಾರಿಸಿದ್ದರು. ಅದರ ಬಲದಿಂದ ದೊಡ್ಡ ಮೊತ್ತವನ್ನೂ ತಂಡ ಗಳಿಸಿತ್ತು. ಗುರಿ ಬೆನ್ನತ್ತಿದ ಭಾರತ ತಂಡದ ಮೊದಲ ವಿಕೆಟ್‌ (ಶಿಖರ್ ಧವನ್) ಅನ್ನು ವಿಂಡೀಸ್ ಬೌಲರ್‌ಗಳು ಬೇಗನೇ ಕಬಳಿಸಿದ್ದರು. ಆದರೆ, ಆಮೇಲೆ ವಿರಾಟ್ ಪ್ರಹಾರಕ್ಕೆ ವಿಂಡೀಸ್ ಆಟಗಾರರ ಬೆವರಿಳಿದಿತ್ತು.

ADVERTISEMENT

ಇನ್ನೊಂದೆಡೆ ರೋಹಿತ್ ಶರ್ಮಾ ತಮ್ಮ ‘ಹಿಟ್‌ ಮ್ಯಾನ್’ ಖ್ಯಾತಿಗೆ ತಕ್ಕಂತೆ ಫೀಲ್ಡರ್‌ಗಳ ತಲೆ ಮೇಲಿಂದಲೇ ಚೆಂಡನ್ನು ಬೌಂಡರಿಯತ್ತ ಕಳಿಸಿದ್ದರು. ವಿರಾಟ್ ಆಟ ಬಿಸಿಗಾಳಿಯ ಅನುಭವ ನೀಡಿದರೆ, ರೋಹಿತ್ ಆಟ ಹಿಮಗಾಳಿಯಂತೆ ಮೈ ಕೊರೆದಿತ್ತು. ಇವೆರಡರ ನಡುವೆ ವಿಂಡೀಸ್ ಬಸವಳಿದಿತ್ತು.

ಎರಡನೇ ಪಂದ್ಯದಲ್ಲಿ ತಂಡದಲ್ಲಿ ಯಾವುದೇ ಬದಲಾವಣೆಗೆ ಕೈಹಾಕುವ ಯೋಚನೆ ಭಾರತಕ್ಕಿದ್ದಂತಿಲ್ಲ. ಆದರೆ ವಿಶಾಖಪಟ್ಟಣದಲ್ಲಿ ಸ್ಪಿನ್ನರ್‌ ಸ್ನೇಹಿ ಪಿಚ್‌ ಇರುವುದರಿಂದ ಮೂವರು ಸ್ಪಿನ್ನರ್ ಮತ್ತು ಇಬ್ಬರು ಮಧ್ಯಮವೇಗಿಗಳು ಕಣಕ್ಕಿಳಿಯಬಹುದು. ಮೊದಲ ಪಂದ್ಯದ ಆರಂಭದಲ್ಲಿ ವಿಕೆಟ್‌ ಕಬಳಿಸಿದ್ದ ಬೌಲರ್‌ಗಳು ನಂತರ ಬಹಳಷ್ಟು ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಈ ಲೋಪ ತಿದ್ದಿಕೊಂಡು ಕಣಕ್ಕಿಳಿಯಲು ಬೌಲಿಂಗ್ ಕೋಚ್ ಭರತ್ ಅರುಣ್ ಕೆಲವು ಕಸರತ್ತುಗಳನ್ನು ಮಂಗಳವಾರದ ಅಭ್ಯಾಸದಲ್ಲಿ ಮಾಡಿಸಿದರು. ಹೋದ ವರ್ಷ ಇಲ್ಲಿ ನಡೆದಿದ್ದ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ಶಿಖರ್ ಲಯಕ್ಕೆ ಮರಳುವ ನಿರೀಕ್ಷೆ ಇದೆ. ಅಂಬಟಿ ರಾಯುಡು, ಮನೀಷ್ ಪಾಂಡೆ, ರಿಷಭ್ ಪಂತ್, ಮಹೇಂದ್ರಸಿಂಗ್ ಧೋನಿ ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಆಡುವ ಸಮರ್ಥರು.

ಆದರೆ, ವಿಂಡೀಸ್ ತಂಡದಲ್ಲಿ ಮೇಲಿನ ಕ್ರಮಾಂಕದ ಬ್ಯಾಟಿಂಗ್‌ಗಳು ನಿರಂತರವಾಗಿ ಉತ್ತಮ ಲಯ ಕಾಪಾಡಿಕೊಳ್ಳುತ್ತಿಲ್ಲ. ಕೀರನ್ ಪೊವೆಲ್, ಶಿಮ್ರೊನ್, ಶಾಯ್ ಹೋಪ್ ಮತ್ತು ಜೇಸನ್ ಹೋಲ್ಡರ್ ಅವರು ಮಾತ್ರ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ಆದರೆ, ಚಂದ್ರಪಾಲ್ ಹೇಮರಾಜ್, ಮರ್ಲಾನ್ ಸ್ಯಾಮುಯೆಲ್ಸ್‌ ತಂಡದ ನಿರೀಕ್ಷೆಗೆ ತಕ್ಕಂತೆ ಆಡಬೇಕಿದೆ. ಕೆಮರ್ ರೊಚ್, ಆ್ಯಷ್ಲೆ ನರ್ಸ್, ಒಷೇನ್ ಥಾಮಸ್ ಅವರು ಬೌಲಿಂಗ್‌ನಲ್ಲಿ ಬಿಗಿ ಕಾಪಾಡಿಕೊಂಡರೆ ಭಾರತದ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವುದು ಸುಲಭವಾಗಲಿದೆ.

ತಂಡಗಳು ಇಂತಿವೆ

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಟಿ ರಾಯುಡು, ಮನೀಷ್ ಪಾಂಡೆ, ಮಹೇಂದ್ರಸಿಂಗ್ ಧೋನಿ, ರಿಷಭ್ ಪಂತ್, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಖಲೀಲ್ ಅಹಮದ್, ಉಮೇಶ್ ಯಾದವ್, ಕೆ.ಎಲ್. ರಾಹುಲ್.

ವೆಸ್ಟ್ ಇಂಡೀಸ್: ಜೇಸನ್ ಹೋಲ್ಡರ್ (ನಾಯಕ), ಫ್ಯಾಬಿಯಾನ್ ಅಲೆನ್, ಸುನಿಲ್ ಆ್ಯಂಬ್ರಿಸ್, ದೇವೆಂದ್ರ ಬಿಷೂ, ಚಂದ್ರಪಾಲ್ ಹೇಮರಾಜ್, ಶಿಮ್ರೊನ್ ಹೆಟ್ಮೆಯರ್, ಶಾಯ್ ಹೋಪ್, ಅಲ್ಜರಿ ಜೋಸೆಫ್, ಆ್ಯಷ್ಲೆ ನರ್ಸ್, ಕೀಮೊ ಪಾಲ್. ರೋಮನ್ ಪೊವೆಲ್, ಕೆಮರ್ ರೊಚ್, ಮರ್ಲಾನ್ ಸ್ಯಾಮುಯೆಲ್ಸ್‌, ಒಷೇನ್ ಥಾಮಸ್.

ಅಂಪೈರ್: ಇಯಾನ್ ಗೌಲ್ಡ್(ಇಂಗ್ಲೆಂಡ್), ನಂದನ್ (ಭಾರತ), ಕಾಯ್ದಿಟ್ಟ ಅಂಪೈರ್: ನಿತಿನ್ ಮೆನನ್ (ಭಾರತ), ಟಿ.ವಿ. ಅಂಪೈರ್: ಪಾಲ್ ವಿಲ್ಸನ್ (ಆಸ್ಟ್ರೇಲಿಯಾ), ರೆಫರಿ: ಕ್ರಿಸ್ ಬ್ರಾಡ್ (ಇಂಗ್ಲೆಂಡ್)

ಹತ್ತು ಸಾವಿರ ರನ್ ಸನಿಹ ವಿರಾಟ್ ಕೊಹ್ಲಿ

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಮಹತ್ವದ ದಾಖಲೆ ಯೊಂದನ್ನು ಬರೆಯಲು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಿದ್ಧರಾಗಿದ್ದಾರೆ. ಅವರು ಇನ್ನು 81 ರನ್‌ ಗಳಿಸಿದರೆ ಒಟ್ಟು 10 ಸಾವಿರ ರನ್‌ ಗಳಿಸಿದ ಆಟಗಾರರ ಕ್ಲಬ್‌ನಲ್ಲಿ ಸ್ಥಾನ ಪಡೆಯುವರು.

ಒಟ್ಟು 212 ಪಂದ್ಯಗಳನ್ನು ಆಡಿರುವ ಅವರು 9919 ರನ್‌ಗಳನ್ನು ಗಳಿಸಿದ್ದಾರೆ. 36 ಶತಕ, 48 ಅರ್ಧಶತಕಗಳು ಅವರ ಖಾತೆಯಲ್ಲಿವೆ. 92.51 ಸ್ಟ್ರೈಕ್‌ರೇಟ್‌ನಲ್ಲಿ ಅವರು ಬ್ಯಾಟಿಂಗ್ ಮಾಡಿದ್ದಾರೆ.

ಬುಧವಾರದ ಪಂದ್ಯದಲ್ಲಿ ಅವರು ಈ ಮೈಲುಗಲ್ಲು ತಲುಪಿದರೆ, ಅತ್ಯಂತ ವೇಗವಾಗಿ (ಕಡಿಮೆ ಪಂದ್ಯಗಳಲ್ಲಿ) ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ. ಸಚಿನ್ ತೆಂಡೂಲ್ಕರ್ 266 ಪಂದ್ಯಗಳಲ್ಲಿ ಮಾಡಿದ್ದ ದಾಖಲೆಯನ್ನು ವಿರಾಟ್ ಮೀರಿ ನಿಲ್ಲಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.