ADVERTISEMENT

ಶಿಮ್ರೊನ್–ಹೋಪ್ ಶತಕ; ಭಾರತಕ್ಕೆ ಆಘಾತ

ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಶತಕದ ಜೊತೆಯಾಟ ವ್ಯರ್ಥ; ವಿಂಡೀಸ್ ವಿಜಯ

ಪಿಟಿಐ
Published 15 ಡಿಸೆಂಬರ್ 2019, 20:09 IST
Last Updated 15 ಡಿಸೆಂಬರ್ 2019, 20:09 IST
ಅರ್ಧಶತಕ ಗಳಿಸಿದ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್‌ –ಎಎಫ್‌ಪಿ ಚಿತ್ರ
ಅರ್ಧಶತಕ ಗಳಿಸಿದ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್‌ –ಎಎಫ್‌ಪಿ ಚಿತ್ರ   

ಚೆನ್ನೈ: ವೆಸ್ಟ್ ಇಂಡೀಸ್‌ನ ಶಾಯ್ ಹೋಪ್ ಮತ್ತು ಶಿಮ್ರೊನ್ ಹೆಟ್ಮೆಯರ್ ಅವರ ಶತಕಗಳ ರಭಸಕ್ಕೆ ಭಾರತ ತಂಡದ ಗೆಲುವಿನ ಕನಸು ಕೊಚ್ಚಿಹೋಯಿತು.

ಭಾನುವಾರ ಚೆಪಾಕ್ ಅಂಗಳದಲ್ಲಿ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು 8 ವಿಕೆಟ್‌ಗಳಿಂದ ಜಯಭೇರಿ ಬಾರಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಪಡೆಯಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್ ತಂಡವು ಭಾರತ ತಂಡವನ್ನು 287 ರನ್‌ಗಳಿಗೆ ನಿಯಂತ್ರಿಸಿತು.

ಗುರಿ ಬೆನ್ನಟ್ಟಿದ ಪ್ರವಾಸಿ ತಂಡವು ಶಾಯ್ ಹೋಪ್ (ಔಟಾಗದೆ 102; 151ಎ, 7ಬೌಂ, 1ಸಿ) ಮತ್ತು ಶಿಮ್ರೊನ್ ಹೆಟ್ಮೆಯರ್ (139;106ಎ, 11ಬೌಂ, 7ಸಿ) ಅವರ ಅಬ್ಬರದ ಆಟದಿಂದ ಇನ್ನೂ 13 ಎಸೆತಗಳು ಬಾಕಿಯಿರುವಂತೆಯೇ ಜಯಿಸಿತು. 47.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 291 ರನ್ ಗಳಿಸಿತು. ಆತಿಥೇಯ ಬೌಲರ್‌ಗಳ ಮೊನಚಿಲ್ಲದ ದಾಳಿ ಮತ್ತು 35ನೇ ಓವರ್‌ನಲ್ಲಿ ಶಿಮ್ರೊನ್‌ ಕ್ಯಾಚ್ ಅನ್ನು ಶ್ರೇಯಸ್ ಅಯ್ಯರ್ ಕೈಚೆಲ್ಲಿದ್ದು ದುಬಾರಿಯಾದವು. ಭುವನೇಶ್ವರ್ ಕುಮಾರ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ಅನುಪಸ್ಥಿತಿ ಕಾಡಿತು.

ADVERTISEMENT

ಮೊಹಮ್ಮದ್ ಶಮಿ, ದೀಪಕ್ ಚಾಹರ್ ತಲಾ ಒಂದು ವಿಕೆಟ್ ಪಡೆದರು. ಆದರೆ ಉಳಿದ ಬೌಲರ್‌ಗಳಿಂದ ನಿರೀಕ್ಷಿತ ಫಲಿತಾಂಶ ಹೊರಹೊಮ್ಮಲಿಲ್ಲ. 41ನೇ ಏಕದಿನ ಪಂದ್ಯವನ್ನಾಡಿದ ಶಿಮ್ರೊನ್ ಐದನೇ ಶತಕ ಮತ್ತು ಶಾಯ್ ಹೋಪ್ ಎಂಟನೇ ಶತಕ ದಾಖಲಿಸಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಇವರಿಬ್ಬರೂ 218 ರನ್‌ಗಳಿಂದಾಗಿ ವಿಂಡೀಸ್ ಜಯಸುಲಭವಾಯಿತು.

ರಿಷಭ್–ಶ್ರೇಯಸ್ ಜೊತೆಯಾಟ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಮಹೇಂದ್ರಸಿಂಗ್ ಧೋನಿಗೆ ಚೆಪಾಕ್ ಕ್ರೀಡಾಂಗಣ ‘ತವರಿನ ಅಂಗಳ’ ಇದ್ದಂತೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಧೋನಿ ಸ್ಥಾನ ತುಂಬಲು ಹರಸಾಹಸ ಪಡುತ್ತಿರುವ ರಿಷಭ್ ಪಂತ್ ಅದೇ ಅಂಗಳದಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ರಿಷಭ್ (71; 69ಎಸೆತ, 7ಬೌಂಡರಿ ಮತ್ತು 1ಸಿಕ್ಸರ್) ಅವರು ಶ್ರೇಯಸ್ ಅಯ್ಯರ್ (70; 88ಎ, 5ಬೌಂ, 1ಸಿ) ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ ಪೇರಿಸಿದ 114 ರನ್‌ಗಳು ಭಾರತ ತಂಡಕ್ಕೆ ಹೋರಾಟದ ಶಕ್ತಿ ತುಂಬಿದವು. ಸತತ ವೈಫಲ್ಯ ಅನುಭವಿಸಿ ಟೀಕೆಗಳಿಗೆ ಗುರಿಯಾಗಿದ್ದ ರಿಷಭ್ ಭವಿಷ್ಯಕ್ಕೆ ಆಶಾಕಿರಣ ಮೂಡಿಸಿದ ಇನಿಂಗ್ಸ್ ಕೂಡ ಇದಾಯಿತು.

ಇನಿಂಗ್ಸ್‌ನ ಏಳನೇ ಓವರ್‌ನಲ್ಲಿ ಶೆಲ್ಡನ್ ಕಾಟ್ರೆಲ್ ಅವರು ಕೆ.ಎಲ್. ರಾಹುಲ್ (6 ರನ್) ಮತ್ತು ಕೊನೆಯ ಎಸೆತದಲ್ಲಿ ನಾಯಕ ವಿರಾಟ್ ಕೊಹ್ಲಿ (4 ರನ್) ವಿಕೆಟ್ ಕಬಳಿಸಿ ಸೆಲ್ಯೂಟ್ ಮಾಡಿದರು. ಇನ್ನೊಂದೆಡೆ ತಮ್ಮ ಆಕ್ರಮಣಕಾರಿ ಶೈಲಿಗೆ ಕಡಿವಾಣ ಹಾಕಿ ತಾಳ್ಮೆಯಿಂದ ಆಡುತ್ತಿದ್ದ ರೋಹಿತ್ ಶರ್ಮಾ (36; 56ಎಸೆತ, 6ಬೌಂಡರಿ) ಅವರೊಂದಿಗೆ ಶ್ರೇಯಸ್ ಅಯ್ಯರ್ ತಾಳ್ಮೆಯಿಂದ ಆಡಿ ಇನಿಂಗ್ಸ್‌ ಕಟ್ಟಲು ಪ್ರಯತ್ನಿಸಿದರು.

ಆದರೆ ಈ ಜೊತೆಯಾಟವನ್ನು ಅಲ್ಜರಿ ಜೋಸೆಫ್ 19ನೇ ಓವರ್‌ನಲ್ಲಿ ಮುರಿದರು.

ಈ ಹಂತದಲ್ಲಿ ಶ್ರೇಯಸ್ ಜೊತೆಗೂಡಿದ ರಿಷಭ್ ಇನಿಂಗ್ಸ್‌ನ ದಿಕ್ಕು ಬದಲಿಸಿದರು. ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. 32ನೇ ಓವರ್‌ನಲ್ಲಿ ಜೇಸನ್ ಹೋಲ್ಡರ್ ಹಾಕಿದ ನೋಬಾಲ್‌ ಪಾಯಿಂಟ್‌ನತ್ತ ತಳ್ಳಿ ಒಂದು ರನ್ ಓಡಿದ ಶ್ರೆಯಸ್ ಅಯ್ಯರ್‌ ಅರ್ಧಶತಕದ ಗಡಿ ಮುಟ್ಟಿದರು. ನಂತರದ ಓವರ್‌ನಲ್ಲಿ ಕಾಟ್ರೆಲ್ ಎಸೆತವನ್ನು ಬ್ಯಾಕ್‌ವರ್ಡ್‌ ಸ್ಕ್ವೇರ್ ಲೆಗ್‌ಗೆ ಹೊಡೆದು ಎರಡು ರನ್ ಗಳಿಸಿದ ರಿಷಭ್ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಚೊಚ್ಚಲ ಅರ್ಧಶತಕ ಪೂರೈಸಿದರು. ಇವರಿಬ್ಬರ ಆಟದಿಂದಾಗಿ ತಂಡವು ಸವಾಲಿನ ಮೊತ್ತ ಪೇರಿಸಿತು.

ಅಂಪೈರ್ ಕ್ರಮಕ್ಕೆ ವಿರಾಟ್ ಕೊಹ್ಲಿ ಅಸಮಾಧಾನ?

ವೆಸ್ಟ್ ಇಂಡೀಸ್ ಎದುರಿನ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್ ರವೀಂದ್ರ ಜಡೇಜ ಅವರ ರನ್‌ಔಟ್ ಆದ ಸಂದರ್ಭದಲ್ಲಿ ಮೂರನೇ ಅಂಪೈರ್ ಸಲಹೆ ತೆಗೆದುಕೊಳ್ಳುವಲ್ಲಿ ಅಂಪೈರ್ ವಿಳಂಬ ಮಾಡಿದ್ದಕ್ಕೆ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ಭಾರತದ ಇನಿಂಗ್ಸ್‌ನ 48ನೇ ಓವರ್‌ನಲ್ಲಿ ಜಡೇಜ ಕ್ವಿಕ್ ಸಿಂಗಲ್‌ ರನ್ ಪಡೆಯಲು ಓಡಿದರು. ಆಗ ಫೀಲ್ಡರ್ ರಾಸ್ಟನ್ ಚೇಸ್ ಮಾಡಿದ ನೇರ ಥ್ರೋಗೆ ಸ್ಟಂಪ್‌ ಹಾರಿತು. ಜಡೇಜ ಕ್ರೀಸ್‌ನಿಂದ ಇನ್ನೂ ಸ್ವಲ್ಪ ದೂರದಲ್ಲಿದ್ದರು. ದೊಡ್ಡ ಡಿಜಿಟಲ್ ಪರದೆಯ ಮೇಲೆ ಔಟ್ ಎಂದು ತೋರಿಸಿದ ನಂತರ ಅಂಪೈರ್ ಶಾನ್ ಜಾರ್ಜ್ ಅವರು ಮೂರನೇ ಅಂಪೈರ್‌ಗೆ ರೆಫರಲ್ ಸಲ್ಲಿಸಿದರು.

ಈ ಸಂದರ್ಭದಲ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಕೊಹ್ಲಿ ತಮ್ಮ ಸಹ ಆಟಗಾರರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ಹಾವಭಾವದಿಂದ ಕಂಡಿತು. ನಾಲ್ಕನೇ ಅಂಪೈರ್ ಅನಿಲ್ ಚೌಧರಿ ಅವರೊಂದಿಗೆ ಈ ಕುರಿತು ಕೊಹ್ಲಿ ಮಾತುಕತೆ ನಡೆಸಿದರು.

ಭಾರತ

8ಕ್ಕೆ287 (50 ಓವರ್‌ಗಳಲ್ಲಿ)

ರೋಹಿತ್ ಶರ್ಮಾ ಸಿ ಕೀರನ್ ಪೊಲಾರ್ಡ್ ಬಿ ಅಲ್ಜರಿ ಜೋಸೆಫ್ 36

ಕೆ.ಎಲ್. ರಾಹುಲ್ ಸಿ ಶಿಮ್ರೊನ್ ಹೆಟ್ಮೆಯರ್ ಬಿ ಶೇಲ್ಡನ್ ಕಾಟ್ರೆಲ್ 06

ವಿರಾಟ್ ಕೊಹ್ಲಿ ಬಿ ಶೆಲ್ಡನ್ ಕಾಟ್ರೆಲ್ 04

ಶ್ರೇಯಸ್ ಅಯ್ಯರ್ ಸಿ ಕೀರನ್ ಪೊಲಾರ್ಡ್ ಬಿ ಅಲ್ಜರಿ ಜೋಸೆಫ್ 70

ರಿಷಭ್ ಪಂತ್ ಸಿ ಶಿಮ್ರೊನ್ ಹೆಟ್ಮೆಯರ್ ಬಿ ಕೀರನ್ ಪೊಲಾರ್ಡ್ 71

ಕೇದಾರ್ ಜಾಧವ್ ಸಿ ಕೀರನ್ ಪೊಲಾರ್ಡ್ ಬಿ ಕೀಮೊ ಪಾಲ್ 40

ರವೀಂದ್ರ ಜಡೇಜ ರನ್‌ಔಟ್ (ರಾಸ್ಟನ್ ಚೇಸ್) 21

ಶಿವಂ ದುಬೆ ಸಿ ಜೇಸನ್ ಹೋಲ್ಡರ್ ಬಿ ಕೀಮೊ ಪಾಲ್ 09

ದೀಪಕ್ ಚಾಹರ್ ಔಟಾಗದೆ 06

ಮೊಹಮ್ಮದ್ ಶಮಿ ಔಟಾಗದೆ 00

ಇತರೆ: 24 (ಬೈ 5, ಲೆಗ್‌ಬೈ 5, ವೈಡ್ 11, ನೋಬಾಲ್ 3)

ವಿಕೆಟ್ ಪತನ: 1–21 (ರಾಹುಲ್; 6.2), 2–25 (ವಿರಾಟ್;6.6), 3–80 (ರೋಹಿತ್;18.1), 4–194 (ಶ್ರೇಯಸ್;36.4), 5–210 (ರಿಷಭ್;39.4), 6–269 (ಕೇದಾರ್;47.3), 7–269 (ರವೀಂದ್ರ; 47.4), 8–282 (ಶಿವಂ;49.3)

ಬೌಲಿಂಗ್

‌ಶೆಲ್ಡನ್ ಕಾಟ್ರೆಲ್ 10–3–46–2 (ವೈಡ್ 4), ಜೇಸನ್ ಹೋಲ್ಡರ್ 8–0–45–0 (ನೋಬಾಲ್, ವೈಡ್ 1), ಹೇಡನ್ ವಾಲ್ಶ್ 5–0–31–0, ಕೀಮೊ ಪಾಲ್ 7–0–40–2 (ನೋಬಾಲ್ 2, ವೈಡ್ 3), ಅಲ್ಜರಿ ಜೋಸೆಫ್ 9–1–45–2 (ಐಡ್ 3), ರಾಸ್ಟನ್ ಚೇಸ್ 7–0–42–0, ಕೀರನ್ ಪೊಲಾರ್ಡ್ 4–0–28–1

(ವಿವರ ಅಪೂರ್ಣ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.