ADVERTISEMENT

ಕೌರ್‌ ಪಡೆಗೆ ಸರಣಿ ಗೆಲುವು

ಹರ್ಮನ್‌ಪ್ರೀತ್ ಶತಕ; 6 ವಿಕೆಟ್‌ ಕಿತ್ತ ಕ್ರಾಂತಿ ಗೌಡ್‌

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 0:29 IST
Last Updated 23 ಜುಲೈ 2025, 0:29 IST
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಶತಕ ಸಂಭ್ರಮ  
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಶತಕ ಸಂಭ್ರಮ     

ಚೆಸ್ಟರ್‌ ಲಿ ಸ್ಟ್ರೀಟ್ (ಬ್ರಿಟನ್‌) : ನಾಯಕಿ ಹರ್ಮನ್ ಪ್ರೀತ್ ಕೌರ್ ಶತಕ ಮತ್ತು ಕ್ರಾಂತಿ ಗೌಡ್ ಅವರ ಅಮೋಘ ಬೌಲಿಂಗ್‌ನಿಂದಾಗಿ ಭಾರತ ಮಹಿಳಾ ತಂಡವು ಇಂಗ್ಲೆಂಡ್ ಎದುರು ಮೂರನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 13ರನ್‌ಗಳಿಂದ ಜಯಿಸಿತು. ಅದರೊಂದಿಗೆ 2-1 ರಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ  ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ನಾಯಕತ್ವಕ್ಕೆ ತಕ್ಕಂತೆ ಆಡಿ 84 ಎಸೆತಗಳಲ್ಲಿ 102 ರನ್‌ ಗಳಿಸಿದರು. ಅರ್ಧಶತಕ ದಾಖಲಿಸಿದ ಜೆಮಿಮಾ ರಾಡ್ರಿಗಸ್ (50; 45ಎಸೆತ, 4X7) ಕೌರ್‌ ಅವರಿಗೆ ಉತ್ತಮ ಬೆಂಬಲ ನೀಡಿದರು. ಹೀಗಾಗಿ, ಭಾರತ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 318 ರನ್‌ಗಳನ್ನು ಗಳಿಸಿತು. 

319 ರನ್‌ಗಳ ಬೃಹತ್‌ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌, ಕ್ರಾಂತಿ ಗೌಡ್‌ ಅವರ ದಾಳಿ ಎದುರು (52ಕ್ಕೆ6) 49.5 ಓವರ್‌ಗಳಲ್ಲಿ 305 ರನ್‌ಗಳಿಗೆ ಆಲೌಟ್‌ ಆಯಿತು.

ADVERTISEMENT

8 ರನ್‌ಗೆ ಎರಡು ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ಗೆ, ಎಮ್ಮಾ ಲ್ಯಾಂಬ್‌ (68 ರನ್‌; 81 ಎ, 5x4) ಹಾಗೂ ನಾಯಕಿ ನ್ಯಾಟ್ ಸ್ಕಿವರ್‌ ಬ್ರಂಟ್ (98ರನ್‌; 11x4) ನಾಲ್ಕನೇ ವಿಕೆಟ್‌ಗೆ 187 ರನ್‌ಗಳ ಉತ್ತಮ ಜೊತೆಯಾಟ ನೀಡಿದರು.

ಶತಕದಂಚಿನಲ್ಲಿದ್ದ ಬ್ರಂಟ್‌ ಅವರ ವಿಕೆಟ್‌ ಕಿತ್ತ ಆಲ್‌ರೌಂಡರ್‌ ದೀಪ್ತಿ ಶರ್ಮಾ, ಇಂಗ್ಲೆಂಡ್‌ನ ಗೆಲುವನ್ನು ಕಸಿದರು.

ಭಾರತ ಬೃಹತ್‌ ಮೊತ್ತ: ಮೊದಲು ಬ್ಯಾಟಿಂಗ್‌ ಮಾಡಿದ ಭಾರತಕ್ಕೆ ಸ್ಮೃತಿ ಮಂದಾನ (45; 54ಎ) ಮತ್ತು ಪ್ರತೀಕಾ ರಾವಲ್ (26; 33ಎ) 64 ರನ್ ಜೊತೆಯಾಟ ಆಡಿ ಉತ್ತಮ ಆರಂಭ ಒದಗಿಸಿದರು. ಆದರೆ ಐದು ಓವರ್‌ಗಳ ಅಂತರದಲ್ಲಿ ಕ್ರಮವಾಗಿ ಪ್ರತೀಕಾ ಮತ್ತು ಸ್ಮೃತಿ ಇಬ್ಬರೂ ಔಟಾದರು. 

ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ಹರ್ಲಿನ್ (45; 65ಎ, 4X4) ಅವರೊಂದಿಗೆ ಸೇರಿಕೊಂಡ ನಾಯಕಿ ಹರ್ಮನ್ 3ನೇ ವಿಕೆಟ್ ಜೊತೆಯಾಟದಲ್ಲಿ 81 ರನ್‌ ಸೇರಿಸಿದರು. ಇದರಿಂದಾಗಿ ತಂಡವು ದೊಡ್ಡ ಮೊತ್ತ ಗಳಿಸುವ ನಿರೀಕ್ಷೆ ಗರಿಗೆದರಿತು. 

ಆದರೆ ಲಾರೆನ್ ಬೆಲ್ ಅವರು ಹರ್ಲಿನ್ ವಿಕೆಟ್ ಗಳಿಸಿ ಜೊತೆಯಾಟ ಮುರಿದರು. ಹರ್ಮನ್ ತಮ್ಮ ಬೀಸಾಟ ಮುಂದುವರಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಏಳನೇ ಶತಕ ಗಳಿಸಿದರು. 

ಹರ್ಮನ್ ಮತ್ತು ಜೆಮಿಮಾ ಅವರು 4ನೇ ವಿಕೆಟ್ ಜೊತೆಯಾಟದಲ್ಲಿ 110 ರನ್‌ ಸೇರಿಸಿದರು. ಇನಿಂಗ್ಸ್‌ನಲ್ಲಿ ನಾಲ್ಕು ಓವರ್‌ಗಳ ಬಾಕಿಯಿದ್ದಾಗ ಲಾರೆನ್ ಫೈಲರ್‌ ಎಸೆತದಲ್ಲಿ ಜೆಮಿಮಾ ನಿರ್ಗಮಿಸಿದರು. ಶತಕದ ಜೊತೆಯಾಟ ಮುರಿಯಿತು.

ಕ್ರೀಸ್‌ಗೆ ಬಂದ ರಿಚಾ ಘೋಷ್ (ಅಜೇಯ 38; 18ಎ, 4X3, 6X2) ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದರು. ಅವರ ಭರ್ಜರಿ ಬ್ಯಾಟಿಂಗ್‌ನಿಂದಾಗಿ ತಂಡದ ಮೊತ್ತವು ತ್ರಿಶತಕ ದಾಟಿತು. 

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 318 (ಪ್ರತಿಕಾ ರಾವಲ್ 26, ಸ್ಮೃತಿ ಮಂದಾನ 45, ಹರ್ಲೀನ್ ಡಿಯೊಲ್ 45, ಹರ್ಮನ್‌ಪ್ರೀತ್ ಕೌರ್ 102, ಜೆಮಿಮಾ ರಾಡ್ರಿಗಸ್ 50, ರಿಚಾ ಘೋಷ್ ಔಟಾಗದೇ 38, ಲಾರೆನ್ ಬೆಲ್ 82ಕ್ಕೆ1, ಲಾರೆನ್ ಫೈಲರ್ 64ಕ್ಕೆ1, ಚಾರ್ಲೀ ಡೀನ್ 69ಕ್ಕೆ1)

ಇಂಗ್ಲೆಂಡ್‌: 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 318 (ಎಮ್ಮಾ ಲ್ಯಾಂಬ್‌ 68, ನ್ಯಾಟ್ ಸ್ಕಿವರ್‌ ಬ್ರಂಟ್ 98, ಅಲೈಸ್ ಡೇವಿಡ್‌ಸನ್ ರಿಚರ್ಡ್ಸ್ 44, ಕ್ರಾಂತಿ ಗೌಡ್‌ 52ಕ್ಕೆ6, ಶ್ರೀ ಚರಣಿ 68ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.