
ವಿಶಾಖಪಟ್ಟಣಂ: ಸ್ಪಿನ್ ತ್ರಿವಳಿಗಳ ಮೋಡಿ ಮತ್ತು ಶಫಾಲಿ ವರ್ಮಾ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಭಾರತ ಮಹಿಳೆಯರ ತಂಡವು ಶ್ರೀಲಂಕಾ ಎದುರಿನ ಟಿ20 ಕ್ರಿಕೆಟ್ ಪಂದ್ಯದಲ್ಲಿ ಸುಲಭ ಜಯ ಸಾಧಿಸಿತು.
ಎಸಿಎ–ವಿಡಿಸಿಎ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 7 ವಿಕೆಟ್‌ಗಳಿಂದ ಜಯಿಸಿತು. ಐದು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಪಡೆಯಿತು.
ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶ್ರೀಚರಣಿ (23ಕ್ಕೆ2), ವೈಷ್ಣವಿ ಶರ್ಮಾ (32ಕ್ಕೆ2) ಹಾಗೂ ಸ್ನೇಹ ರಾಣಾ (11ಕ್ಕೆ1) ಅವರ ದಾಳಿಯ ಮುಂದೆ ಲಂಕಾ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 128 ರನ್ ಗಳಿಸಿತು. ತಂಡದ ಹರ್ಷಿತಾ ಸಮರವಿಕ್ರಮ (33 ರನ್) ಮತ್ತು ನಾಯಕಿ ಚಾಮರಿ ಅಟಪಟ್ಟು (31 ರನ್) ಅವರ ಆಟದಿಂದಾಗಿ ತಂಡವು ಮೂರಂಕಿ ಮೊತ್ತ ದಾಟಲು ಸಾಧ್ಯವಾಯಿತು.
ಈ ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡವು ಕೇವಲ 11.5 ಓವರ್‌ಗಳಲ್ಲಿ ಗೆಲುವು ಸಾಧಿಸಿತು. ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ (ಅಜೇಯ 69; 34ಎ, 4X11, 6X1) ಅವರು 202ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರು.
ಈಚೆಗೆ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಮಿಂಚಿದ್ದ ಶಫಾಲಿ ಇಲ್ಲಿ ಎಲ್ಲ ಬೌಲರ್‌ಗಳನ್ನೂ ದಂಡಿಸಿದರು. ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಸ್ಮೃತಿ ಮಂದಾನ (14; 11ಎ) ಒಂದು ಬೌಂಡರಿ, ಒಂದು ಸಿಕ್ಸರ್ ಹೊಡೆದು ಭರವಸೆ ಮೂಡಿಸಿದರು. ಆದರೆ ನಾಲ್ಕನೇ ಓವರ್‌ನಲ್ಲಿ ಕವಿಶಾ ದಿಲ್ಹರಿ ಎಸೆತದಲ್ಲಿ ಸ್ಮೃತಿ ಅವರು ಕವಿನಿದಿ ಅವರಿಗೆ ಕ್ಯಾಚಿತ್ತರು. ಆದರೆ ಶಫಾಲಿ ಆಟಕ್ಕೆ ಕಡಿವಾಣ ಹಾಕಲು ಯಾವುದೇ ಬೌಲರ್‌ಗೂ ಸಾಧ್ಯವಾಗಲಿಲ್ಲ. ಜೆಮಿಮಾ 26 ರನ್ ಗಳಿಸಿ ಔಟಾದರು. ನಾಯಕಿ ಹರ್ಮನ್‌ಪ್ರೀತ್ ಕೌರ್ 10 ರನ್ ಕಾಣಿಕೆ ನೀಡಿದರು.
ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 20 ಓವರ್‌ಗಳಲ್ಲಿ 9ಕ್ಕೆ128 (ಚಾಮರಿ ಅಟಪಟ್ಟು 31, ಹಸಿನಿ ಪೆರೆರಾ 22, ಹರ್ಷಿತಾ ಸಮರವಿಕ್ರಮ 33, ವೈಷ್ಣವಿ ಶರ್ಮಾ 32ಕ್ಕೆ2, ಶ್ರೀ ಚರಣಿ 23ಕ್ಕೆ2) ಭಾರತ: 11.5 ಓವರ್‌ಗಳಲ್ಲಿ 3ಕ್ಕೆ129 (ಶಫಾಲಿ ವರ್ಮಾ ಔಟಾಗದೇ 69, ಜೆಮಿಮಾ ರಾಡ್ರಿಗಸ್ 26, ಕವಿಶಾ ದಿಲ್ಹರಿ 15ಕ್ಕೆ1, ಮಾಲ್ಕಿ ಮದಾರಾ 22ಕ್ಕೆ1, ಕಾವ್ಯಾ ಕವಿಂದಿ 32ಕ್ಕೆ1) ಫಲಿತಾಂಶ: ಭಾರತ ತಂಡಕ್ಕೆ 7 ವಿಕೆಟ್‌ಗಳ ಜಯ. ಸರಣಿಯಲ್ಲಿ 2–0 ಮುನ್ನಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.