ADVERTISEMENT

ನ್ಯೂಜಿಲೆಂಡ್ ಎದುರಿನ ಎರಡನೇ ಟ್ವೆಂಟಿ–20: ಮಹಿಳಾ ತಂಡಕ್ಕೂ ಗೆಲುವಿನಾಸೆ

ಕಣಕ್ಕೆ ಇಳಿಯುವರೇ ಮಿಥಾಲಿ ರಾಜ್‌?

ಪಿಟಿಐ
Published 7 ಫೆಬ್ರುವರಿ 2019, 16:59 IST
Last Updated 7 ಫೆಬ್ರುವರಿ 2019, 16:59 IST
ಭಾರತ ತಂಡ ಸ್ಫೋಟಕ ಬ್ಯಾಟ್ಸ್‌ವುಮನ್ ಸ್ಮೃತಿ ಮಂದಾನ ಮೇಲೆ ಭರವಸೆ ಇರಿಸಿದೆ –ಎಎಫ್‌ಪಿ ಚಿತ್ರ
ಭಾರತ ತಂಡ ಸ್ಫೋಟಕ ಬ್ಯಾಟ್ಸ್‌ವುಮನ್ ಸ್ಮೃತಿ ಮಂದಾನ ಮೇಲೆ ಭರವಸೆ ಇರಿಸಿದೆ –ಎಎಫ್‌ಪಿ ಚಿತ್ರ   

ಆಕ್ಲೆಂಡ್‌: ಭಾರತ ಮತ್ತು ನ್ಯೂಜಿಲೆಂಡ್ ಮಹಿಳೆಯರ ತಂಡಗಳ ನಡುವಿನ ಟ್ವೆಂಟಿ–20 ಕ್ರಿಕೆಟ್ ಪಂದ್ಯವೂ ಶುಕ್ರವಾರ ನಡೆಯಲಿದೆ. ಮೊದಲ ಪಂದ್ಯದಲ್ಲಿ ಸೋತಿರುವ ಭಾರತ ಸರಣಿ ಗೆಲುವಿನ ಕನಸು ಜೀವಂತವಾಗಿರಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ.

ಮೊದಲ ಪಂದ್ಯದಲ್ಲಿ ಮಿಥಾಲಿ ರಾಜ್ ಅವರನ್ನು ಕೈಬಿಟ್ಟದ್ದು ವಿವಾದಕ್ಕೆ ಕಾರಣವಾಗಿತ್ತು. ಅವರು ತಂಡದಲ್ಲಿದ್ದರೆ ಪಂದ್ಯ ಗೆಲ್ಲುವ ಸಾಧ್ಯತೆ ಇತ್ತು ಎಂಬ ಮಾತು ಕೇಳಿಬಂದಿತ್ತು. 160 ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ ಎರಡನೇ ವಿಕೆಟ್‌ಗೆ 98 ರನ್‌ ಸೇರಿಸಿತ್ತು. ಆದರೂ ಪಂದ್ಯ ಸೋತಿತ್ತು. ದಾಖಲೆ ಮಾಡಿದ ಸ್ಮೃತಿ ಮಂದಾನ ಮತ್ತು ಯುವ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಅವರ ಪತನದ ನಂತರ ತಂಡಕ್ಕೆ ಎದುರಾಳಿ ಬೌಲರ್‌ಗಳ ದಾಳಿಯನ್ನು ಮೆಟ್ಟಿ ನಿಲ್ಲಲು ಆಗಲಿಲ್ಲ.

ಚೊಚ್ಚಲ ಪಂದ್ಯ ಆಡಿದ್ದ ಪ್ರಿಯಾ ಪೂನಿಯಾ ನಾಲ್ಕು ರನ್ ಗಳಿಸಿ ಔಟಾಗಿದ್ದರು. ಮತ್ತೊಬ್ಬ ಭರವಸೆಯ ಆಟಗಾರ್ತಿ ದಯಾಳನ್‌ ಹೇಮಲತಾ ಕೂಡ ನಿರೀಕ್ಷಿತ ಸಾಮರ್ಥ್ಯ ತೋರಲಿಲ್ಲ. 2020ರ ವಿಶ್ವಕಪ್‌ಗೆ ಯುವ ಆಟಗಾರ್ತಿಯರ ತಂಡ ಕಟ್ಟಲು ಮುಂದಾಗಿರುವುದರಿಂದ ಮಿಥಾಲಿಗೆ ಅವಕಾಶ ನೀಡಲಿಲ್ಲ ಎಂದು ತಂಡದ ಆಡಳಿತ ಹೇಳಿತ್ತು. ಆದರೆ ನಿರಾಸೆ ಕಂಡ ಕಾರಣ ಈಗ ಅವರನ್ನು ಕಣಕ್ಕೆ ಇಳಿಸಲು ಮುಂದಾಗಲಿದೆ ಎನ್ನಲಾಗಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಕೂಡ ಲಯಕ್ಕೆ ಮರಳಬೇಕಾಗಿದೆ.

ADVERTISEMENT

ತಂಡಗಳು: ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ, ಮಿಥಾಲಿ ರಾಜ್‌, ಜೆಮಿಮಾ ರಾಡ್ರಿಗಸ್‌, ದೀಪ್ತಿ ಶರ್ಮಾ, ತನಿಯಾ ಭಾಟಿಯಾ, ಪೂನಂ ಯಾದವ್‌, ರಾಧಾ ಯಾದವ್‌, ಅನುಜಾ ಪಾಟೀಲ್‌, ಏಕ್ತಾ ಬಿಷ್ಟ್‌, ದಯಾಳನ್ ಹೇಮಲತಾ, ಮಾನಸಿ ಜೋಶಿ, ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ಪ್ರಿಯಾ ಪೂನಿಯಾ.

ನ್ಯೂಜಿಲೆಂಡ್‌: ಆ್ಯಮಿ ಸಾಟರ್‌ವೇಟ್‌ (ನಾಯಕಿ), ಸೂಸಿ ಬೇಟ್ಸ್‌, ಬೆರ್ನಾಡಿನ್‌ ಬೆಜುಡನಾಟ್‌, ಸೋಫಿ ಡಿವೈನ್‌, ಹೇಲಿ ಜೆನ್ಸೆನ್‌, ಕ್ಯಾಟ್ಲಿನ್ ಗುರೆ, ಲೇ ಕ್ಯಾಸ್ಪರೆಕ್‌, ಅಮೆಲಿಯಾ ಕೆರ್‌, ಫ್ರಾನ್ಸಿಸ್‌ ಮೆಕೆ, ಕಾತಿ ಮಾರ್ಟಿನ್‌, ರೋಸ್‌ಮೇರಿ ಮೇರ್‌, ಹನಾ ರೋ, ಲೀ ತಹುಹು.

ಪಂದ್ಯ ಆರಂಭ: ಬೆಳಿಗ್ಗೆ 7.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.