ಲಖನೌ: ಒಂದು ವರ್ಷದ ನಂತರ ಭಾರತ ಮಹಿಳೆಯರ ಕ್ರಿಕೆಟ್ ತಂಡ ಸ್ಪರ್ಧಾ ಕಣಕ್ಕೆ ಇಳಿಯಲು ಸಜ್ಜಾಗಿದೆ. ದಕ್ಷಿಣ ಆಫ್ರಿಕಾ ಮಹಿಳಾ ತಂಡದ ಎದುರಿನ ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯ ಭಾನುವಾರ ಇಲ್ಲಿ ನಡೆಯಲಿದ್ದು ಈ ಸರಣಿ, ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸಲು ಭಾರತಕ್ಕೆ ಅನುಕೂಲ ಆಗಲಿದೆ.
ಪಾಕಿಸ್ತಾನ ಎದುರು ಕಳೆದ ತಿಂಗಳು ತವರಿನಲ್ಲಿ ನಡೆದ ಸರಣಿಯಲ್ಲಿ ಪಾಲ್ಗೊಂಡು ದಕ್ಷಿಣ ಆಫ್ರಿಕಾ ತಂಡ ಇಲ್ಲಿಗೆ ಬಂದಿದೆ. ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ಮುಂತಾದ ತಂಡಗಳಿಗೆ ಹೋಲಿಸಿದರೆ ಭಾರತಕ್ಕೆ ವಿಶ್ವಕಪ್ ಸಿದ್ಧತೆಗಳಿಗೆ ಹೆಚ್ಚು ಅವಕಾಶ ಸಿಗಲಿಲ್ಲ.
ಕೊನೆಯದಾಗಿ ಕಳೆದ ವರ್ಷದ ಮಾರ್ಚ್ ಎಂಟರಂದುಭಾರತ ತಂಡ ಕಣಕ್ಕೆ ಇಳಿದಿತ್ತು. ಅಂದು ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾಗೆ ಮಣಿದಿತ್ತು. ಕ್ವಾರಂಟೈನ್ ನಿಯಮಾವಳಿಗಳಿಂದಾಗಿ ದಕ್ಷಿಣ ಆಫ್ರಿಕಾ ಮತ್ತು ಭಾರತಕ್ಕೆ ನೆಟ್ಸ್‌ನಲ್ಲಿ ಅಭ್ಯಾಸ ಮಾಡಲು ತಲಾ ಎರಡು ದಿನಗಳ ಅವಕಾಶ ಮಾತ್ರ ಲಭಿಸಿತ್ತು.
ಆಯ್ಕೆ ಸಮಿತಿ ಈ ಬಾರಿ ವಿಶಿಷ್ಟ ದೃಷ್ಟಿಕೋನದಿಂದ ತಂಡವನ್ನು ಆಯ್ಕೆ ಮಾಡಿದೆ. ಅನುಭವಿ ಆಟಗಾರ್ತಿಯರಾದ ಶಿಖಾ ಪಾಂಡೆ, ತನಿಯಾ ಭಾಟಿಯಾ ಮತ್ತು ವೇದಾ ಕೃಷ್ಣಮೂರ್ತಿ ಅವರನ್ನು ಕೈಬಿಟ್ಟು ಆರು ಮಂದಿ ಹೊಸಬರಿಗೆ ಅವಕಾಶ ನೀಡಿದೆ. ಟಿ20 ಪರಿಣಿತೆ ಶಫಾಲಿ ವರ್ಮಾ ಅವರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡದೇ ಇರುವುದು ವಿವಾದಕ್ಕೆ ಕಾರಣವಾಗಿದೆ.
ಈ ನಡುವೆ ಪ್ರತಿಕ್ರಿಯೆ ನೀಡಿರುವ ಟಿ20 ತಂಡದ ನಾಯಕಿ ಮತ್ತು ಏಕದಿನ ತಂಡದ ಉಪನಾಯಕಿ ಹರ್ಮನ್‌ಪ್ರೀತ್ ಕೌರ್ 'ಒಂದು ವರ್ಷ ಸ್ಪರ್ಧಾತ್ಮಕ ಕ್ರಿಕೆಟ್ ಆಡದೇ ಇರುವುದರಿಂದ ದೊಡ್ಡ ಸಮಸ್ಯೆಯೇನೂ ಆಗಲಿಲ್ಲ. ಆಟಗಾರ್ತಿಯರು ಅಂಗಣಕ್ಕೆ ಇಳಿಯಲು ಉತ್ಸುಕರಾಗಿದ್ದಾರೆ’ ಎಂದರು.
12 ತಿಂಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಫಿಟ್‌ನೆಸ್‌ಗೆ ಯಾವುದೇ ಧಕ್ಕೆಯಾಗಲಿಲ್ಲ. ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ ಮತ್ತಿತರರು ಕ್ಲಬ್ ಟೂರ್ನಿಗಳಲ್ಲಿ ಪಾಲ್ಗೊಂಡು ಲಯ ಕಾಯ್ದುಕೊಳ್ಳಲು ಪ್ರಯತ್ನಿಸಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್‌ನಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ. ಭಾರತ ತಂಡ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮತ್ತು ವೇಗದ ಬೌಲಿಂಗ್‌ಗೆ ಸಾಣೆ ನೀಡಬೇಕಾಗಿದೆ.
ಪಾಕಿಸ್ತಾನ ಎದುರಿನ ಸರಣಿಯನ್ನು 3–0 ಅಂತರದಲ್ಲಿ ಗೆದ್ದುಕೊಂಡಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕಿ ಡೇನ್ ವ್ಯಾನ್ ನೀಕರ್ಕ್ ಮತ್ತು ಆಲ್‌ರೌಂಡರ್ ಕ್ಲೋ ಟೈರನ್ ಲಭ್ಯ ಇಲ್ಲ. ಭಾರತದಲ್ಲಿ ತಂಡವನ್ನು ಸೂನ್ ಲೂಜ್ ಮುನ್ನಡೆಸುವರು. ಸರಣಿಯ ಎಲ್ಲ ಪಂದ್ಯಗಳು ಅತ್ಯಾಧುನಿಕ ಏಕಾನ ಕ್ರೀಡಾಂಗಣದಲ್ಲಿ ನಡೆಯಲಿದ್ದು 10 ಶೇಕಡಾ ಪ್ರೇಕ್ಷಕರಿಗೆ ಮಾತ್ರ ಅವಕಾಶ ಇರುತ್ತದೆ.
ಹರ್ಮನ್‌ಪ್ರೀತ್‌ಗೆ ‘ಶತಕ’ದ ಪಂದ್ಯ
ಭಾರತ ಟಿ20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ತಮ್ಮ 100ನೇ ಪಂದ್ಯ ಆಡಲು ಸಜ್ಜಾಗಿದ್ದಾರೆ. 99 ಪಂದ್ಯಗಳಲ್ಲಿ 82 ಇನಿಂಗ್ಸ್ ಆಡಿರುವ ಕೌರ್ 2372 ರನ್ ಕಲೆ ಹಾಕಿದ್ದಾರೆ. ಅಜೇಯ 171 ಅವರ ಗರಿಷ್ಠ ಮೊತ್ತ. ಮೂರು ಶತಕ ಮತ್ತು 11 ಅರ್ಧಶತಕಗಳನ್ನು ಸಿಡಿಸಿದ್ದು68.93 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 2009ರ ಮಾರ್ಚ್ ಏಳರಂದು ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಅವರು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
ತಂಡಗಳು
ಭಾರತ: ಮಿಥಾಲಿ ರಾಜ್ (ನಾಯಕಿ), ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್, ಪೂನಂ ರಾವತ್, ಪ್ರಿಯಾ ಪೂನಿಯಾ, ಯಸ್ತಿಕಾ ಭಾಟಿಯಾ, ಹರ್ಮನ್‌ಪ್ರೀತ್ ಕೌರ್, ಡಿ.ಹೇಮಲತಾ, ದೀಪ್ತಿ ಶರ್ಮಾ, ಸುಶ್ಮಾ ವರ್ಮಾ (ವಿಕೆಟ್ ಕೀಪರ್), ಶ್ವೇತಾ ವರ್ಮಾ, ರಾಧಾ ಯಾದವ್, ರಾಜೇಶ್ವರಿ ಗಾಯಕವಾಡ್, ಜೂಲನ್ ಗೋಸ್ವಾಮಿ, ಮಾನಸಿ ಜೋಶಿ, ಪೂನಂ ಯಾದವ್, ಪ್ರತ್ಯೂಷಾ, ಮೋನಿಕಾ ಪಟೇಲ್.
ದಕ್ಷಿಣ ಆಫ್ರಿಕಾ: ಸೂನ್ ಲೂಜ್ (ನಾಯಕಿ), ಅಯಮೊಂಗಾ ಖಾಕ, ಶಬ್ನಿಮ್ ಇಸ್ಮಾಯಿಲ್, ಲೌರಾ ವೊಲ್ವಾರ್ಟ್, ತ್ರಿಶಾ ಚೆಟ್ಟಿ, ಸಿನಾಲೊ ಜಾಫ್ತ, ತಸ್ಮಿನ್ ಬ್ರಿಟ್ಜ್, ಮರಿಜಾನೆ ಕಾಪ್, ನೊಂಡುಮಿಸೊ ಶಾಂಗಸೆ, ಲಿಜೆಲಿ ಲೀ, ಅನೆಕೆ ಬೋಶ್, ಫೇ ತನಿಕ್ಲಿಫ್, ನೊಂಕುಲುಲೆಕೊ ಮಾಬಾ, ಮಿಗ್ನನ್ ಡು ಪ್ರೀಜ್, ನಡಿನೆ ಡಿ ಕ್ಲರ್ಕ್, ಲಾರಾ ಗುಡಾಲ್, ತೂಮಿ ಸೆಖುಖುನೆ.
ಆರಂಭ: ಬೆಳಿಗ್ಗೆ 9.00
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.