ADVERTISEMENT

INDW vs BANW | ಮಹಿಳಾ ಕ್ರಿಕೆಟ್‌: ಬಾಂಗ್ಲಾ ವಿರುದ್ಧ ಭಾರತಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 13 ಜುಲೈ 2023, 16:08 IST
Last Updated 13 ಜುಲೈ 2023, 16:08 IST
   

ಮೀರ್‌ಪುರ್‌ : ಬಾಂಗ್ಲಾದೇಶದ ಸ್ಪಿನ್‌ ಬೌಲಿಂಗ್‌ ದಾಳಿಗೆ ನಲುಗಿದ ಭಾರತದ ಬ್ಯಾಟರ್‌ಗಳು ಇಲ್ಲಿ ನಡೆದ ಮೂರನೇ ಮಹಿಳಾ ಟಿ20 ಪಂದ್ಯದಲ್ಲಿ ಅಲ್ಪಮೊತ್ತಕ್ಕೆ ಕುಸಿದು, 4 ವಿಕೆಟ್‌ಗಳಿಂದ ಮಣಿದರು. ಈ ಮೂಲಕ ಆತಿಥೇಯ ತಂಡವು ವೈಟ್‌ವಾಷ್‌ ಆಗುವುದನ್ನು ತಪ್ಪಿಸಿಕೊಂಡಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ತಂಡ 20 ಓವರ್‌ಗಳಿಗೆ 9 ವಿಕೆಟ್‌ಗೆ ಕೇವಲ 102 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹಿಂದಿನ ಪಂದ್ಯದಲ್ಲಿ ಕೇವಲ 96 ರನ್‌ ಗಳಿಸಿ ಪ್ರಯಾಸದ ಗೆಲುವು ದಾಖಲಿಸಿದ್ದ ಪ್ರವಾಸಿ ತಂಡ, ಈ ಪಂದ್ಯದಲ್ಲೂ ಕಳಪೆ ಪ್ರದರ್ಶನ ಮುಂದುವರಿಸಿತು.

ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (40 ರನ್‌, 41 ಎಸೆತ) ಮತ್ತು ಜೆಮಿಮಾ ರಾಡ್ರಿಗಸ್ (28 ರನ್‌, 26 ಎಸೆತ) ಅವರನ್ನು ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ರನ್‌ ಪೇರಿಸಲು ವಿಫಲವಾದರು. ಕೊನೆಯ 11 ರನ್‌ಗೆ 6 ವಿಕೆಟ್‌ಗಳು ಪತನಗೊಂಡು ಅಲ್ಪಮೊತ್ತಕ್ಕೆ ತಂಡ ಕುಸಿಯಿತು.

ADVERTISEMENT

ಸಾಧಾರಣ ಗುರಿಯನ್ನು ಬೆನ್ನತ್ತಿದ ಬಾಂಗ್ಲಾ ತಂಡ 18.2 ಓವರ್‌ಗಳಲ್ಲಿ ಗೆಲುವಿನ ಗುರಿ ತಲುಪಿತು. ಆರಂಭಿಕ ಆಟಗಾರ್ತಿ ಶಮೀಮಾ ಸುಲ್ತಾನ (42 ರನ್‌, 46 ಎಸೆತ) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೂರು ಟಿ20 ಪಂದ್ಯಗಳ ಸರಣಿಯನ್ನು 2–1ರಿಂದ ಭಾರತ ಗೆದ್ದುಕೊಂಡಿದ್ದು, ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಜುಲೈ 16ರಂದು ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್‌: ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 102 (ಶಫಾಲಿ ವರ್ಮಾ 11, ಜೆಮಿಮಾ ರಾಡ್ರಿಗಸ್ 28, ಹರ್ಮನ್‌ಪ್ರೀತ್ ಕೌರ್ 40, ಯಾಸ್ತಿಕಾ ಭಾಟಿಯಾ 12; ರಬೇಯಾ ಖಾನ್ 16ಕ್ಕೆ 3, ಸುಲ್ತಾನಾ ಖಾತುನ್ 17ಕ್ಕೆ 2). ಬಾಂಗ್ಲಾದೇಶ 18.2 ಓವರ್‌ಗಳಲ್ಲಿ 6 ವಿಕೆಟ್‌ಗೆ 103 (ಶಮೀಮಾ ಸುಲ್ತಾನ 42, ನಿಗರ್ ಸುಲ್ತಾನಾ 14; ಮಿನ್ನು ಮಣಿ 28ಕ್ಕೆ 2, ದೇವಿಕಾ ವೈದ್ಯ 16ಕ್ಕೆ 2) ಫಲಿತಾಂಶ: ಬಾಂಗ್ಲಾದೇಶಕ್ಕೆ 4 ವಿಕೆಟ್‌ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.