ನವದೆಹಲಿ: ಟೀಮ್ ಇಂಡಿಯಾವು ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಸರಣಿ ಪೂರ್ಣಗೊಳಿಸಿದ 12 ದಿನಗಳ ನಂತರ, ಏಪ್ರಿಲ್ 9 ರಂದು ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಆವೃತ್ತಿಯು ಆರಂಭವಾಗಲಿದೆ ಎಂದು ಶನಿವಾರ ಬಿಸಿಸಿಐ ಮೂಲವು ಪಿಟಿಐಗೆ ಬಹಿರಂಗಪಡಿಸಿದೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಮಾರ್ಚ್ 28 ರಂದು ಪುಣೆಯಲ್ಲಿ ನಡೆಯಲಿದೆ. ಭಾರತದ ಅಂತರರಾಷ್ಟ್ರೀಯ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಜನಪ್ರಿಯ ಟಿ 20 ಲೀಗ್‌ನ ಅವಧಿಯನ್ನು ನಿಗದಿಪಡಿಸಲಾಗಿದೆ.
"ಐಪಿಎಲ್ ಸರಣಿಯನ್ನು ಏಪ್ರಿಲ್ 9 ರಿಂದ ಆರಂಭಿಸಿ ಮೇ 30 ಕ್ಕೆ ಅಂತ್ಯಗೊಳಿಸಲು ತಾತ್ಕಾಲಿಕವಾಗಿ ನಿರ್ಧರಿಸಿದ್ದೇವೆ" ಎಂದು ಬಿಸಿಸಿಐ ಮೂಲವು ಪಿಟಿಐಗೆ ತಿಳಿಸಿದೆ.
"ಮುಂದಿನ ವಾರ ನಡೆಯಲಿರುವ ಬಿಸಿಸಿಐ ಆಡಳಿತ ಮಂಡಳಿ ಸಭೆಯಲ್ಲಿ ಸರಣಿಯ ದಿನಾಂಕಗಳು ಮತ್ತು ಸ್ಥಳಗಳಿಗೆ ಅನುಮೋದನೆ ನೀಡಲಾಗುವುದು" ಎಂದು ಮೂಲಗಳು ಹೇಳಿವೆ.
ಕೋವಿಡ್ -19 ತಡೆಗೆ ಲಸಿಕೆ ಅಭಿಯಾನದ ಮೂಲಕ ಸರ್ಕಾರ ಕ್ರಮ ಕೈಗೊಂಡಿದ್ದು, ಕೆಲವೆಡೆ ಕೋವಿಡ್ ಪ್ರಕರಣಗಳು ಈಗಲೂ ಹೆಚ್ಚುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ದೆಹಲಿ ಮತ್ತು ಅಹಮದಾಬಾದ್ ಸೇರಿ ಐದು ನಗರಗಳಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.
ಮಹಾರಾಷ್ಟ್ರ ರಾಜ್ಯವು ಇತ್ತೀಚೆಗೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮುಂಬೈ ನಗರದಲ್ಲಿ ಪಂದ್ಯಗಳನ್ನು ಆಯೋಜಿಸಲು ಅನುಮತಿ ಪಡೆಯಬೇಕಾಗುತ್ತದೆ.
ಮುಂದಿನ ಕೆಲವು ವಾರಗಳಲ್ಲಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಪಂದ್ಯಗಳ ಆಯೋಜನೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಯುಎಇಯಲ್ಲಿ ನಡೆದ 2020ರ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಟ್ರೋಫಿ ಗೆದ್ದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.