ADVERTISEMENT

ಸೂಪರ್‌ ಮಹಿಗೆ ಕಿಂಗ್ ಕೊಹ್ಲಿ ಸವಾಲು

ಚುಟುಕು ಕ್ರಿಕೆಟ್‌ ರಂಗಿನಾಟ ಇಂದಿನಿಂದ; ಮೊದಲ ಪಂದ್ಯದಲ್ಲಿ ಆತಿಥೇಯರ ಎದುರು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಹಣಾಹಣಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 6:32 IST
Last Updated 23 ಮಾರ್ಚ್ 2019, 6:32 IST
ಮಹೇಂದ್ರಸಿಂಗ್ ಧೋನಿ
ಮಹೇಂದ್ರಸಿಂಗ್ ಧೋನಿ   

ಚೆನ್ನೈ: ಒಂದು ವರ್ಷದ ಹಿಂದಿನ ಮಾತು. ಎಲ್ಲ ಅನುಭವಿ ಮತ್ತು ವಯಸ್ಸಿನಲ್ಲಿ ಹಿರಿಯ ಆಟಗಾರರಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಸಾಮಾಜಿಕ ಜಾಲತಾಣಗಳು ‘ಡ್ಯಾಡಿಸ್ ಆರ್ಮಿ’ ಎಂದು ಕರೆದಿದ್ದರು.

ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಅಂತ್ಯದಲ್ಲಿ ಚಾಂಪಿಯನ್ ಆಗಿದ್ದ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಸಿಎಸ್‌ಕೆ ತನ್ನ ಸಾಮರ್ಥ್ಯ ಮೆರೆದಿತ್ತು. ಇದೀಗ ಮತ್ತೊಂದು ಐಪಿಎಲ್ ಅಭಿಯಾನಕ್ಕೆ ಸಿದ್ಧವಾಗಿದೆ.

ಶನಿವಾರ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ಆತಿಥೇಯ ತಂಡವು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಎದುರಿಸಲಿದೆ. ಆ ಮೂಲಕ ’ಮಿಲಿಯನ್ ಡಾಲರ್ಸ್‌ ಬೇಬಿ’ ಎಂದೇ ಖ್ಯಾತವಾಗಿರುವ ಐಪಿಎಲ್‌ ಟೂರ್ನಿಯ 12ನೇ ಮೆಗಾ ಧಾರಾವಾಹಿ ಆರಂಭವಾಗಲಿದೆ.

ADVERTISEMENT

ಭಾರತ ಕ್ರಿಕೆಟ್ ತಂಡದ ಹಾಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ನಡುವಣದ ಪ್ರತಿಷ್ಠೆಯ ಹಣಾಹಣಿಯಾಗಿಯೂ ಈ ಪಂದ್ಯವು ಬಿಂಬಿತವಾಗಿದೆ.

2008ರಲ್ಲಿ ಟೂರ್ನಿ ಆರಂಭವಾದಾಗಿನಿಂದಲೂ ಆಡುತ್ತಿರುವ ಆರ್‌ಸಿಬಿ ತಂಡವು ಇದುವರೆಗೆ ಪ್ರಶಸ್ತಿ ಗೆದ್ದಿಲ್ಲ. ಆದರೆ, ಧೋನಿ ನಾಯಕತ್ವದ ಚೆನ್ನೈ ತಂಡವು ಮೂರು ಬಾರಿ ಪ್ರಶಸ್ತಿ ಗೆದ್ದಿದೆ. ನಾಲ್ಕು ಬಾರಿ ರನ್ನರ್ಸ್ ಅಪ್ ಕೂಡ ಆಗಿದೆ. ಒಟ್ಟಾರೆ ಏಳು ಬಾರಿ ಫೈನಲ್ ಪ್ರವೇಶಿಸಿದ ದೈತ್ಯ ತಂಡ ಇದು.

ಅದೇ ಆರ್‌ಸಿಬಿ ತಂಡವು ಮೂರು ಬಾರಿ ಫೈನಲ್ ತಲುಪಿ ಸೋತಿದೆ. ಈ ಸಲ ಕಪ್ ಗೆಲ್ಲಲೇಬೇಕೆಂಬ ಛಲದಲ್ಲಿರುವ ವಿರಾಟ್ ತಮ್ಮ ಬಳಗದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದಾರೆ.

ವೆಸ್ಟ್‌ ಇಂಡೀಸ್ ತಂಡದ ಹೊಸ ಪ್ರತಿಭೆ ಶಿಮ್ರೊನ್ ಹೆಟ್ಮೆಯರ್, ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್ ಹೆನ್ರಿಚ್ ಕ್ಲಾಸನ್, ದೇಶಿ ಕ್ರಿಕೆಟ್‌ನ ಪ್ರತಿಭೆ ಶಿವಂ ದುಬೆ, ಗುರುಕೀರತ್ ಸಿಂಗ್ ಮಾನ್, ಬೌಲರ್ ನವದೀಪ್ ಸೈನಿ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ಹೋದ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಎಬಿ ಡಿವಿಲಿಯರ್ಸ್‌ ಆಟವನ್ನು ನೋಡುವ ಭಾಗ್ಯ ಇಲ್ಲಿಯ ಅಭಿಮಾನಿಗಳಿಗೆ ಲಭಿಸಲಿದೆ. ಐಪಿಎಲ್‌ನಲ್ಲಿ ಐದು ಸಾವಿರ ರನ್‌ಗಳ ಮೈಲುಗಲ್ಲು ಮುಟ್ಟುವತ್ತ ಸಾಗಿರುವ ವಿರಾಟ್ ಕೊಹ್ಲಿ, ಅನುಭವಿ ಆಟಗಾರ ಪಾರ್ಥಿವ್ ಪಟೇಲ್ ಅವರ ಬಲವೂ ತಂಡಕ್ಕೆ ಇದೆ.

ಬೇರೆಲ್ಲ ತಂಡಗಳಿಗೆ ಹೋಲಿಕೆ ಮಾಡಿದರೆ ಆರ್‌ಸಿಬಿಯ ಬೌಲಿಂಗ್ ಪಡೆಯು ಚೆನ್ನಾಗಿದೆ. ವೇಗದ ವಿಭಾಗದಲ್ಲಿ ಉಮೇಶ್ ಯಾದವ್, ಟಿಮ್ ಸೌಥಿ, ಸ್ಪಿನ್ ವಿಭಾಗದಲ್ಲಿ ಯಜುವೇಂದ್ರ ಚಾಹಲ್ , ವಾಷಿಂಗ್ಟನ್ ಸುಂದರ್, ಪವನ್ ನೇಗಿ ಅವರಿದ್ದಾರೆ.

ಚೆನ್ನೈ ಬಳಗವೂ ಕಮ್ಮಿಯೇನಿಲ್ಲ. ಐಪಿಎಲ್‌ನಲ್ಲಿ ಐದು ಸಾವಿರ ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಆಗಲು ಕೇವಲ 15 ರನ್‌ಗಳ ಅಗತ್ಯವಿರುವ ಸುರೇಶ್ ರೈನಾ, ಅಂಬಟಿ ರಾಯುಡು, ಶೇನ್ ವಾಟ್ಸನ್, ಫಾಫ್ ಡುಪ್ಲೆಸಿ, ಮುರಳಿ ವಿಜಯ್, ಈಚೆಗೆ ಆಸ್ಟ್ರೇಲಿಯಾ ಎದುರು ಮಿಂಚಿದ್ದ ಕೇದಾರ್ ಜಾಧವ್ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದ್ದಾರೆ. ಸ್ಪಿನ್ನರ್‌ಗಳಾದ ಇಮ್ರಾನ್ ತಾಹೀರ್, ಹರಭಜನ್ ಸಿಂಗ್ ಮತ್ತು ಮಿಷೆಲ್ ಸ್ಯಾಂಟನರ್ ಅವರು ಬ್ಯಾಟ್ಸ್‌ಮನ್‌ಗಳಿಗೆ ತಡೆಯೊಡ್ಡುವ ಸಮರ್ಥರಾಗಿದ್ದಾರೆ.

ತವರಿನಂಗಳದಲ್ಲಿ ಶುಭಾರಂಭ ಮಾಡಲು ಆಲ್‌ರೌಂಡ್ ಆಟವಾಡಲು ಧೋನಿ ಬಳಗವು ಸಿದ್ಧವಾಗಿದೆ.

ಅಭ್ಯಾಸ ನಿರತ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಆಟಗಾರರು -ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.