ADVERTISEMENT

IND vs ENG: ಸೋಲಿನಿಂದ ನೋವಾಗಿದೆ, ಧೃತಿಗೆಟ್ಟಿಲ್ಲ: ವಿರಾಟ್ ಕೊಹ್ಲಿ

ರಾಯಿಟರ್ಸ್
Published 29 ಆಗಸ್ಟ್ 2021, 7:36 IST
Last Updated 29 ಆಗಸ್ಟ್ 2021, 7:36 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಲೀಡ್ಸ್: ಆತಿಥೇಯ ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್‌ನಲ್ಲಿ ಎದುರಾದ ಸೋಲಿನಿಂದ ನೋವಾಗಿದೆ. ಆದರೆ ಧೃತಿಗೆಟ್ಟಿಲ್ಲ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ಲೀಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಇನ್ನಿಂಗ್ಸ್ ಹಾಗೂ 76 ರನ್ ಅಂತರದ ಹೀನಾಯ ಸೋಲು ಅನುಭವಿಸಿತ್ತು. ಈ ಮೂಲಕ ಜೋ ರೂಟ್ ಪಡೆಯು 1-1ರ ಅಂತರದ ಸಮಬಲ ದಾಖಲಿಸಿದೆ.

'ಇಂತಹ ಪರಿಸ್ಥಿತಿಯನ್ನು ನಾವು ಈ ಹಿಂದೆಯೂ ಎದುರಿಸಿದ್ದೇವೆ. ಅಭಿಮಾನಿಗಳು ನಮ್ಮ ಸಾಮರ್ಥ್ಯದ ಬಗ್ಗೆ ಅನುಮಾನಪಡಲು ಪ್ರಾರಂಭಿಸುತ್ತಾರೆ. ಇದೇ ಪರಿಸ್ಥಿತಿಯನ್ನು ನಾವು ಅತಿ ಹೆಚ್ಚು ಇಷ್ಟಪಡುತ್ತೇವೆ. ನಾನು ನಿಮಗೊಂದು ವಿಷಯವನ್ನು ಖಾತ್ರಿಪಡಿಸಲು ಬಯಸುತ್ತೇನೆ. ಈ ಸೋಲಿನಿಂದ ನಾವು ಧೃತಿಗೆಟ್ಟಿಲ್ಲ' ಎಂದು ಹೇಳಿದ್ದಾರೆ.

'ತಂಡದೆಲ್ಲ ಆಟಗಾರರಿಗೆ ಈ ಸೋಲು ನೋವನ್ನುಂಟು ಮಾಡಿದೆ. ಆಟಗಾರರಿಗೆ ನೋವದಾಗ ಮುಂದಿನ ಪಂದ್ಯದಲ್ಲಿ ತಪ್ಪನ್ನು ಸರಿಪಡಿಸುವ ಇಂಗಿತವನ್ನು ಹೊಂದಿರುತ್ತಾರೆ. ಇದನ್ನೇ ಗಮನಲ್ಲಿಟ್ಟುಕೊಂಡು ಮುಂದಿನ ಎರಡು ಟೆಸ್ಟ್‌ಗಳನ್ನು ಎದುರಿಸಲಿದ್ದೇವೆ' ಎಂದಿದ್ದಾರೆ.

ಏತನ್ಮಧ್ಯೆ ವೈಫಲ್ಯಕ್ಕೆ ಯಾವುದೇ ಆಟಗಾರನನ್ನು ಬೊಟ್ಟು ಮಾಡಲು ಕೊಹ್ಲಿ ನಿರಾಕರಿಸಿದರು. 'ನಾವು ಒಂದು ತಂಡವಾಗಿ ಪಂದ್ಯವನ್ನು ಗೆದ್ದಿದ್ದೇವೆ. ಈಗ ಒಂದು ತಂಡವಾಗಿ ಪಂದ್ಯವನ್ನು ಸೋತಿದ್ದೇವೆ. ಇದು ನಿಮ್ಮ ಮನೋಸ್ಥಿತಿಯನ್ನು ಅವಲಂಬಿಸಿರುತ್ತದೆ. ಮುಂದಿನ ಪಂದ್ಯದಲ್ಲಿ ಹೆಚ್ಚು ದೃಢ ನಿಶ್ಚಯ ಹಾಗೂ ಬದ್ಧತೆಯೊಂದಿಗೆ ಆಡಲಿದ್ದೇವೆ ಎಂದು ನಿಮಗೆ ಭರವಸೆ ನೀಡಬಲ್ಲೆ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.