ADVERTISEMENT

ಪ್ರಾಗ್ ಮಾಸ್ಟರ್ಸ್‌ ಚೆಸ್‌: ‘ಡ್ರಾ’ ಪಂದ್ಯದಲ್ಲಿ ಭಾರತದ ಮೂವರು

ಪಿಟಿಐ
Published 2 ಮಾರ್ಚ್ 2024, 14:03 IST
Last Updated 2 ಮಾರ್ಚ್ 2024, 14:03 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ಪ್ರಾಗ್‌: ಭಾರತದ ಮೂವರು ಪ್ರಮುಖ ಆಟಗಾರರಾದ– ಆರ್‌.ಪ್ರಜ್ಞಾನಂದ, ಡಿ.ಗುಕೇಶ್‌ ಮತ್ತು ವಿದಿತ್‌ ಗುಜರಾತಿ ಅವರು ಪ್ರಾಗ್‌ ಚೆಸ್‌ ಟೂರ್ನಿಯ ನಾಲ್ಕನೇ ಸುತ್ತಿನಲ್ಲಿ ಪೂರ್ಣ ಪಾಯಿಂಟ್‌ ಪಡೆಯಲು ವಿಫಲರಾದರು. ಮೂವರೂ ಶನಿವಾರ ತಮ್ಮ ತಮ್ಮ ಎದುರಾಳಿಗಳ ಜೊತೆ ಡ್ರಾ ಮಾಡಿಕೊಂಡರು. ಈ ಸುತ್ತಿನ ಇತರ ಪಂದ್ಯಗಳೂ ಡ್ರಾ ಆಗಿದ್ದು ವಿಶೇಷ.

ಬೆನ್ನುಬೆನ್ನಿಗೆ ಎರಡು ಪಂದ್ಯಗಳನ್ನು ಸೋತಿದ್ದ ಪ್ರಜ್ಞಾನಂದ ಅವರು ಸ್ಥಳೀಯ ಆಟಗಾರ ಗುಯೆನ್ ಥಾಯಿ ದೈ ವಾನ್ ಜೊತೆ 40 ನಡೆಗಳ ನಂತರ ‘ಡ್ರಾ’ ಮಾಡಿಕೊಂಡು ಅರ್ಧ ಪಾಯಿಂಟ್‌ ಗಳಿಸಿ ನಿಟ್ಟುಸಿರಿಟ್ಟರು. ಗುಕೇಶ್‌, ಉಜ್ಬೇಕಿಸ್ತಾನದ ಎದುರಾಳಿ ನಾದಿರ್ಬೆಕ್ ಅಬ್ದುಸತ್ತಾರೊವ್ ಜೊತೆ ಪಾಯಿಂಟ್ ಹಂಚಿಕೊಂಡರು.

ಗುಕೇಶ್ ಕೂಡ ಎಚ್ಚರಿಕೆಯ ಆಟವಾಡಿ ನಾದಿರ್ಬೆಕ್ ಅಬ್ದುಸತ್ತಾರೊವ್ ಅವರಿಗೆ ಗೆಲುವಿನ ಅವಕಾಶ ನೀಡದೇ ಅರ್ಧ ಪಾಯಿಂಟ್‌ ಪಡೆದರು. ವಿದಿತ್‌ ಗುಜರಾತಿ, ಪೋಲೆಂಡ್‌ನ ಮಾಥ್ಯೂಸ್‌ ಬಾರ್ಟೆಲ್ ಜೊತೆ ‘ಶಾಂತಿ ಒಪ್ಪಂದಕ್ಕೆ’ ಸಹಿ ಹಾಕಿದರು.

10 ಆಟಗಾರರ ಈ ಟೂರ್ಇಯ ಇತರ ಎರಡು ಪಂದ್ಯಗಳಲ್ಲೂ ನಿರ್ಣಾಯಕ ಫಲಿತಾಂಶ ಬರಲಿಲ್ಲ. ಪರ್ಹಾಮ್ ಮಘಸೂಡ್ಲು (ಇರಾನ್‌) ಅವರು ಝೆಕ್‌ ರಿಪಬ್ಲಿಕ್‌ನ ಅಗ್ರ ಆಟಗಾರ ಡೇವಿಡ್‌ ನವಾರ ಜೊತೆ ಡ್ರಾ ಮಾಡಿಕೊಂಡರೆ, ರುಮೇನಿಯಾದ ರಿಚಾರ್ಡ್‌ ರ್‍ಯಾಪೋರ್ಟ್‌, ಜರ್ಮನಿಯ ವಿನ್ಸೆಂಟ್‌ ಕೀಮರ್‌ ಜೊತೆ ‘ಡ್ರಾ’ ಮಾಡಿಕೊಂಡರು. ಹೀಗಾಗಿ ಅಗ್ರಸ್ಥಾನ ಸೇರಿದಂತೆ ಉಳಿದ ಸ್ಥಾನಗಳು ಬದಲಾಗಲಿಲ್ಲ.

ಅಬ್ದುಸತ್ತಾರೋವ್‌ ಮತ್ತು ಮಘಸೂಡ್ಲು (ತಲಾ 3 ಪಾಯಿಂಟ್ಸ್‌) ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಗುಕೇಶ್ ಮತ್ತು ರ್‍ಯಾಪೋರ್ಟ್ (ತಲಾ 2.5 ಪಾಯಿಂಟ್ಸ್‌) ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.

‌ಇದೇ ವೇಳೆ ಭಾರತದ ಅಗ್ರ ಆಟಗಾರನ ಸ್ಥಾನಕ್ಕೆ ಪೈಪೋಟಿ ಮುಂದುವರಿದಿದೆ. ಚೀನಾದಲ್ಲಿ ನಡೆಯುತ್ತಿರುವ ಶೆನ್‌ಝೆನ್ ಮಾಸ್ಟರ್ಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಅರ್ಜುನ್‌ ಇರಿಗೇಶಿ, ಷಿಯಾಂಗ್ಜಿ ಬು ಅವರಿಗೆ ಸೋತ ಕಾರಣ ವಿಶ್ವನಾಥನ್ ಆನಂದ್‌ ಭಾರತದ ಅಗ್ರಮಾನ್ಯ ಆಟಗಾರ ಪಟ್ಟವನ್ನು ಮರಳಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.