ADVERTISEMENT

ನವೆಂಬರ್ 22ರಿಂದ ಭಾರತ–ಬಾಂಗ್ಲಾ ಮೊದಲ ಡೇ ಆ್ಯಂಡ್ ನೈಟ್ ಟೆಸ್ಟ್: ಗಂಗೂಲಿ

ಬಾಂಗ್ಲಾ ತಂಡದ ಮನವೊಲಿಸಿದ ‘ದಾದಾ’

ಪಿಟಿಐ
Published 29 ಅಕ್ಟೋಬರ್ 2019, 13:57 IST
Last Updated 29 ಅಕ್ಟೋಬರ್ 2019, 13:57 IST
ಸೌರವ್ ಗಂಗೂಲಿ (ಎಎಫ್‌ಪಿ ಚಿತ್ರ)
ಸೌರವ್ ಗಂಗೂಲಿ (ಎಎಫ್‌ಪಿ ಚಿತ್ರ)   

ಕೋಲ್ಕತ್ತ:ಭಾರತ ಕ್ರಿಕೆಟ್ ತಂಡವು ಪ್ರಪ್ರಥಮ ಬಾರಿಗೆಡೇ ಆ್ಯಂಡ್ ನೈಟ್ (ಹಗಲು–ರಾತ್ರಿ ಅಥವಾ ಹೊನಲು ಬೆಳಕಿನ) ಟೆಸ್ಟ್ ಪಂದ್ಯವನ್ನು ಆಡುವುದು ಖಚಿತವಾಗಿದೆ.

ನವೆಂಬರ್ 22ರಂದು ಇಲ್ಲಿನ ಈಡನ್‌ ಗಾರ್ಡನ್‌ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಣ ಟೆಸ್ಟ್ ಪಂದ್ಯವು ಹೊನಲು ಬೆಳಕಿನಲ್ಲಿ ನಡೆಯಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ. ಇದರಿಂದಾಗಿ ಎಲ್ಲ ಊಹಾಪೋಹಗಳಿಗೆ ತೆರೆಬಿದ್ದಂತಾಗಿದೆ.

ಬಾಂಗ್ಲಾ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯ ಕೊನೆಯ ಪಂದ್ಯ ಇದಾಗಿದೆ.ಗಂಗೂಲಿ ಅವರುಸೋಮವಾರ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ (ಬಿಸಿಬಿ) ಈ ಕುರಿತು ಪ್ರಸ್ತಾವ ಸಲ್ಲಿಸಿದ್ದರು. ಅದಕ್ಕೆ ಸ್ಪಂದಿಸಿದ ಬಿಸಿಬಿಯು ತಡರಾತ್ರಿಯಲ್ಲಿ ತನ್ನ ತಂಡದ ಆಟಗಾರರೊಂದಿಗೆ ಸಭೆ ನಡೆಸಿತು. ಮೊದಲಿಗೆ ಈ ಪ್ರಸ್ತಾವವನ್ನು ಬಾಂಗ್ಲಾ ಆಟಗಾರರು ತಿರಸ್ಕರಿಸಿದ್ದರು. ನಂತರ ಪದಾಧಿಕಾರಿಗಳು ಆಟಗಾರರ ಮನವೋಲಿಸುವಲ್ಲಿ ಸಫಲರಾದರು.

ADVERTISEMENT

‘ಇದೊಂದು ಉತ್ತಮ ಬೆಳವಣಿಗೆ. ಟೆಸ್ಟ್‌ ಕ್ರಿಕೆಟ್ ಮಾದರಿಯನ್ನು ಬೆಳೆಸುವುದು ಅವಶ್ಯಕವಾಗಿದೆ. ಅದಕ್ಕಾಗಿ ನಾನು ಮತ್ತು ನಮ್ಮ ತಂಡವು (ಬಿಸಿಸಿಐ) ಕಟಿಬದ್ಧವಾಗಿದೆ. ಈ ಯೋಜನೆಗೆ ಸ್ಪಂದಿಸಿದ ವಿರಾಟ್ ಕೊಹ್ಲಿಯವರಿಗೂ ಧನ್ಯವಾದಗಳು’ ಎಂದು ಗಂಗೂಲಿ ಹರ್ಷವ್ಯಕ್ತಪಡಿಸಿದ್ದಾರೆ.

ಈ ಐತಿಹಾಸಿಕ ಪಂದ್ಯದ ಸಂದರ್ಭದಲ್ಲಿ ದಿಗ್ಗಜ ಕ್ರೀಡಾಪಟುಗಳಾದ ಒಲಿಂಪಿಯನ್ ಶೂಟಿಂಗ್ ಪಟು ಅಭಿನವ್ ಬಿಂದ್ರಾ, ಬಾಕ್ಸಿಂಗ್ ತಾರೆ ಮೇರಿ ಕೋಮ್ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರನ್ನು ಗೌರವಿಸಲು ಉದ್ದೇಶಿಸಲಾಗಿದೆ.

ಆಟಗಾರರಿಗೆ ಪಿಂಕ್ ಕ್ಯಾಪ್: ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಮೊದಲ ಹೊನಲು ಬೆಳಕಿನ ಟೆಸ್ಟ್ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ತಿಳಿಗುಲಾಬಿ ವರ್ಣದ ಚೆಂಡಿನ ಬಳಕೆ ಮಾಡಲಾಗಿತ್ತು. ಅದಕ್ಕಾಗಿ ಹಗಲು–ರಾತ್ರಿ ಪಂದ್ಯಗಳನ್ನು ‘ಪಿಂಕ್ ಟೆಸ್ಟ್’ ಎಂದೇ ಕರೆಯಲಾಯಿತು. ಆ ಪಂದ್ಯದಲ್ಲಿ ಆಡಗಾರರಿಗೆ ಗುಲಾಬಿ ಬಣ್ಣದ ಕ್ಯಾಪ್‌ಗಳನ್ನು ನೀಡಲಾಗಿತ್ತು.

ಈಡನ್ ಗಾರ್ಡನ್‌ನಲ್ಲಿಯೂ ಉಭಯ ತಂಡಗಳ ಆಟಗಾರರಿಗೆ ಪಿಂಕ್ ಕ್ಯಾಪ್ ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಜೇನ್ ಮೆಕ್‌ಗ್ರಾ ಪ್ರತಿಷ್ಠಾನದ ವತಿಯಿಂದ ಸ್ತನ ಕ್ಯಾನ್ಸರ್‌ ಕುರಿತು ಜಾಗೃತಿ ಕಾರ್ಯಕ್ರಮವೂ ನಡೆಯಲಿದೆ.

ಕೋಲ್ಕತ್ತದಲ್ಲಿ ಪ್ರತಿ ವರ್ಷವೂ ಒಂದು ‘ಪಿಂಕ್ ಟೆಸ್ಟ್’ ನಡೆಸಬೇಕು ಎಂದು ಗಂಗೂಲಿ ಇಂಗಿತ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದಲೂ ಭಾರತದ ಕ್ರಿಕೆಟಿಗರು ಪಿಂಕ್ ಬಾಲ್ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಹೊನಲು ಬೆಳಕಿನಲ್ಲಿ ಆಡುವಾಗ ತಿಳಿಗುಲಾಬಿ ಚೆಂಡು ಹಳೆಯದಾದಂತೆ ಹೊಳಪು ಕಳೆದುಕೊಳ್ಳುತ್ತದೆ. ಬ್ಯಾಟ್ಸ್‌ಮನ್‌ಗಳಿಗೆ ಚೆಂಡನ್ನು ಎದುರಿಸುವುದು ಕಷ್ಟವಾಗುತ್ತದೆ ಎಂದು ಅಕ್ಷೇಪ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.