ADVERTISEMENT

ಹ್ಯಾಟ್ರಿಕ್‌ಗೆ ‘ಒತ್ತಡ’ ಬೌಲ್ಡ್‌

‘ಡಬಲ್ ಹ್ಯಾಟ್ರಿಕ್ ಇಂಡಿಯನ್’ ಕುಲದೀಪ್ ಮನದಾಳ

ಪಿಟಿಐ
Published 19 ಡಿಸೆಂಬರ್ 2019, 19:37 IST
Last Updated 19 ಡಿಸೆಂಬರ್ 2019, 19:37 IST
ಕುಲದೀಪ್ ಯಾದವ್
ಕುಲದೀಪ್ ಯಾದವ್   

ವಿಶಾಖಪಟ್ಟಣ :’ಹೋದ ಹತ್ತು ತಿಂಗಳುಗಳಲ್ಲಿ ವಿಪರೀತವಾದ ಒತ್ತಡವನ್ನು ಅನುಭವಿಸಿದ್ದೆ. ಬೌಲಿಂಗ್ ಲಯ ಕಂಡುಕೊಳ್ಳಲು ಬಹಳಷ್ಟು ಪರಿಶ್ರಮ ಪಟ್ಟಿದ್ದೆ. ಇವತ್ತು ಈ ಹ್ಯಾಟ್ರಿಕ್‌ನಿಂದಾಗಿ ಆ ಒತ್ತಡವೆಲ್ಲ ದೂರಾಗಿದೆ’–

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಎರಡು ಬಾರಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ಬೌಲರ್ ಹೆಗ್ಗಳಿಕೆಗೆ ಪಾತ್ರರಾಗಿರುವ ಕುಲದೀಪ್ ಯಾದವ್ ಅವರ ನುಡಿಗಳಿವು.

ವಿಶಾಖಪಟ್ಟಣದಲ್ಲಿ ಬುಧವಾರ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅವರು ಹ್ಯಾಟ್ರಿಕ್ ಸಾಧನೆ ಮಾಡಿದ್ದರು. 2017ರಲ್ಲಿ ಕೋಲ್ಕತ್ತದಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಹ್ಯಾಟ್ರಿಕ್ ಮಾಡಿದ್ದರು. ಎರಡು ಬಾರಿ ಈ ಸಾಧನೆ ಮಾಡಿದ ವಿಶ್ವದ ಆರನೇ ಬೌಲರ್‌ ಎಂಬ ಗೌರವಕ್ಕೂ ಅವರು ಪಾತ್ರರಾಗಿದ್ದಾರೆ.

ADVERTISEMENT

‘ವಿಶಾಖಪಟ್ಟಣದ ಮೈದಾನದಲ್ಲಿ ಇದುವರೆಗೆ ಮೂರು ಪಂದ್ಯಗಳನ್ನು ಆಡಿ, ಒಂಬತ್ತು ವಿಕೆಟ್‌ ಗಳಿಸಿದ್ದೇನೆ. ಇದು ನನಗೆ ಅದೃಷ್ಟದ ಮೈದಾನವಾಗಿದೆ. ವಿಂಡೀಸ್ ಎದುರಿನ ಪಂದ್ಯವು ಅವಿಸ್ಮರಣೀಯ. ಹ್ಯಾಟ್ರಿಕೆ್ ವಿಕೆಟ್‌ಗಾಗಿ ಜೋಸೆಫ್ ಅವರಿಗೆ ಎಸೆತ ಹಾಕುವಾಗ ತುಸು ಒತ್ತಡದಲ್ಲಿದ್ದೆ. ಚೈನಾಮೆನ್ ಎಸೆತ ಹಾಕುವುದೋ ಅಥವಾ ಆಫ್‌ಸ್ಟಂಪ್ ನೇರಕ್ಕೆ ಎಸೆತ ಹಾಕಬೇಕೊ ಎಂಬ ಗೊಂದಲವಿತ್ತು. ಆಫ್‌–ಮಿಡಲ್ ಲೈನ್ ಬೌಲ್ ಮಾಡಲು ನಿರ್ಧರಿಸಿ, ಎರಡನೇ ಸ್ಲಿಪ್‌ನಲ್ಲಿ ಫೀಲ್ಡರ್ ನಿಯೋಜಿಸಿದೆ’ ಎಂದು ಹೇಳಿದರು.

‘ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಂತರ ಬೌಲಿಂಗ್‌ನಲ್ಲಿ ಸುಧಾರಣೆ ಮಾಡಿಕೊಳ್ಳಲು ಬಹಳಷ್ಟು ಪರಿಶ್ರಮ ಪಟ್ಟೆ. ಎಸೆತಗಳಲ್ಲಿ ವೈವಿಧ್ಯತೆ ರೂಢಿಸಿಕೊಳ್ಳಲು ಮತ್ತು ಹೊಸ ಬಗೆಯ ಪ್ರಯೋಗಗಳಿಗೆ ಒತ್ತು ನೀಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.