ADVERTISEMENT

ತಂಡ ತೊರೆದ ಶ್ರೇಯಸ್; ಬಲಶಾಲಿಯಾಗುವ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 11:57 IST
Last Updated 25 ಮಾರ್ಚ್ 2021, 11:57 IST
ಗಾಯಗೊಂಡ ಶ್ರೇಯಸ್ ಅಯ್ಯರ್ ಅವರನ್ನು ಅಂಗಣದಿಂದ ಕರೆದುಕೊಂಡು ಹೋಗಲಾಯಿತು –ಪಿಟಿಐ ಚಿತ್ರ
ಗಾಯಗೊಂಡ ಶ್ರೇಯಸ್ ಅಯ್ಯರ್ ಅವರನ್ನು ಅಂಗಣದಿಂದ ಕರೆದುಕೊಂಡು ಹೋಗಲಾಯಿತು –ಪಿಟಿಐ ಚಿತ್ರ   

ಪುಣೆ: ಎಡ ಭುಜದಲ್ಲಿ ನೋವು ಕಾಣಿಸಿಕೊಂಡಿರುವ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಭಾರತ ತಂಡದ ಜೀವಸುರಕ್ಷಾ ವಲಯದಿಂದ ಹೊರಬಂದಿದ್ದು ಇನ್ನಷ್ಟು ಬಲಶಾಲಿಯಾಗಿ ಕ್ರಿಕೆಟ್ ಕಣಕ್ಕೆ ಮರಳುವೆ ಎಂಬ ಭರವಸೆಯ ನುಡಿಗಳನ್ನಾಡಿದ್ದಾರೆ.

ಇಂಗ್ಲೆಂಡ್ ಎದುರಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಶ್ರೇಯಸ್ ಅವರ ಎಡ ಭುಜಕ್ಕೆ ಗಾಯವಾಗಿತ್ತು. ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿರುವುದರಿಂದ ನಾಲ್ಕು ತಿಂಗಳು ಕಣಕ್ಕೆ ಇಳಿಯಲು ಸಾಧ್ಯವಿಲ್ಲ. ಹೀಗಾಗಿ ಉಳಿದೆರಡು ಪಂದ್ಯಗಳಿಂದ ಮತ್ತು ಐಪಿಎಲ್‌ ಟೂರ್ನಿಯಿಂದ ಅನಿವಾರ್ಯವಾಗಿ ದೂರ ಉಳಿಯಬೇಕಾಗಿ ಬಂದಿದೆ.

‘ಶ್ರೇಯಸ್ ಅಯ್ಯರ್ ಬಯೋಬಬಲ್‌ನಿಂದ ಗುರುವಾರ ಹೊರಹೋಗಿದ್ದಾರೆ’ ಎಂದು ಬಿಸಿಸಿಐ ಹೇಳಿದೆ. ಇದೇ ವೇಳೆ ಶ್ರೇಯಸ್ ಅಯ್ಯರ್ ಟ್ವೀಟ್ ಮಾಡಿ ‘ತಂಡ ತೊರೆಯುತ್ತಿರುವುದು ಬೇಸರದ ವಿಷಯ. ಆದರೆ ಚಿಕಿತ್ಸೆಯ ನಂತರ ಇನ್ನಷ್ಟು ಬಲಶಾಲಿಯಾಗಿ ಮರಳಲಿದ್ದೇನೆ’ ಎಂದಿದ್ದಾರೆ. ‘ನನ್ನ ಮೇಲೆ ಪ್ರೀತಿ–ವಿಶ್ವಾಸವಿರಿಸಿ ಕಾಳಜಿ ವಹಿಸಿರುವ ಎಲ್ಲರಿಗೂ ಹೃದಯಾಂತರಾಳದ ಧನ್ಯವಾದಗಳು’ ಎಂದೂ ಅವರು ಬರೆದಿದ್ದಾರೆ.

ADVERTISEMENT

ಇಂಗ್ಲಿಷ್‌ ಲೀಗ್‌ನಲ್ಲಿ ಆಡುವ ಲ್ಯಾಂಕಾಶೈರ್ ತಂಡವು ಜುಲೈ ತಿಂಗಳಲ್ಲಿ ನಡೆಯಲಿರುವ ಏಕದಿನ ಟೂರ್ನಿಯಲ್ಲಿ ಆಡಲು ಶ್ರೇಯಸ್‌ ಅವರನ್ನು ಕರೆಸಿಕೊಂಡಿತ್ತು. ಆದರೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿರುವುದರಿಂದ ಆ ಒಪ್ಪಂದದಿಂದಲೂ ಹೊರಬರಬೇಕಾಗಿದೆ.

‍ಪುಣೆಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಇನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಅವರ ಎಸೆತವನ್ನು ಜಾನಿ ಬೆಸ್ಟೊ ಡ್ರೈವ್ ಮಾಡಿದ್ದರು. ಕ್ಯಾಚ್‌ಗಾಗಿ ಶ್ರೇಯಸ್ ಅಯ್ಯರ್ ಡೈವ್ ಮಾಡಿದ್ದರು. ಬಿದ್ದು ಗಾಯಗೊಂಡು ವಿಪರೀತ ನೋವಿನಿಂದ ಬಳಲಿದ ಅವರು ತಕ್ಷಣ ಅಂಗಣ ತೊರೆದಿದ್ದರು.

ಐಪಿಎಲ್‌ನ ಕಳೆದ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕರಾಗಿದ್ದ ಶ್ರೇಯಸ್ ತಂಡವನ್ನು ಫೈನಲ್‌ ವರೆಗೂ ತಲುಪಿಸಿದ್ದರು. ಅವರ ಅನುಪಸ್ಥಿತಿಯಲ್ಲಿ ಈ ಬಾರಿ ತಂಡದ ನಾಯಕತ್ವವನ್ನು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅಥವಾ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ ಅವರಿಗೆ ವಹಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.