ADVERTISEMENT

ಏಷ್ಯಾ ಕಪ್ ಕ್ರಿಕೆಟ್: ಫೈನಲ್‌ ಪ್ರವೇಶಕ್ಕಾಗಿ ಪಾಕ್, ಲಂಕಾ ಪೈಪೋಟಿ

ಪಿಟಿಐ
Published 13 ಸೆಪ್ಟೆಂಬರ್ 2023, 23:30 IST
Last Updated 13 ಸೆಪ್ಟೆಂಬರ್ 2023, 23:30 IST
ದುನಿತ್ ವೆಲಾಳಗೆ
ದುನಿತ್ ವೆಲಾಳಗೆ   

ಕೊಲಂಬೊ: ಭಾರತ ತಂಡದ ಎದುರು ಪರಾಭವಗೊಂಡಿರುವ  ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಗುರುವಾರ ಏಷ್ಯಾ ಕಪ್ ಟೂರ್ನಿಯ ಸೂಪರ್ ಫೋರ್ ಹಂತದಲ್ಲಿ ಮುಖಾಮುಖಿಯಾಗಲಿವೆ.

ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವು ಉಭಯ ತಂಡಗಳಿಗೂ ಪ್ರಮುಖವಾಗಿದೆ.  ಇಲ್ಲಿ ಗೆದ್ದವರು ಫೈನಲ್‌ನಲ್ಲಿ ಭಾರತದ ಎದುರು ಆಡುವರು. ಎರಡೂ ತಂಡಗಳೂ ತಲಾ ಎರಡು ಅಂಕ ಗಳಿಸಿವೆ. ಭಾರತ ನಾಲ್ಕು ಅಂಕ ಗಳಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ.

ಆದರೆ ಪ್ರಮುಖ ಬೌಲರ್‌ಗಳು ಗಾಯಗೊಂಡಿರುವುದರಿಂದ ಪಾಕ್ ತಂಡಕ್ಕೆ ಶ್ರೀಲಂಕಾ ತಂಡವು ಕಠಿಣ ಪೈಪೋಟಿಯೊಡ್ಡುವ ಸಾಧ್ಯತೆ ಇದೆ. ವೇಗಿಗಳಾದ ಹ್ಯಾರಿಸ್ ರವೂಫ್ ಮತ್ತು ನಸೀಂ ಷಾ ಗಾಯಗೊಂಡಿದ್ದಾರೆ. ನಸೀಂ ಷಾ ಟೂರ್ನಿಯಿಂದ ಹೊರಬಿದ್ದಿರುವುದು ಖಚಿತವಾಗಿದೆ. ರವೂಫ್ ಕೂಡ ಈ ಪಂದ್ಯಕ್ಕೆ ಲಭ್ಯರಾಗುವುದು ಖಚಿತವಿಲ್ಲ. 

ADVERTISEMENT

‘ನಸೀಂ ಬಲಗೈ ತೋಳಿಗೆ ಗಾಯವಾಗಿದೆ. ಭಾರತ ಎದುರಿನ ಪಂದ್ಯದಲ್ಲಿ ಅವರು ನೋವಿನಿಂದ ಬಳಲಿದ್ದರು. ಹತ್ತನೇ ಓವರ್ ಪೂರ್ಣವಾಗುವ (9.2) ಮುನ್ನವೇ ಅವರು ಪೆವಿಲಿಯನ್‌ಗೆ ಮರಳಿದ್ದರು. ಒಂದೂ ವಿಕೆಟ್ ಪಡೆದಿರಲಿಲ್ಲ. ಅವರ ಬದಲಿಗೆ ಬಲಗೈ ವೇಗಿ ಝಮಾನ್ ಖಾನ್ ಆಡಲಿದ್ದಾರೆ ‘ ಎಂದು ಪಾಕ್ ಕ್ರಿಕೆಟ್ ಮಂಡಳಿ ತಿಳಿಸಿದೆ.

22 ವರ್ಷದ ಖಾನ್ 150 ಕಿ.ಮೀ ವೇಗದಲ್ಲಿ ಎಸೆತಗಳನ್ನು ಹಾಕುವ ಸಾಮರ್ಥ್ಯ ಹೊಂದಿದ್ದಾರೆ.

‘ಮತ್ತೊಬ್ಬ ಪ್ರಮುಖ ವೇಗಿ ರವೂಫ್ ಸೋಮವಾರದ ಆಟದಲ್ಲಿ ಬೌಲಿಂಗ್ ಮಾಡಿರಲಿಲ್ಲ. ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಪಂದ್ಯದಲ್ಲಿ ಆಡುವುದರ ಕುರಿತು ಇನ್ನೂ ನಿರ್ಧಾರವಾಗಿಲ್ಲ‘ ಎಂದೂ ಮೂಲಗಳು ತಿಳಿಸಿವೆ.

ಬ್ಯಾಟಿಂಗ್‌ನಲ್ಲಿಯೂ ಇನ್ನೂ ಪಾಕ್ ಆಟಗಾರರು ತಮ್ಮ ಸಂಪೂರ್ಣ ಸಾಮರ್ಥ್ಯ ತೋರಿಸಿಲ್ಲ. ಬಾಬರ್ ಆಜಂ, ಫಕರ್ ಜಮಾನ್, ಮೊಹಮ್ಮದ್ ರಿಜ್ವಾನ್ ಮತ್ತು ಇಮಾಮ್ ಉಲ್ ಹಕ್ ತಂಡದ ಪ್ರಮುಖ ಬ್ಯಾಟರ್‌ಗಳಾಗಿದ್ದಾರೆ.

ಆದರೆ ಶ್ರೀಲಂಕಾ ತಂಡವು ಅಪಾರ ಹುರುಪಿನಲ್ಲಿದೆ. ಭಾರತ ಎದುರಿನ ಪಂದ್ಯದಲ್ಲಿ ಸೋತಿತ್ತು. ಆದರೆ ಪಂದ್ಯದಲ್ಲಿ ಶ್ರೀಲಂಕಾದ ದುನಿತ್ ವಲ್ಲಾಳಗೆ ಐದು ವಿಕೆಟ್ ಗಳಿಸಿದ್ದರು. ಧನಂಜಯ ಡಿಸಿಲ್ವಾ ಕೂಡ ಉತ್ತಮ ಬೌಲಿಂಗ್ ಮಾಡಿದ್ದರು. ಭಾರತ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ್ದರು. ಅಗ್ರಕ್ರಮಾಂಕದ ಬ್ಯಾಟರ್‌ಗಳು ಲಯಕ್ಕೆ ಮರಳಿದರೆ ಪಾಕ್ ತಂಡದ ಹಾದಿ ಕಠಿಣವಾಗುವ ಸಾಧ್ಯತೆ ಇದೆ.

ಟೂರ್ನಿಯಲ್ಲಿ ಬಹುತೇಕ ಎಲ್ಲ ಪಂದ್ಯಗಳಲ್ಲಿಯೂ ಮಳೆ ಸುರಿದಿದ್ದರಿಂದ ಆಟಕ್ಕೆ ವ್ಯತ್ಯಯವಾಗಿತ್ತು. ಈ ಪಂದ್ಯದ ಸಮಯದಲ್ಲಿಯೂ ಮಳೆಯಾಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.