ADVERTISEMENT

ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಇನಿಂಗ್ಸ್ ಜಯದ ಸಂಭ್ರಮ

ದೇವದತ್ತ, ಕುಶಾಲ್‌ ದಾಳಿಗೆ ಅಸ್ಸಾಂ ತತ್ತರ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 15:20 IST
Last Updated 17 ನವೆಂಬರ್ 2018, 15:20 IST
ದೇವದತ್ತ ಪಡಿಕ್ಕಲ್‌
ದೇವದತ್ತ ಪಡಿಕ್ಕಲ್‌   

ಬೆಂಗಳೂರು: ಸಾಂದರ್ಭಿಕ ಬೌಲರ್‌ಗಳ ಪಾತ್ರ ವಹಿಸಿದ ಕರ್ನಾಟಕದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಪ್ರಬಲ ದಾಳಿ ನಡೆಸಿದರು. ಅವರಿಗೆ ಎದೆಯೊಡ್ಡಿ ನಿಲ್ಲಲು ಆಗದ ಅಸ್ಸಾಂ ತಂಡ ಸುಲಭವಾಗಿ ಪತನಗೊಂಡಿತು. ಆತಿಥೇಯರು ಇನಿಂಗ್ಸ್‌ ಮತ್ತು 32 ರನ್‌ಗಳ ಜಯ ದಾಖಲಿಸಿದರು.

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯ ಎಲೀಟ್‌ ’ಎ’ ಗುಂಪಿನ ಪಂದ್ಯದ ನಾಲ್ಕನೇ ದಿನವಾದ ಶನಿವಾರ ಅಸ್ಸಾಂ ತಂಡವನ್ನು ಕರ್ನಾಟಕ 201 ರನ್‌ಗಳಿಗೆ ಕಟ್ಟಿ ಹಾಕಿತು.

233 ರನ್‌ಗಳ ಹಿನ್ನಡೆಯೊಂದಿಗೆ ಶುಕ್ರವಾರ ಎರಡನೇ ಇನಿಂಗ್ಸ್ ಆರಂಭಿಸಿದ್ದ ಅಸ್ಸಾಂ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 79 ರನ್‌ ಗಳಿಸಿತ್ತು. ಕರ್ನಾಟಕ ಶನಿವಾರ ಆರಂಭದಿಂದಲೇ ಎದುರಾಳಿಗಳಿಗೆ ಬಲವಾದ ಪೆಟ್ಟು ನೀಡಿತು. ಕುಶಾಲ್ ಪರಮೇಶ್‌ ಅವರಿಗೆ ಉತ್ತಮ ಸಹಕಾರ ನೀಡಿದ ದೇವದತ್ತ ಪಡಿಕ್ಕಲ್‌ ಮತ್ತು ನಿಕಿನ್ ಜೋಸ್ ಎದುರಾಳಿಗಳ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಹೆಡೆಮುರಿ ಕಟ್ಟಿ ಕಳುಹಿಸಿದರು.

ADVERTISEMENT

50 ರನ್‌ ಗಳಿಸಿದ್ದ ವಿಪ್ಲವ್ ಸೈಕಿಯಾ ಹಾಗೂ ರಾಜ್ ಅಗರವಾಲ್‌ ಮೇಲೆ ಅಸ್ಸಾಂ ತಂಡ ಭರವಸೆ ಇರಿಸಿಕೊಂಡಿತ್ತು. ಶನಿವಾರ ಬೆಳಿಗ್ಗೆಯೂ ಇವರಿಬ್ಬರು ಉತ್ತಮ ಬ್ಯಾಟಿಂಗ್ ಮುಂದುವರಿಸಿ ಎರಡನೇ ವಿಕೆಟ್‌ಗೆ 67 ರನ್ ಸೇರಿಸಿದರು. ಹೀಗಾಗಿ ಪಂದ್ಯ ಡ್ರಾ ಆಗುವ ಸಾಧ್ಯತೆಗಳು ಹೆಚ್ಚಾಗಿದ್ದವು. ಆದರೆ ಅಗರವಾಲ್‌ ಔಟಾದ ನಂತರ ಪಂದ್ಯದ ಗತಿ ಬದಲಾಯಿತು. ಆರು ಮಂದಿ ಎರಡಂಕಿ ಮೊತ್ತ ಗಳಿಸಲಾಗದೆ ಔಟಾದರೆ ಒಬ್ಬರು ಶೂನ್ಯಕ್ಕೆ ಮರಳಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಅಸ್ಸಾಂ: 247; ಕರ್ನಾಟಕ 7ಕ್ಕೆ 480 ಡಿಕ್ಲೇರ್‌; ದ್ವಿತೀಯ ಇನಿಂಗ್ಸ್‌: ಅಸ್ಸಾಂ (ಶುಕ್ರವಾರದ ಅಂತ್ಯಕ್ಕೆ 40 ಓವರ್‌ಗಳಲ್ಲಿ 1 ವಿಕೆಟ್‌ಗೆ 79): 100.4 ಓವರ್‌ಗಳಲ್ಲಿ 201 (ವಿಪ್ಲವ್ ಸೈಕಿಯಾ 93, ರಾಜ್ ಅಗರವಾಲ್‌ 32, ಅಭಿಷೇಕ್ ಠಾಕೂರಿ 11, ರೋಷನ್ ಆಲಂ 12; ವೈಶಾಕ್‌ ವಿಜಯಕುಮಾರ್‌ 45ಕ್ಕೆ1, ಕುಶಾಲ್‌ ಪರಮೇಶ್‌ 33ಕ್ಕೆ3, ದೇವದತ್ತ ಪಡಿಕ್ಕಲ್‌ 34ಕ್ಕೆ4, ನಿಕಿನ್‌ ಜೋಸ್‌ 36ಕ್ಕೆ2). ಫಲಿತಾಂಶ: ಕರ್ನಾಟಕಕ್ಕೆ ಇನಿಂಗ್ಸ್ ಮತ್ತು 32 ರನ್‌ಗಳ ಜಯ. ಮುಂದಿನ ಪಂದ್ಯ ಗುಜರಾತ್ ವಿರುದ್ಧ, ನವೆಂಬರ್‌ 22ರಿಂದ ವಲ್ಸದ್‌ನಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.