ADVERTISEMENT

ಕ್ರಿಕೆಟ್‌ ಆಯ್ಕೆ ಮಂಡಳಿ ಮುಖ್ಯಸ್ಥನ ಹುದ್ದೆ ತೊರೆದ ಇಂಜಮಾಮ್‌

ಪಿಟಿಐ
Published 17 ಜುಲೈ 2019, 18:59 IST
Last Updated 17 ಜುಲೈ 2019, 18:59 IST
   

ಕರಾಚಿ : ಪಾಕಿಸ್ತಾನ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿಮುಖ್ಯಸ್ಥನ ಹುದ್ದೆಯಿಂದ ಇಂಜಮಾಮ್‌– ಉಲ್–ಹಕ್‌ ಬುಧವಾರ ನಿರ್ಗಮಿಸಿದ್ದಾರೆ. ಆದರೆ ಕ್ರಿಕೆಟ್‌ ಮಂಡಳಿ ನೀಡುವ ಯಾವುದೇ ಹೊಸ ಹೊಣೆಯನ್ನು ವಹಿಸಿಕೊಳ್ಳಲು ಮುಕ್ತಮನಸ್ಸು ಹೊಂದಿರುವುದಾಗಿಯೂ ‘ಇಂಜಿ’ ಹೇಳಿದ್ದಾರೆ.

ಈ ಹುದ್ದೆಯ ಅವಧಿ ಮುಂದುವರಿಸಲು ಅಥವಾ ಗುತ್ತಿಗೆಯನ್ನು ನವೀಕರಣ ಮಾಡುವಂತೆ ಕೇಳುವುದಿಲ್ಲ ಎಂದು ಇಂಜಮಾಮ್‌ ಲಾಹೋರ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು. ಅವರ ಹುದ್ದೆಯ ಅವಧಿ ಈ ತಿಂಗಳ 31ರವರೆಗೆ ಇತ್ತು. ವಿಶ್ವಕಪ್‌ನಲ್ಲಿ ಪಾಕ್‌ ತಂಡದ ನಿರ್ವಹಣೆಯಿಂದ ಅವರು ಟೀಕೆಗೊಳಲಾಗಿದ್ದರು.

‘ ಮೂರು ವರ್ಷಗಳಿಗೂ ಹೆಚ್ಚು ಕಾಲ ಆಯ್ಕೆ ಸಮಿತಿ ಮುಖ್ಯಸ್ಥನಾಗಿದ್ದು, ಇನ್ನು ಗುತ್ತಿಗೆ ಅವಧಿಯನ್ನು ಮುಂದುವರಿಸುವಂತೆ ಕೇಳದಿರಲು ನಿರ್ಧರಿಸಿದ್ದೇನೆ’ ಎಂದು ಪಾಕ್‌ ತಂಡದ ಮಾಜಿ ನಾಯಕನೂ ಆಗಿರುವ ಇಂಜಮಾಮ್‌ ಹೇಳಿದರು.

ADVERTISEMENT

‘ಬರುವ ಸೆಪ್ಟೆಂಬರ್‌ನಲ್ಲಿ ಐಸಿಸಿ ವಿಶ್ವ ಟೆಸ್‌ ಚಾಂಪಿಯನ್‌ಷಿಪ್‌ ಆರಂಭವಾಗಲಿದೆ. 2020ರಲ್ಲಿ ಐಸಿಸಿ ಟಿ–20 ವಿಶ್ವಕಪ್‌ ಮತ್ತು 2023ರಲ್ಲಿ ವಿಶ್ವ ಕಪ್‌ ನಡೆಯಲಿದೆ. ಪಾಕ್‌ ತಂಡದ ಆಯ್ಕೆ ಸಮಿತಿಗೆ ನೂತನ ಮುಖ್ಯಸ್ಥರನ್ನು ನೇಮಕ ಮಾಡಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಇದು ಸಕಾಲ’ ಎಂದು ಇಂಜಮಾಮ್‌ ಹೇಳಿದ್ದಾರೆ.

ಪಾಕ್‌ ತಂಡಕ್ಕೆ 120 ಟೆಸ್ಟ್‌ ಪಂದ್ಯಗಳಲ್ಲಿ ಆಡಿರುವ ಇಂಜಮಾಮ್‌ ಅವರ ಸಮಿತಿಯು ವಿಶ್ವಕಪ್‌ ತಂಡದ ಆಯ್ಕೆಗೆ ಮತ್ತು ಕೆಲವು ಯೋಜನೆಗಳ ವಿಷಯಕ್ಕೆ ಸಂಬಂಧಿಸಿ ಟೀಕೆಗೆ ಒಳಗಾಗಿತ್ತು. 2016ರಿಂದ ಅವರು ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.