ADVERTISEMENT

IPL 2021: ರಾಜಸ್ಥಾನ್ ಗಾಯದ ಮೇಲೆ ಬರೆ; ಐಪಿಎಲ್‌ನಿಂದ ಆರ್ಚರ್ ಔಟ್

ಏಜೆನ್ಸೀಸ್
Published 23 ಏಪ್ರಿಲ್ 2021, 14:17 IST
Last Updated 23 ಏಪ್ರಿಲ್ 2021, 14:17 IST
   

ಲಂಡನ್: ಗಾಯದ ಸಮಸ್ಯೆ, ಕಳಪೆ ಫಾರ್ಮ್ ಹಾಗೂ ಸತತ ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ್ ರಾಯಲ್ಸ್‌ಗೆ ಮಗದೊಂದು ಆಘಾತ ಎದುರಾಗಿದ್ದು, ಸ್ಟಾರ್ ಬೌಲರ್ ಜೋಫ್ರಾ ಆರ್ಚರ್ ಸಂಪೂರ್ಣ ಟೂರ್ನಿಗೆ ಅಲಭ್ಯವಾಗಲಿದ್ದಾರೆ.

ಇದು ನೂತನ ನಾಯಕ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡದ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಭಾರತ ವಿರುದ್ಧದ ಸರಣಿ ವೇಳೆಯಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿರುವ ಆರ್ಚರ್, ಸೇವೆಯಿಂದ ರಾಜಸ್ಥಾನ್ ವಂಚಿತವಾಗಿತ್ತು. ಬಳಿಕ ಶಸ್ತ್ರಚಿಕಿತ್ಸೆಗೊಳಗಾಗಿರುವ ಆರ್ಚರ್ ವಿಶ್ರಾಂತಿ ಪಡೆದಿದ್ದರು. ಐಪಿಎಲ್ ದ್ವಿತಿಯಾರ್ಧದಲ್ಲಿ ರಾಜಸ್ಥಾನ್ ತಂಡವನ್ನು ಸೇರುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು. ಆದರೆ ಐಪಿಎಲ್ 14ನೇ ಆವೃತ್ತಿಯಲ್ಲಿ ಆರ್ಚರ್ ಭಾಗವಹಿಸುವುದಿಲ್ಲ ಎಂಬುದನ್ನು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಸ್ಪಷ್ಟಪಡಿಸಿದೆ. ಇದರೊಂದಿಗೆ ರಾಜಸ್ಥಾನ್ ತಂಡಕ್ಕೆ ಬಲವಾದ ಹೊಡೆತ ಬಿದ್ದಿದೆ.

ADVERTISEMENT

ಗಾಯದಿಂದ ಚೇತರಿಸಿಕೊಂಡಿರುವ ಆರ್ಚರ್ ಈ ವಾರದಲ್ಲಷ್ಟೇ ಬೌಲಿಂಗ್ ಅಭ್ಯಾಸವನ್ನು ಪುನರಾರಂಭಿಸಿದ್ದರು. ಈಗ ಆರ್ಚರ್ ಪ್ರಗತಿಯನ್ನು ಇಸಿಬಿ ಹಾಗೂ ಸಸ್ಸೆಕ್ಸ್ ವೈದ್ಯಕೀಯ ತಂಡವು ನಿಗಾ ವಹಿಸುತ್ತಿದೆ. ಮುಂದಿನ ವಾರದಿಂದ ಸಸ್ಸೆಕ್ಸ್ ಜೊತೆಗೆ ಪೂರ್ಣಾವಧಿಯ ತರಬೇತಿಯಲ್ಲಿ ಸೇರಲಿದ್ದಾರೆ. ಬಳಿಕ ಮುಂದಿನ 15 ದಿನಗಳ ಬಳಿಕ ಕ್ರಿಕೆಟ್‌ಗೆ ಮರಳುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

ಜೋಫ್ರಾ ಆರ್ಚರ್ ಜೊತೆಗೆ ಬೆನ್ ಸ್ಟೋಕ್ಸ್ ಸೇವೆಯಿಂದಲೂ ರಾಜಸ್ಥಾನ್ ವಂಚಿತವಾಗಿತ್ತು. ಮೊದಲ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ವೇಳೆಯಲ್ಲಿ ಸ್ಟೋಕ್ಸ್ ಕೈಗೆ ಗಾಯ ಮಾಡಿಕೊಂಡಿದ್ದರು. ಬಳಿಕ ತವರಿಗೆ ಮರಳಿದ್ದರು.

ರಾಜಸ್ಥಾನ್ ರಾಯಲ್ಸ್ ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಸೋತಿದ್ದು, ಒಂದು ಗೆಲುವಿನಿಂದ ಕೇವಲ ಎರಡು ಅಂಕಗಳನ್ನು ಮಾತ್ರ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.