ADVERTISEMENT

IPL 2021 | RR vs MI: ರಾಜಸ್ಥಾನ್ ವಿರುದ್ಧ ಟಾಸ್ ಗೆದ್ದ ಮುಂಬೈ ಬೌಲಿಂಗ್‌ ಆಯ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಅಕ್ಟೋಬರ್ 2021, 14:00 IST
Last Updated 5 ಅಕ್ಟೋಬರ್ 2021, 14:00 IST
ರೋಹಿತ್ ಶರ್ಮಾ –ಪಿಟಿಐ ಚಿತ್ರ
ರೋಹಿತ್ ಶರ್ಮಾ –ಪಿಟಿಐ ಚಿತ್ರ   

ಶಾರ್ಜಾ: ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್‌ ಟೂರ್ನಿಯ 51ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.

ರಾಜಸ್ಥಾನ್‌ ವಿರುದ್ಧ ಟಾಸ್‌ ಗೆದ್ದಿರುವ ಮುಂಬೈ, ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಪ್ಲೇ ಆಫ್ ಹಂತದ ಕನಸು ಜೀವಂತವಾಗಿರಿಸಲು ಉಭಯ ತಂಡಗಳಿಗೂ ಈ ಪಂದ್ಯದಲ್ಲಿ ಜಯ ಅನಿವಾರ್ಯವಾಗಿದೆ. ಆದ್ದರಿಂದ ಜಿದ್ದಾಜಿದ್ದಿಯ ಪೈಪೋಟಿ ನಿರೀಕ್ಷಿಸಲಾಗಿದೆ.

ADVERTISEMENT

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಪ್ರಶಸ್ತಿ ಗಳಿಕೆಯಲ್ಲಿ ಹ್ಯಾಟ್ರಿಕ್ ಸಾಧಿಸಿ ದಾಖಲೆ ಬರೆಯುವ ಗುರಿಯೊಂದಿಗೆ ಈ ಬಾರಿ ಟೂರ್ನಿಗೆ ಬಂದಿತ್ತು. ಮೊದಲ ಭಾಗದಲ್ಲಿ ಉತ್ತಮ ಸಾಮರ್ಥ್ಯ ತೋರಿತ್ತು. ಆದರೆ ಯುಎಇಯಲ್ಲಿ ನಡೆಯುತ್ತಿರುವ ಎರಡನೇ ಹಂತದ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡುತ್ತಿದೆ.

ಇತ್ತ ರಾಜಸ್ಥಾನ್ ರಾಯಲ್ಸ್ ಹಿಂದಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ಚೆನ್ನೈ ವಿರುದ್ಧ ಗೆಲುವು ದಾಖಲಿಸಿತ್ತು. 190 ರನ್‌ಗಳು ಗುರಿ ಬೆನ್ನತ್ತಿದ್ದ ತಂಡಕ್ಕೆ ಮುಂಬೈಕರ್‌ಗಳಾದ ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಏಳು ವಿಕೆಟ್‌ಗಳ ಜಯ ತಂದುಕೊಟ್ಟಿದ್ದರು.

ಭಾರಿ ಅಂತರದ ಜಯ ಅಗತ್ಯ: ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಲು ಎರಡೂ ತಂಡಗಳಿಗೆ ಉಳಿದಿರುವ ಎರಡೂ ಪಂದ್ಯಗಳಲ್ಲಿ ಜಯ ಅಗತ್ಯ. ಆದರೆ ರನ್ ರೇಟ್ ಕಡಿಮೆ ಇರುವುದರಿಂದ ಭಾರಿ ಅಂತರದಿಂದ ಜಯ ಗಳಿಸಲು ಉಭಯ ತಂಡಗಳು ಪ್ರಯತ್ನಿಸಲಿವೆ. ರಾಜಸ್ಥಾನ್ ಸದ್ಯ -0.337 ರನ್‌ ರೇಟ್ ಹೊಂದಿದ್ದು ಕಳೆದ ಪಂದ್ಯದಲ್ಲಿ ನೀರಸ ಬ್ಯಾಟಿಂಗ್ ಮಾಡಿದ್ದರಿಂದ ಮುಂಬೈನ ರನ್ ರೇಟ್ -0.453ಕ್ಕೆ ಕುಸಿದಿದೆ.

ಮಂಗಳವಾರದ ಪಂದ್ಯದಲ್ಲಿ ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ. ಗೆಲ್ಲುವ ತಂಡ ಕೋಲ್ಕತ್ತ ನೈಟ್‌ ರೈಡರ್ಸ್‌ಗಿಂತ ಅಧಿಕ ರನ್‌ ರೇಟ್ ಹೊಂದಬೇಕಾಗಿದೆ. 14 ಪಾಯಿಂಟ್ ಗಳಿಸಿರುವ ಕೋಲ್ಕತ್ತ +0.294 ರನ್ ರೇಟ್ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.