ADVERTISEMENT

ಹೈದರಾಬಾದ್‌ನಲ್ಲಿ ಐಪಿಎಲ್ ಆಯೋಜಿಸಿ: ಅಜರುದ್ದೀನ್ ಅಹ್ವಾನ

ಪಿಟಿಐ
Published 4 ಏಪ್ರಿಲ್ 2021, 14:06 IST
Last Updated 4 ಏಪ್ರಿಲ್ 2021, 14:06 IST
ಮೊಹಮ್ಮದ್ ಅಜರುದ್ದೀನ್
ಮೊಹಮ್ಮದ್ ಅಜರುದ್ದೀನ್   

ನವದೆಹಲಿ: ಮುಂಬೈನಲ್ಲಿ ಕೋವಿಡ್‌ ಪ್ರಕರಣಗಳು ಏರುಗತಿಯಲ್ಲಿವೆ. ಆದ್ದರಿಂದ ಅಲ್ಲಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ಸ್ಥಳಾಂತರಿಸುವುದಾದರೆ ಹೈದರಾಬಾದಿನಲ್ಲಿ ಆಯೋಜಿಸಲು ಸಕಲ ವ್ಯವಸ್ಥೆ ಇದೆ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಆಹ್ವಾನ ನೀಡಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 10 ಮಂದಿ ಮೈದಾನ ಸಿಬ್ಬಂದಿಗೆ ಕೋವಿಡ್ ಇರುವುದು ಶನಿವಾರ ಪತ್ತೆಯಾಗಿತ್ತು. ಕೆಲವು ಕಾರ್ಯಕ್ರಮ ವ್ಯವಸ್ಥಾಪಕರುಗಳಿಗೂ ಕೊರೊನಾ ಸೋಂಕು ಇರುವುದು ಕೂಡ ಖಚಿತವಾಗಿತ್ತು. ಆದರೆ ಮುಂದಿನ ವಾರ ಇಲ್ಲಿ ನಡೆಯಲಿರುವ ಪಂದ್ಯಗಳನ್ನು ಸ್ಥಳಾಂತರ ಮಾಡದಿರಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ. ವಾಂಖೆಡೆಯಲ್ಲಿ ಲೀಗ್ ಹಂತದ ಒಟ್ಟು ಹತ್ತು ಪಂದ್ಯಗಳು ನಡೆಯಲಿವೆ.

‘ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಬಿಸಿಸಿಐನೊಂದಿಗೆ ಎಚ್‌ಸಿಎ ಸದಾ ಇರುತ್ತದೆ. ಇಲ್ಲಿರುವ ಸೌಲಭ್ಯಗಳನ್ನು ಬಳಸಿಕೊಳ್ಳಲು ಮುಕ್ತ ಅವಕಾಶ ಇದೆ. ಪಂದ್ಯಗಳನ್ನು ಇಲ್ಲಿ ನಡೆಸುವುದಾದರೂ ಎಲ್ಲ ವ್ಯವಸ್ಥೆ ಮಾಡುವುದಾಗಿ‘ ಭಾರತ ತಂಡದ ಮಾಜಿ ನಾಯಕರೂ ಆಗಿರುವ ಅಜರುದ್ದೀನ್ ಟ್ವೀಟ್ ಮಾಡಿದ್ದಾರೆ.

ADVERTISEMENT

ಈ ಸಲದ ಐಪಿಎಲ್ ವೇಳಾಪಟ್ಟಿಯಲ್ಲಿ ಹೈದರಾಬಾದ್ ನಗರವನ್ನು ಕಾಯ್ದಿಟ್ಟ ತಾಣವಾಗಿ ಗುರುತಿಸಲಾಗಿದೆ.

ಮುಂಬೈನಲ್ಲಿ ಈಗಾಗಲೇ ಒಂಬತ್ತು ಸಾವಿರಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂಬೈ ಸೇರಿದಂತೆ ಮಹಾರಾಷ್ಟ್ರದ ಕೆಲವು ನಗರಗಳಲ್ಲಿ ಭಾಗಶಃ ಲಾಕ್‌ಡೌನ್‌ ಹಾಕುವ ಸಾಧ್ಯತೆ ಇದೆ.

‘ಲಾಕ್‌ಡೌನ್ ಇದ್ದರೂ ಕೂಡ, ತಂಡಗಳು ಬಯೋಬಬಲ್ ವಾತಾವರಣದಲ್ಲಿರುತ್ತವೆ. ಪಂದ್ಯಗಳಿಗೆ ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆದ್ದರಿಂದ ಮುಂಬೈನಲ್ಲಿ ಪೂರ್ವನಿರ್ಧರಿತ ವೇಳಾಪಟ್ಟಿಯಂತೆ ಪಂದ್ಯಗಳು ನಡೆಯುವ ಭರವಸೆ ಇದೆ. ಇದೇ 10ರಂದು ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ‘ ಎಂದು ಬಿಸಿಸಿಐ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.