ADVERTISEMENT

IPL-2022 | ಮುಂಬೈಗೆ ಸತತ 6ನೇ ಸೋಲು; ಜೀವನ ಇಷ್ಟಕ್ಕೇ ಮುಗಿದಿಲ್ಲ ಎಂದ ಬೂಮ್ರಾ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 5:17 IST
Last Updated 17 ಏಪ್ರಿಲ್ 2022, 5:17 IST
ಜಸ್‌ಪ್ರೀತ್‌ ಬೂಮ್ರಾ
ಜಸ್‌ಪ್ರೀತ್‌ ಬೂಮ್ರಾ   

ಮುಂಬೈ:ಈ ಬಾರಿಯ ಐಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಆಡಿರುವ ಎಲ್ಲ ಪಂದ್ಯಗಳಲ್ಲಿಯೂ ಸೋಲು ಕಂಡಿದೆ. ಲಖನೌ ಸೂಪರ್‌ ಜೈಂಟ್ಸ್‌ ತಂಡದ ವಿರುದ್ಧ ಶನಿವಾರ ನಡೆದ ಪಂದ್ಯದ ಬಳಿಕ ಮಾತನಾಡಿರುವ ಮುಂಬೈ ವೇಗಿ ಜಸ್‌ಪ್ರೀತ್‌ ಬೂಮ್ರಾ, ತಮ್ಮ ತಂಡದಿಂದ ಉತ್ತಮ ಆಟ ಮೂಡಿಬಂದಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಹಾಗೆಯೇ,ಜೀವನ ಇಷ್ಟಕ್ಕೇ ಮುಗಿದಿಲ್ಲ ಎಂದೂ ಹೇಳಿದ್ದಾರೆ.

ಶನಿವಾರ ನಡೆದ ಪಂದ್ಯದಲ್ಲಿ ನಾಯಕ ಕೆ.ಎಲ್‌.ರಾಹುಲ್‌ ಸಿಡಿಸಿದ ಅಮೋಘ ಶತಕದ ಬಲದಿಂದ ಲಖನೌ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಮುಂಬೈ, 9 ವಿಕೆಟ್‌ಗಳನ್ನು ಕಳೆದುಕೊಂಡು 181 ರನ್ ಗಳಿಸಲಷ್ಟೇ ಶಕ್ತವಾಯಿತು.

ರೋಹಿತ್‌ ಶರ್ಮಾ ನಾಯಕತ್ವವಿರುವ ಈ ತಂಡಕ್ಕೆ ಈ ಬಾರಿಯ ಟೂರ್ನಿಯಲ್ಲಿ ಎದುರಾದ ಆರನೇ ಸೋಲು ಇದು.ಇದರಿಂದಾಗಿ, ಐಪಿಎಲ್‌ ಕ್ರಿಕೆಟ್‌ ಟೂರ್ನಿಗಳಲ್ಲಿ ಐದು ಬಾರಿ ಚಾಂಪಿಯನ್‌ ಆಗಿರುವಮುಂಬೈ ತಂಡಕ್ಕೆ, ಈ ಬಾರಿ ಲೀಗ್‌ ಹಂತದಲ್ಲೇ ಟೂರ್ನಿಯಿಂದ ಹೊರಬೀಳುವ ಭೀತಿ ಎದುರಾಗಿದೆ.

ADVERTISEMENT

ತಂಡದ ಪ್ರದರ್ಶನದ ಕುರಿತು ಮಾತನಾಡಿರುವ ಬೂಮ್ರಾ, 'ನಾವು ಹೋರಾಟ ನೀಡಿದ್ದೇವೆ. ಕೆಲವು ಪಂದ್ಯಗಳಲ್ಲಿ ಅದೃಷ್ಟ ಜೊತೆಗಿರುತ್ತದೆ. ಆಟ ಇರುವುದೇ ಹೀಗೆ. ನಾವು ಉತ್ತಮವಾಗಿ ಆಡಿಲ್ಲ ಎಂಬ ಕಾರಣಕ್ಕೆ ಹಿಂಜರಿಯುವುದಿಲ್ಲ. ಪ್ಲೇ ಆಫ್‌ ಪಟ್ಟಿ ಈಗಲೇ ಅಂತಿಮವಾಗಿಲ್ಲ. ಉಳಿದ ಪಂದ್ಯಗಳಲ್ಲಿ ನಮ್ಮಿಂದ ಸಾಧ್ಯವಾದ ಮಟ್ಟಿಗೆ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ' ಎಂದು ಹೇಳಿದ್ದಾರೆ.

'ಜೀವನವೇ ಮುಗಿದುಹೋಗಿಲ್ಲ. ನಾಳೆ ಸೂರ್ಯ ಮತ್ತೆ ಉದಯಿಸಲಿದ್ದಾನೆ. ಇದು ಕ್ರಿಕೆಟ್‌ ಆಟವಲ್ಲವೇ? ಯಾರಾದರೂ ಗೆಲ್ಲಲೇಬೇಕು ಅಥವಾ ಸೋಲಲೇಬೇಕು. ನಾವು ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಿಲ್ಲ ಅಲ್ಲವೇ? ಕೇವಲ ಕ್ರಿಕೆಟ್‌ ಪಂದ್ಯದಲ್ಲಿ ಸೋತಿದ್ದೇವೆ. ಇದೇ ಭಾವನೆಯಲ್ಲಿ ನಮ್ಮ ತಂಡವೂ ಇದೆ. ಯಾರೊಬ್ಬರೂನಿರಾಶರಾಗಿಲ್ಲ. ನಾವು ಎಷ್ಟು ಕಠಿಣ ಪ್ರಯತ್ನ ಮಾಡಿದ್ದೇವೆ ಎಂಬುದನ್ನ ಹೊರಗಿನ ಯಾರೊಬ್ಬರೂ ನೋಡಲು ಸಾಧ್ಯವಿಲ್ಲ' ಎಂದಿದ್ದಾರೆ.

ಮುಂದುವರಿದು, 'ಖಂಡಿತವಾಗಿಯೂ ಸೋಲುಗಳು ಬೇಸರ ಮೂಡಿಸುತ್ತವೆ. ಸೋಲುವುದನ್ನು ಯಾರೂ ಇಷ್ಟಪಡುವುದಿಲ್ಲ. ಅದಕ್ಕೆ ನಾವೇನೂ ಹೊರತಲ್ಲ. ಆದರೆ, ಆಟ ಇರುವುದೇ ಹೀಗೆ. ಅದನ್ನು ಅರ್ಥ ಮಾಡಿಕೊಂಡಿದ್ದೇವೆ. ಈವರೆಗೆ ಚೆನ್ನಾಗಿ ಆಡಿಲ್ಲ ಎಂಬುದು ನಮಗೆ ಮನವರಿಕೆಯಾಗಿದೆ. ನಾವು ಇನ್ನು ಹೇಗೆಬೇಕಾದರೂ ಆಡಬಹುದು ಎಂದುಕೊಂಡಿಲ್ಲ. ಬದಲಾಗಿ, ನಮ್ಮ ನಿಯಂತ್ರಣದಲ್ಲಿ ಏನೆಲ್ಲ ಇವೆ ಎಂಬುದರತ್ತ ಚಿತ್ತ ಹರಿಸಿದ್ದೇವೆ' ಎಂದೂ ತಿಳಿಸಿದ್ದಾರೆ.

ಹಾಗೆಯೇ,ಮುಂಬರುವ ಪಂದ್ಯಗಳಲ್ಲಿ ಸಾಧ್ಯವಾದಷ್ಟು ಉತ್ತಮ ಆಟವಾಡುವ ಮೂಲಕ ಟೂರ್ನಿಯಲ್ಲಿ ಮುಂದುವರಿಯಲು ಪ್ರಯತ್ನಿಸುತ್ತೇವೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.