ನವಿ ಮುಂಬೈ: ತಲಾ ಮೂರು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿರುವ ಕನ್ನಡಿಗ ಮಯಂಕ್ ಅಗರವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಮತ್ತು ಕೇನ್ ವಿಲಿಯಮ್ಸನ್ ಮುಂದಾಳತ್ವದ ಸನ್‌ರೈಸರ್ಸ್ ಹೈದರಾಬಾದ್ ಭಾನುವಾರ ಮುಖಾಮುಖಿಯಾಗಲಿವೆ.
ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವು ರೋಚಕ ಹಣಾಹಣಿಯಾಗುವ ಎಲ್ಲ ಸಾಧ್ಯತೆಗಳೂ ಇವೆ. ಏಕೆಂದರೆ, ಎರಡೂ ತಂಡಗಳೂ ಈ ಟೂರ್ನಿಯಲ್ಲಿ ಸಿಹಿ, ಕಹಿಯನ್ನು ಸಮನಾಗಿ ಅನುಭವಿಸಿವೆ.
ಮೊದಲೆರಡು ಪಂದ್ಯಗಳಲ್ಲಿ ಸೋತ ನಂತರ ಹೈದರಾಬಾದ್ ತಂಡವು ಸತತ ಮೂರು ಜಯ ಸಾಧಿಸಿತು. ಜೇಸನ್ ರಾಯ್ ಮತ್ತು ಕೇನ್ ಉತ್ತಮ ಲಯದಲ್ಲಿದ್ದಾರೆ. ಜೇಸನ್ ಹೋಲ್ಡರ್, ಭುವನೇಶ್ವರ್ ಕುಮಾರ್ ಮತ್ತು ಅಫ್ಗನ್ ಸ್ಪಿನ್ನರ್ ರಶೀದ್ ಖಾನ್ ಕೊನೆಯ ಎಸೆತದವರೆಗೂ ಛಲದ ಹೋರಾಟ ಮಾಡುವ ನುರಿತ ಬೌಲರ್‌ಗಳು.
ಪಂಜಾಬ್ ತಂಡವು ಆರ್‌ಸಿಬಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಸೋಲಿಸಿದೆ. ತಾನು ಸೋತ ಪಂದ್ಯಗಳಲ್ಲಿಯೂ ವಿರೋಚಿತ ಹೋರಾಟ ಮಾಡಿತ್ತು.ಮಯಂಕ್, ಶಿಖರ್ ಧವನ್, ಹೊಸಪ್ರತಿಭೆ ಜಿತೇಶ್ ಶರ್ಮಾ ಉತ್ತಮ ಲಯದಲ್ಲಿದ್ದಾರೆ. ಆಲ್‌ರೌಂಡರ್ ಒಡೀನ್ ಸ್ಮಿತ್ ಪಂದ್ಯವನ್ನು ಗೆದ್ದುಕೊಡುವ ಆಟಗಾರನೆಂದು ಸಾಬೀತು ಮಾಡಿದ್ದಾರೆ. ರಬಾಡ ಮತ್ತು ಆರ್ಷದೀಪ್ ಸಿಂಗ್ ಕೂಡ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.