ADVERTISEMENT

ಐಪಿಎಲ್‌ 2022: ಆರ್‌ಸಿಬಿ ಪ್ಲೇ ಆಫ್‌ ಹಾದಿ ಕುತೂಹಲದ ಕಣಜ

ತನ್ನ ಪಾಲಿನ ಮೂರು ಪಂದ್ಯಗಳಲ್ಲಿ ಜಯಿಸುವ ಒತ್ತಡದಲ್ಲಿ ಪಂಜಾಬ್ ಕಿಂಗ್ಸ್

ಗಿರೀಶದೊಡ್ಡಮನಿ
Published 12 ಮೇ 2022, 19:30 IST
Last Updated 12 ಮೇ 2022, 19:30 IST
ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ, ಶಹಬಾಜ್ ಅಹಮದ್ ಸಂಭ್ರಮ –ಪಿಟಿಐ ಚಿತ್ರ
ಆರ್‌ಸಿಬಿ ತಂಡದ ವಿರಾಟ್ ಕೊಹ್ಲಿ, ಶಹಬಾಜ್ ಅಹಮದ್ ಸಂಭ್ರಮ –ಪಿಟಿಐ ಚಿತ್ರ   

ಮುಂಬೈ/ಬೆಂಗಳೂರು: ಪ್ಲೇ ಆಫ್‌ ಪ್ರವೇಶಿಸುವ ಒತ್ತಡದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಶುಕ್ರವಾರ ಮುಖಾಮುಖಿಯಾಗಲಿವೆ.

ಪ್ಲೇ ಆಫ್‌ ಹಾದಿಯು ಉಭಯ ತಂಡಗಳಿಗೂ ಸುಗಮವಾಗಿಲ್ಲ. ಕೊನೆಯ ಹಂತದತ್ತ ಸಾಗುತ್ತಿರುವ ಲೀಗ್ ಸುತ್ತಿನ ಪಾಯಿಂಟ್ ಪಟ್ಟಿ ಅಪಾರ ಕುತೂಹಲ ಕೆರಳಿಸಿದೆ. ಬೆಂಗಳೂರು ತಂಡವು ನಾಲ್ಕನೇ ಸ್ಥಾನದಲ್ಲಿದ್ದರೂ ತನ್ನ ಪಾಲಿಗೆ ಉಳಿದಿರುವ ಎರಡೂ ಪಂದ್ಯಗಳಲ್ಲಿ ಜಯಿಸಿದರೆ ಮಾತ್ರ ಕ್ವಾಲಿಫೈಯರ್ ಆಡುವುದು ಖಚಿತವಾಗಬಹುದು. ಪಂಜಾಬ್ ಕೂಡ ತನಗುಳಿದಿರುವ ಮೂರು ಪಂದ್ಯಗಳಲ್ಲಿಯೂ ಗೆಲ್ಲಬೇಕು. ಮಯಂಕ್ ಅಗರವಾಲ್ ನಾಯಕತ್ವದ ಪಂಜಾಬ್ ತಂಡಕ್ಕೆ ಇದು ಕಠಿಣ ಹಾದಿಯೇ ಆಗಿದೆ.ಆರ್‌ಸಿಬಿ, ಡೆಲ್ಲಿ ಮತ್ತು ಸನ್‌ರೈಸರ್ಸ್ ತಂಡಗಳನ್ನು ಅದು ಎದುರಿಸಲಿದೆ.

ಬೆಂಗಳೂರು ತಂಡವು ಪಂಜಾಬ್ ಎದುರು ಗೆದ್ದರೆ ಪ್ಲೇ ಆಫ್‌ ಹಾದಿ ಸುಲಭವಾಗಲಿದೆ. ಒಂದೊಮ್ಮೆ ಸೋತರೆ, 19ರಂದು ನಡೆಯುವ ಕೊನೆಯ ಪಂದ್ಯದಲ್ಲಿ ಜಯಿಸಲೇಬೇಕಾದ ಒತ್ತಡಕ್ಕೆ ಸಿಲುಕಲಿದೆ.ಸದ್ಯ 14 ಅಂಕಗಳನ್ನು ಗಳಿಸಿರುವ ಫಫ್ ಡುಪ್ಲೆಸಿ ಬಳಗವು ನೆಗೆಟಿವ್ ರನ್‌ರೇಟ್ ಹೊಂದಿದೆ. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 14 ಅಂಕಗಳಿಸಿ ಮೂರನೇ ಸ್ಥಾನದಲ್ಲಿರುವ ರಾಜಸ್ಥಾನ ಮತ್ತು ಐದನೇ ಸ್ಥಾನದಲ್ಲಿರುವ ಡೆಲ್ಲಿ 12 ಅಂಕ ಗಳಿಸಿದೆ. ಆದರೆ ಪಾಸಿಟಿವ್ ನೆಟ್‌ ರನ್‌ ರೇಟ್ ಹೊಂದಿದೆ. ರಾಜಸ್ಥಾನ ತಂಡವು ಲಖನೌ ಮತ್ತು ಚೆನ್ನೈ ಎದುರು; ಡೆಲ್ಲಿ ತಂಡವು ಪಂಜಾಬ್ ಮತ್ತು ಮುಂಬೈ ಎದುರು ಆಡುವುದು ಬಾಕಿ ಇದೆ.

ADVERTISEMENT

ಒಂದೊಮ್ಮೆ ಡೆಲ್ಲಿ ಮತ್ತು ರಾಜಸ್ಥಾನ ತಂಡಗಳು ತಮ್ಮ ಪಾಲಿನ ಎರಡೂ ಪಂದ್ಯಗಳಲ್ಲಿಯೂ ಗೆದ್ದು,ಆರ್‌ಸಿಬಿಯು ತನ್ನ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಸೋತರೂ ಪ್ಲೇ ಆಫ್‌ ಪ್ರವೇಶಿಸುವ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದೆ.

ಗುಜರಾತ್ ಟೈಟನ್ಸ್‌ 18 ಅಂಕಗಳೊಂದಿಗೆ ಈಗಾಗಲೇ ಪ್ಲೇ ಆಫ್‌ ಪ್ರವೇಶಿಸಿದೆ. ಕೆ.ಎಲ್. ರಾಹುಲ್ ನಾಯಕತ್ವದ ಲಖನೌ ತಂಡ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನುಳಿದಿರುವ ಎರಡು ಪಂದ್ಯಗಳಲ್ಲಿ ಒಂದು ಗೆದ್ದರೂ ಪ್ಲೇ ಆಫ್‌ ಖಚಿತ.

ಆರನೇ ಸ್ಥಾನದಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡವೂ ಇನ್ನೂ ಮೂರು ಪಂದ್ಯ ಆಡಬೇಕಿದೆ. ಎಲ್ಲ ಪಂದ್ಯಗಳಲ್ಲಿ ಗೆದ್ದರೆ ಸನ್‌ರೈಸರ್ಸ್‌ಗೆ ಪ್ಲೇ ಆಫ್ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.