ADVERTISEMENT

IPL 2024 | 42ರ ಹರೆಯದಲ್ಲೂ ಅದ್ಭುತ ಕ್ಯಾಚ್ ಪಡೆದ ಧೋನಿ; ಫ್ಯಾನ್ಸ್ ಫಿದಾ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಮಾರ್ಚ್ 2024, 7:17 IST
Last Updated 27 ಮಾರ್ಚ್ 2024, 7:17 IST
<div class="paragraphs"><p>ಮಹೇಂದ್ರ ಸಿಂಗ್ ಧೋನಿ</p></div>

ಮಹೇಂದ್ರ ಸಿಂಗ್ ಧೋನಿ

   

(ಟ್ವಿಟರ್ ಚಿತ್ರ)

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸತತ ಎರಡನೇ ಗೆಲುವು ದಾಖಲಿಸಿದೆ. ಚೆನ್ನೈಯ ಎಂ.ಚಿದಂಬರಂ ಮೈದಾನದಲ್ಲಿ ಮಂಗಳವಾರ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 63 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ADVERTISEMENT

ಈ ಮೊದಲು ಇದೇ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಉದ್ಘಾಟನಾ ಪಂದ್ಯದಲ್ಲೂ ಸಿಎಸ್‌ಕೆ ಗೆಲುವು ದಾಖಲಿಸಿತ್ತು.

ಈ ಎರಡೂ ಪಂದ್ಯಗಳಲ್ಲಿ ಧೋನಿ ಬ್ಯಾಟಿಂಗ್ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ. ಏಕೆಂದರೆ ಧೋನಿಗೆ ಬ್ಯಾಟಿಂಗ್ ಮಾಡಲು ಅವಕಾಶವೇ ಸಿಗಲಿಲ್ಲ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಧೋನಿ ಪ್ಯಾಡ್ ಕಟ್ಟಿ ಸಿದ್ಧರಾಗಿ ನಿಂತರೂ ಬ್ಯಾಟಿಂಗ್ ಮಾಡಲು ಅವಕಾಶ ದೊರಕಲಿಲ್ಲ.

ಧೋನಿ ಅದ್ಭುತ ಕ್ಯಾಚ್...

ಆದರೆ ತಮ್ಮ 42ರ ಹರೆಯದಲ್ಲೂ ವಿಕೆಟ್ ಹಿಂದುಗಡೆ ಅದ್ಭುತ ಕ್ಯಾಚ್ ಪಡೆದಿರುವ ಧೋನಿ ಮೋಡಿ ಮಾಡಿದ್ದಾರೆ. ಡ್ಯಾರಿಲ್ ಮಿಚೆಲ್ ದಾಳಿಯಲ್ಲಿ ವಿಜಯ್ ಶಂಕರ್ ಬ್ಯಾಟ್‌ಗೆ ಸವರಿದ ಚೆಂಡನ್ನು ತನ್ನ ಬಲ ಬದಿಯತ್ತ ಡೈವ್ ಹೊಡೆದು ಧೋನಿ ಅದ್ಭುತವಾಗಿ ಹಿಡಿದರು. ಈ ವೇಳೆ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಐಪಿಎಲ್‌ನಲ್ಲಿ ಮಾತ್ರ ತೊಡಗಿಸಿಕೊಂಡಿರುವ ಧೋನಿ, ಅಮೋಘ ವಿಕೆಟ್ ಕೀಪಿಂಗ್ ಕೌಶಲ್ಯ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ 'ವಯಸ್ಸು ಕೇವಲ ಸಂಖ್ಯೆ ಮಾತ್ರ' ಎಂಬುದನ್ನು ಮಗದೊಮ್ಮೆ ಸಾಬೀತುಪಡಿಸಿದ್ದಾರೆ.

ಧೋನಿ ಕ್ಯಾಚ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಆಟಗಾರ ಸುರೇಶ್ ರೈನಾ, 'ಟೈಗರ್ ಅಭಿ ಜಿಂದಾ ಹೈ' ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಮಹಿ ಮತ್ತಷ್ಟು ಶಕ್ತಿಶಾಲಿಯಾಗಿ ಮುನ್ನಡೆಯುತ್ತಿದ್ದು, ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಐದು ಬಾರಿ ಚಾಂಪಿಯನ್ ಸಿಎಸ್‌ಕೆ ತಂಡದ ನಾಯಕತ್ವ ಸ್ಥಾನವನ್ನು ಧೋನಿ ಅವರು ಯುವ ಆಟಗಾರ ಋತುರಾಜ್ ಗಾಯಕವಾಡ್ ಅವರಿಗೆ ಹಸ್ತಾಂತರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.