ADVERTISEMENT

ಬೈಕ್‌ ಅಪಘಾತ: ಗುಜರಾತ್ ಟೈಟನ್ಸ್ ತಂಡದ ವಿಕೆಟ್ ಕೀಪರ್ ರಾಬಿನ್‌ಗೆ ಗಾಯ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 14:29 IST
Last Updated 3 ಮಾರ್ಚ್ 2024, 14:29 IST
ರಾಬಿನ್ ಮಿಂಜ್
ರಾಬಿನ್ ಮಿಂಜ್   

ರಾಂಚಿ: ಗುಜರಾತ್ ಟೈಟನ್ಸ್ ತಂಡದ ಯುವ ವಿಕೆಟ್ ಕೀಪರ್ ರಾಬಿನ್ ಮಿಂಜ್ ಅವರು ಶನಿವಾರ ಬೈಕ್‌ ಅಪಘಾತದಲ್ಲಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ತಂದೆ ಫ್ರಾನ್ಸಿಸ್ ಮಿಂಜ್ ತಿಳಿಸಿದ್ದಾರೆ.

ಜಾರ್ಖಂಡ್‌ನಲ್ಲಿ ಬೈಕ್‌ ಮತ್ತು ಮೋಟಾರ್‌ ಸೈಕಲ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ರಾಬಿನ್‌ ಅವರ ಬೈಕ್‌ನ ಮುಂಭಾಗಕ್ಕೆ ತೀವ್ರ ಹಾನಿಯಾಗಿದೆ. ಅವರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.

‘ರಾಬಿನ್‌ ಮೂಗಿನ ಭಾಗಕ್ಕೆ ಸಣ್ಣ ಗಾಯವಾಗಿದ್ದು, ಗಂಭೀರವಾದ ಸಮಸ್ಯೆ ಇಲ್ಲ’ ಎಂದು ರಾಂಚಿ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಫ್ರಾನ್ಸಿಸ್ ಅವರು ಮಾಹಿತಿ ನೀಡಿದ್ದಾರೆ.

ADVERTISEMENT

21 ವರ್ಷದ ರಾಬಿನ್‌ ಅವರು ಕರ್ನಲ್‌ ಸಿ.ಕೆ. ನಾಯ್ಡು ಟ್ರೋಫಿ ಟೂರ್ನಿಯಲ್ಲಿ ಜಾರ್ಖಂಡ್‌ ತಂಡಕ್ಕೆ ಆಡಿದ್ದರು. ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ವಿರುದ್ಧ 137 ರನ್‌ ಗಳಿಸಿ ಮಿಂಚಿದ್ದರು. ಆದರೆ, ಇನಿಂಗ್ಸ್‌ ಮುನ್ನಡೆ ಬಲದಿಂದ ಕರ್ನಾಟಕ ತಂಡವು ಸೆಮಿಫೈನಲ್‌ ಪ್ರವೇಶಿಸಿತ್ತು.

2024ರ ಐಪಿಎಲ್‌ ಹರಾಜಿನಲ್ಲಿ ₹ 3.6 ಕೋಟಿ ಮೊತ್ತಕ್ಕೆ ಗುಜರಾತ್‌ ತಂಡದ ಪಾಲಾಗಿರುವ ರಾಬಿನ್‌ ಅವರು ಅಹಮದಾಬಾದ್‌ನಲ್ಲಿ ನಡೆಯಲಿರುವ ಟೈಟನ್ಸ್‌ನ ಅಭ್ಯಾಸ ಶಿಬಿರವನ್ನು ಶೀಘ್ರದಲ್ಲೇ ಸೇರಬೇಕಿತ್ತು. ಆದರೆ, ಈ ಘಟನೆಯಿಂದಾಗಿ ಅವರು ತಂಡವನ್ನು ಸೇರಲು ವಿಳಂಬವಾಗಬಹುದು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.