ಚೆನ್ನೈ: ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪ್ಯಾಟ್ ಕಮಿನ್ಸ್ ಮುನ್ನಡೆಸುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಶುಕ್ರವಾರ ಮುಖಾಮುಖಿಯಾಗಲಿವೆ.
ಎರಡೂ ತಂಡಗಳು ತಲಾ 8 ಪಂದ್ಯಗಳನ್ನು ಆಡಿ, ಎರಡರಲ್ಲಿ ಜಯಿಸಿವೆ. ಉಳಿದದ್ದರಲ್ಲಿ ಸೋತಿವೆ. ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಚೆನ್ನೈಗಿಂತ ನಿವ್ವಳ ರನ್‌ರೇಟ್‌ನಲ್ಲಿ ಸ್ವಲ್ಪ ಉತ್ತಮವಾಗಿರುವ ಹೈದರಾಬಾದ್ 9ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಪ್ರವೇಶಿಸುವ ಅವಕಾಶ ಜೀವಂತವಾಗಿರಿಸಿಕೊಳ್ಳಬೇಕಾದರೆ ಇತ್ತಂಡಗಳು ಕಠಿಣ ಹಾದಿಯನ್ನು ಸವೆಸಬೇಕಿದೆ. ಉಳಿದಿರುವ ಆರು ಪಂದ್ಯಗಳಲ್ಲಿ ತಂಡಗಳು ಜಯಿಸಲೇಬೇಕಾದ ಒತ್ತಡದಲ್ಲಿವೆ.
ಐದು ಸಲದ ಚಾಂಪಿಯನ್ ಚೆನ್ನೈ ತಂಡವು ಈ ಬಾರಿ ತವರಿನಂಗಳದ ಲಾಭವನ್ನು ಪೂರ್ಣಪ್ರಮಾಣದಲ್ಲಿ ಪಡೆಯುವಲ್ಲಿ ವಿಫಲವಾಗಿದೆ. ಚೆಪಾಕ್ ಕ್ರೀಡಾಂಗಣದ ಪಿಚ್ ಗುಣವನ್ನು ಅರಿಯುವಲ್ಲಿ ಚೆನ್ನೈ ಆಟಗಾರರು ಯಶಸ್ವಿಯಾಗುತ್ತಿಲ್ಲ. ಟೂರ್ನಿಯ ಮೊದಲ ಪಂದ್ಯದಲ್ಲಿ ಚೆನ್ನೈ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಜಯಿಸಿತ್ತು. ನಂತರ ಸತತ ಐದು ಪಂದ್ಯಗಳಲ್ಲಿ ಸೋತಿತ್ತು.
ಹೋದ ವಾರ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಏಕನಾ ಕ್ರೀಡಾಂಗಣದಲ್ಲಿ ಸೋಲಿಸುವ ಮೂಲಕ ಧೋನಿ ಬಳಗದ ಸೋಲಿನ ಸರಪಳಿ ತುಂಡಾಗಿತ್ತು. ಆದರೆ ನಾಲ್ಕು ದಿನಗಳ ಹಿಂದೆ ಮುಂಬೈ ಇಂಡಿಯನ್ಸ್ ಎದುರು ತಂಡವು ಮಣಿದಿತ್ತು.
ಚೆನ್ನೈನ ಆರಂಭಿಕ ಬ್ಯಾಟರ್ ಶೇಖ್ ರಶೀದ್, ರಚಿನ್ ರವೀಂದ್ರ ಅವರ ಅಸ್ಥಿರವಾದ ಫಾರ್ಮ್ ತಂಡಕ್ಕೆ ದುಬಾರಿಯಾಗುತ್ತಿದೆ. ರವಿಂದ್ರ ಜಡೇಜ, ಶಿವಂ ದುಬೆ, ಯುವ ಆಟಗಾರ ಆಯುಷ್ ಮಾತ್ರೆ ಮತ್ತು 43 ವರ್ಷ ವಯಸ್ಸಿನ ಮಹೇಂದ್ರಸಿಂಗ್ ಧೋನಿ ಅವರು ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಿದ್ದಾರೆ. ನೂರ್ ಅಹಮದ್, ಮಥೀಷ ಪಥಿರಾಣ, ಖಲೀಲ್ ಅಹಮದ್, ಜಡೇಜ ಮತ್ತು ಅಶ್ವಿನ್ ಅವರಿರುವ ಬೌಲಿಂಗ್ ಪಡೆಯ ಮುಂದೆ ಈಗ ಸನ್‌ರೈಸರ್ಸ್ ತಂಡದ ಬ್ಯಾಟರ್‌ಗಳ ಅಬ್ಬರಕ್ಕೆ ತಡೆಯೊಡ್ಡುವ ಸವಾಲು ಇದೆ.
ಹೈದರಾಬಾದ್ ತಂಡದ ಬ್ಯಾಟಿಂಗ್ ಪಡೆ ಬಲಾಢ್ಯವಾಗಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಭರ್ಜರಿ ಆರಂಭ ಮಾಡಿದ್ದ ತಂಡವು ನಂತರದ ಪಂದ್ಯಗಳಲ್ಲಿ ಮಂಕಾಗಿದೆ. ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ನಿತೀಶ್ ರೆಡ್ಡಿ, ಅನಿಕೇತ್ ವರ್ಮಾ ಹಾಗೂ ಇಶಾನ್ ಕಿಶನ್ ಅವರ ಅಸ್ಥಿರ ಪ್ರದರ್ಶನದಿಂದಾಗಿ ದೊಡ್ಡ ಮೊತ್ತ ಪೇರಿಸಲಾಗುತ್ತಿಲ್ಲ. ಕಳೆದ ಪಂದ್ಯದಲ್ಲಿ ಮುಂಬೈ ಎದುರು ಸನ್‌ರೈಸರ್ಸ್ 35 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಹೆನ್ರಿಚ್ ಕ್ಲಾಸನ್ ಮತ್ತು ಅಭಿನವ್ ಮನೋಹರ್ ಅವರ ಸಮಯೋಚಿತ ಆಟದಿಂದಾಗಿ ತಂಡವು 100 ರನ್‌ಗಳ ಗಡಿ ದಾಟಲು ಸಾಧ್ಯವಾಗಿತ್ತು.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.