ಮುಂಬೈ ಇಂಡಿಯನ್ಸ್ ತಂಡ
ಚಿತ್ರಕೃಪೆ: X/cricbuzz
ಜೈಪುರ: ಮುಂಬೈ ಇಂಡಿಯನ್ಸ್ ಹಾಲಿ ಐಪಿಎಲ್‌ನಲ್ಲಿ ಸತತ ಆರನೇ ಗೆಲುವನ್ನು ಅಧಿಕಾರಯುತ ರೀತಿಯಲ್ಲಿ ಸಾಧಿಸಿತು. ಸರ್ವಾಂಗೀಣ ಪ್ರದರ್ಶನ ನೀಡಿದ ಮುಂಬೈ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ನೂರು ರನ್‌ಗಳಿಂದ ಸುಲಭವಾಗಿ ಸೋಲಿಸಿತು. ರಾಯಲ್ಸ್ ಪ್ಲೇಆಫ್ ಕನಸು ಭಗ್ನಗೊಂಡಿತು.
ಆರಂಭ ಆಟಗಾರರಾದ ರೋಹಿತ್ ಶರ್ಮಾ (53, 36ಎ) ಮತ್ತು ರಿಯಾನ್ ರಿಕೆಲ್ಟನ್ (61, 38ಎ) ಆಕರ್ಷಕ ಅರ್ಧಶತಕ ಬಾರಿಸಿದ ನಂತರ ಸೂರ್ಯಕುಮಾರ್ ಯಾದವ್ (ಔಟಾಗದೇ 48, 23ಎ) ಮತ್ತು ನಾಯಕ ಹಾರ್ದಿಕ್ ಪಾಂಡ್ಯ (ಔಟಾಗದೇ 48, 23ಎ) ಅವರು ಬಿರುಸಿನ ಆಟವಾಡಿ ದ್ದರಿಂದ ಮುಂಬೈ 2 ವಿಕೆಟ್‌ಗೆ 217 ರನ್‌ಗಳ ಉತ್ತಮ ಮೊತ್ತ ಗಳಿಸಿತು.
ಮೂರು ದಿನಗಳ ಹಿಂದೆ ಗುಜರಾತ್ ಟೈಟನ್ಸ್ ನೀಡಿದ 210 ರನ್‌ಗಳ ಸವಾಲನ್ನು ನಾಲ್ಕು ಓವರುಗಳಿ
ರುವಂತೆ ಮೆಟ್ಟಿ ನಿಂತಿದ್ದ ರಾಯಲ್ಸ್ ಇಂದು ಆರಂಭದಲ್ಲೇ ಎಡವಿತು. ನಂತರ ಚೇತರಿಸಲಿಲ್ಲ. 16.1 ಓವರುಗಳಲ್ಲಿ 117 ರನ್‌ಗಳಿಗೆ ಆಲೌಟ್ ಆಯಿತು. ಇದು 11 ಪಂದ್ಯಗಳಲ್ಲಿ ರಾಯಲ್ಸ್‌ಗೆ ಎಂಟನೇ ಸೋಲು. ಮುಂಬೈ ತಂಡಕ್ಕೆ ಇನ್ನೊಂದು ಗೆಲುವು ಪ್ಲೇ ಆಫ್ ಬಾಗಿಲು ತೆರೆಯಲಿದೆ.
ಸೋಮವಾರ ರಾತ್ರಿ ಅಮೋಘ ಆಟವಾಡಿ ಕ್ರಿಕೆಟ್ ಜಗತ್ತನ್ನು ತನ್ನತ್ತ ಗಮನಿಸುವಂತೆ ಮಾಡಿದ್ದ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ (2 ಎಸೆತ) ಖಾತೆ ತೆರೆಯುವ ಮೊದಲೇ ದೀಪಕ್ ಚಾಹರ್ ಬೌಲಿಂಗ್‌ನಲ್ಲಿ ಮಿಡ್‌ಆನ್‌ನಲ್ಲಿ ಕ್ಯಾಚಿತ್ತರು. ಅವರ ಜೊತೆಗಾರ ಯಶಸ್ವಿ ಜೈಸ್ವಾಲ್, ಟ್ರಂಟ್ ಬೌಲ್ಟ್ (28ಕ್ಕೆ 3) ಬೌಲಿಂಗ್‌ನಲ್ಲಿ ಎರಡು ಸಿಕ್ಸರ್ ಎತ್ತಿದರೂ, ನಂತರ ಅದೇ ಬೌಲರ್‌ಗೆ ಬೌಲ್ಡ್ ಆದರು. ಬೂಮ್ರಾ (15ಕ್ಕೆ 2) ಅವರು ಶಾರ್ಟ್‌ಪಿಚ್ ಎಸೆತಗಳಲ್ಲಿ ರಿಯಾನ್ ಪರಾಗ್ (16) ಮತ್ತು ಶಿಮ್ರಾನ್ ಹೆಟ್ಮೆಯರ್ (0) ಅವರ ವಿಕೆಟ್‌ಗಳನ್ನು ಪಡೆದರು. ಅಲ್ಲಿಗೆ ನಂತರ ರಾಯಲ್ಸ್ ಪ್ರತಿರೋಧ ಅಡಗಿತು. ಕೊನೆಯಲ್ಲಿ ಜೋಫ್ರಾ ಆರ್ಚರ್ 30 ರನ್ ಗಳಿಸಿದ್ದರಿಂದ ತಂಡದ ಮೊತ್ತ ಶತಕ ದಾಟಿತು.
ಇದಕ್ಕೆ ಮೊದಲು, ಬ್ಯಾಟಿಂಗಿಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್, ರೋಹಿತ್ ಮತ್ತು ರಿಕೆಲ್ಟನ್ ಅವರಿಂದ 116 ರನ್‌ಗಳ ಭದ್ರ ಅಡಿಪಾಯ ಪಡೆಯಿತು. ನಂತರ ಸೂರ್ಯಕುಮಾರ್ ಯಾದವ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಅವರೂ ಮಿಂಚಿನ ಆಟವಾಡಿ ರಾಯಲ್ಸ್ ತಂಡವನ್ನು ಮತ್ತಷ್ಟು ಒತ್ತಡಕ್ಕೆ ತಳ್ಳಿದರು.
ಸೂರ್ಯಕುಮಾರ್ ಮತ್ತು ಹಾರ್ದಿಕ್ ಮುರಿಯದ ಮೂರನೇ ವಿಕೆಟ್‌ಗ 94 ರನ್ ಸೇರಿಸಿದರು. ಕೊನೆಯ ಐದು ಓವರುಗಳಲ್ಲಿ ಇಬ್ಬರಿಬ್ಬರು 71 ರನ್ ಸೂರೆ ಮಾಡಿ ತಂಡದ ಮೊತ್ತವನ್ನು ಸುಲಭವಾಗಿ 200ರ ಗಡಿ ದಾಟಿಸಿದರು. ಸೂರ್ಯ ಆಟದಲ್ಲಿ ನಾಲ್ಕು ಸಿಕ್ಸರ್, ಮೂರು ಬೌಂಡರಿಗಳಿದ್ದವು.
ಜೋಫ್ರಾ ಆರ್ಚರ್ ಅವರ ಮೊದಲ ಓವರ್ ಬಿಗುವಾಗಿತ್ತು. ಆದರೆ ಅವರ ಎರಡನೇ ಓವರಿನಲ್ಲಿ ಮುಂಬೈ ಆರಂಭ ಆಟಗಾರರು 18 ರನ್ ಬಾಚಿದರು. ರೋಹಿತ್ ಕಟ್, ಡ್ರೈವ್‌ಗಳನ್ನು
ಪ್ರದರ್ಶಿಸಿದರೆ, ರಿಕೆಲ್ಟನ್ ಮಿಡ್‌ವಿಕೆಟ್‌ಗೆ ಪುಲ್ ಮಾಡಿ ಭರ್ಜರಿ ಸಿಕ್ಸರ್ ಗಳಿಸಿದರು. ಫಝಲ್ ಹಖ್ ಫಾರೂಖಿ ಬೌಲಿಂಗ್‌ನಲ್ಲಿ ರಿಕೆಲ್ಟನ್ ಫ್ಲಿಕ್ ಮೂಲಕ ಸಿಕ್ಸರ್ ಎತ್ತಿದ್ದೂ ಗಮನ ಸೆಳೆಯಿತು. ಪವರ್‌ಪ್ಲೇ ಅವಧಿಯಲ್ಲಿ ಮುಂಬೈ 58 ರನ್ ಗಳಿಸಿತು. ಲೀಗ್‌ನ ಆರಂಭದ ಪಂದ್ಯಗಳಲ್ಲಿ ಪರದಾಡಿದ್ದ ರೋಹಿತ್ ಈಗ ಪ್ರತಿಯೊಂದು ಪಂದ್ಯದಲ್ಲಿ ರನ್ ಹರಿಸುತ್ತಿದ್ದಾರೆ.
ಇಬ್ಬರೂ ಅಲ್ಪಅಂತರದಲ್ಲಿ ನಿರ್ಗಮಿಸಿದರು. ರಿಕೆಲ್ಟನ್ 12ನೇ ಓವರಿನಲ್ಲಿ ತೀಕ್ಷಣ ಅವರಿಗೆ ಬೌಲ್ಡ್ ಆಗುವ ಮೂಲಕ ಶತಕದ ಜೊತೆಯಾಟ ಮುರಿಯಿತು. ಐದು ಎಸೆತಗಳ ತರುವಾಯ, ಪರಾಗ್ ಬೌಲಿಂಗ್‌ನಲ್ಲಿ ರೋಹಿತ್ ಲಾಂಗ್‌ಆಫ್‌ನಲ್ಲಿ ಯಶಸ್ವಿ ಜೈಸ್ವಾಲ್‌ಗೆ ಕ್ಯಾಚಿತ್ತರು.
ಸಂಕ್ಷಿಪ್ತ ಸ್ಕೋರು:
ಮುಂಬೈ ಇಂಡಿಯನ್ಸ್: 20 ಓವರುಗಳಲ್ಲಿ 2 ವಿಕೆಟ್‌ಗೆ 217 (ರಿಯಾನ್ ರಿಕೆಲ್ಟನ್ 61, ರೋಹಿತ್ ಶರ್ಮ 53, ಸೂರ್ಯಕುಮಾರ್ ಯಾದವ್ ಔಟಾಗದೇ 48, ಹಾರ್ದಿಕ್ ಪಾಂಡ್ಯ ಔಟಾಗದೇ 48, ಮಹೀಷ ತೀಕ್ಷಣ 47ಕ್ಕೆ1, ರಿಯಾನ್ ಪರಾಗ್ 12ಕ್ಕೆ1); ರಾಜಸ್ಥಾನ ರಾಯಲ್ಸ್: 16.1 ಓವರುಗಳಲ್ಲಿ 117 (ಯಶಸ್ವಿ ಜೈಸ್ವಾಲ್ 13, ರಿಯಾನ್ ಪರಾಗ್ 16, ಶುಭಂ ದುಬೆ 15, ಜೋಫ್ರಾ ಆರ್ಚರ್ 30; ಟ್ರೆಂಟ್ ಬೌಲ್ಟ್ 28ಕ್ಕೆ3, ಜಸ್‌ಪ್ರೀತ್ ಬೂಮ್ರಾ 15ಕ್ಕೆ2, ಕರ್ಣ ಶರ್ಮಾ 23ಕ್ಕೆ3); ಪಂದ್ಯದ ಆಟಗಾರ: ರಿಯಾನ್ ರಿಕೆಲ್ಟನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.