ADVERTISEMENT

ನಾಳೆ ಐಪಿಎಲ್ ಆಟಗಾರರ ಹರಾಜು: ಪಂಜಾಬ್ ಬಳಿ ₹ 53 ಕೋಟಿ, ಇಲ್ಲಿದೆ ಪ್ರಮುಖಾಂಶ

ಪಿಟಿಐ
Published 17 ಫೆಬ್ರುವರಿ 2021, 11:07 IST
Last Updated 17 ಫೆಬ್ರುವರಿ 2021, 11:07 IST
ಅನಿಲ್ ಕುಂಬ್ಳೆ: ಪಂಜಾಬ್ ಕಿಂಗ್ಸ್ ತಂಡದ ಕೋಚ್: ಎಎಫ್‌ಪಿ ಚಿತ್ರ
ಅನಿಲ್ ಕುಂಬ್ಳೆ: ಪಂಜಾಬ್ ಕಿಂಗ್ಸ್ ತಂಡದ ಕೋಚ್: ಎಎಫ್‌ಪಿ ಚಿತ್ರ   

ಚೆನ್ನೈ: ಗುರುವಾರ ಇಲ್ಲಿ ಐಪಿಎಲ್–14ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಭಾರತದ 164 ಮತ್ತು ವಿದೇಶದ 125 ಆಟಗಾರರು ಸೇರಿ ಐಪಿಎಲ್ ಬಿಡ್ಡಿಂಗ್‌ನಲ್ಲಿ ಈ ಬಾರಿ 292 ಆಟಗಾರರು ಭಾಗವಹಿಸುತ್ತಿದ್ದಾರೆ. ಬಿಗ್ ಬ್ಯಾಷ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ಇಂಗ್ಲೆಂಡ್‌ನ ಸ್ಪಿನ್ ಆಲ್‌ರೌಂಡರ್ ಮೋಯಿನ್ ನೆಚ್ಚಿನ ಆಟಗಾರರಾಗಿದ್ದಾರೆ.

ಪಂಜಾಬ್ ಬಳಿ ₹ 53 ಕೋಟಿ: ಎಂಟು ಫ್ರಾಂಚೈಸಿಗಳಲ್ಲಿ 61 ಸ್ಲಾಟ್‌ಗಳಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಕಿಸೆಯಲ್ಲಿ ₹ 35.4 ಕೋಟಿ ಹೊಂದಿದ್ದು, ಗರಿಷ್ಠ 11 ಆಟಗಾರರನ್ನು ಖರೀದಿಸಬಹುದಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ಕೇವಲ ಮೂರು ಸ್ಲಾಟ್‌ಗಳನ್ನು ಹೊಂದಿದ್ದು, ₹ 10.75 ಕೋಟಿ ಹಣ ಇಟ್ಟುಕೊಂಡಿದೆ.

ಅನಿಲ್ ಕುಂಬ್ಳೆ ತರಬೇತುದಾರರಾಗಿರುವ 'ಪಂಜಾಬ್ ಕಿಂಗ್ಸ್' ತಂಡದ ಫ್ರಾಂಚೈಸಿ ಬಳಿ ಅತ್ಯಧಿಕ ₹ 53.20 ಕೋಟಿ ಉಳಿದಿದ್ದು, ಒಂಬತ್ತು ಆಟಗಾರರನ್ನು ಖರೀದಿಸಲು ಈ ಮೊತ್ತ ಬಳಸಬಹುದಾಗಿದೆ.

ADVERTISEMENT

ಬಿಗ್ ಬ್ಯಾಷ್‌ನಲ್ಲಿ ಮಿಂಚಿದ್ದ ಮ್ಯಾಕ್ಸ್ ವೆಲ್: ಕೋವಿಡ್ ಸೋಂಕಿನಿಂದಾಗಿ ಕಳೆದ ವರ್ಷ ದುಬೈನಲ್ಲಿ ನಡೆದಿದ್ದ ಐಪಿಎಲ್ ಸರಣಿ ಮತ್ತೆ ಭಾರತಕ್ಕೆ ಮರಳಿದೆ. ಇಲ್ಲಿನ ಪಿಚ್‌ ಮತ್ತು ಆಟದ ಸ್ವರೂಪಕ್ಕೆ ಅನುಗುಣವಾಗಿ ಬಿಗ್ ಹಿಟ್ಟರ್‌ಗಳು ಮತ್ತು ನಿಧಾನಗತಿಯ ಬೌಲರ್‌ಗಳತ್ತ ಗಮನ ಹರಿಸಲಾಗುತ್ತದೆ. ಈ ಸ್ಥಾನಕ್ಕೆ ಮ್ಯಾಕ್ಸ್‌ವೆಲ್ ಮತ್ತು ಮೊಯಿನ್ ಅಲಿ ಹೊಂದಿಕೊಳ್ಳುತ್ತಾರೆ ಎಂಬುದು ಕೆಲವರ ಅಭಿಪ್ರಾಯವಾಗಿದೆ.

82 ಐಪಿಎಲ್ ಪಂದ್ಯಗಳನ್ನು ಆಡಿರುವ ಮ್ಯಾಕ್ಸ್ ವೆಲ್, 22 ಸರಾಸರಿಯಲ್ಲಿ 1503 ರನ್ ಗಳಿಸಿದ್ದಾರೆ. ಕಳೆದ ವರ್ಷ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿದ್ದ ಮ್ಯಾಕ್ಸ್ ವೆಲ್ ಕಳೆದ ಕೆಲ ವರ್ಷಗಳಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಿಲ್ಲ. ಆದರೆ, 2020-21ರ ಬಿಗ್ ಬ್ಯಾಷ್ ಸರಣಿಯಲ್ಲಿ 143 ಸ್ಟ್ರೈಕ್ ರೇಟ್‌ನಲ್ಲಿ 379 ರನ್ ಗಳಿಸಿದ್ದು, 7 ವಿಕೆಟ್ ಉರುಳಿಸಿರುವುದು ಅವರ ಮೇಲೆ ಫ್ರಾಂಚೈಸಿಗಳು ಕಣ್ಣಿಡುವಂತೆ ಮಾಡಿದೆ.

ಆರ್‌ಸಿಬಿಯು ನಾಯಕ ವಿರಾಟ್ ಕೊಹ್ಲಿ ಮತ್ತು ಡಿವಿಲಿಯರ್ಸ್ ಮೇಲಿನ ಒತ್ತಡ ತಗ್ಗಿಸಲು ಮ್ಯಾಕ್ಸ್ ವೆಲ್‌ಗೆ ಬಿಡ್ ಮಾಡುತ್ತದೆ ಎಂಬ ವರದಿಗಳು ಕೇಳಿಬರುತ್ತಿವೆ.

ಕಳೆದ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡಿದ್ದ ಇಂಗ್ಲೆಂಡಿನ ಸ್ಪಿನ್ ಆಲ್‌ ರೌಂಡರ್ ಮೋಯಿನ್ ಅಲಿ ಸಹ ಗಮನ ಸೆಳೆದಿದ್ದಾರೆ.

ಮ್ಯಾಕ್ಸ್‌ವೆಲ್ ಮತ್ತು ಆಸಿಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ಬಿಡ್ಡಿಂಗ್ ವಿಭಾಗದಲ್ಲಿ ಅತಿ ಹೆಚ್ಚು ಮೂಲ ಬೆಲೆ ₹ 2 ಕೋಟಿ ಹೊಂದಿದ್ದಾರೆ.

ಗಮನ ಸೆಳೆವ ಡೇವಿಡ್ ಮಲನ್: ಇವರೆಲ್ಲರ ಮಧ್ಯೆ ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಗಮನ ಸೆಳೆಯುವ ಒಂದು ಹೆಸರು ವಿಶ್ವದ ನಂ .1 ಶ್ರೇಯಾಂಕಿತ ಇಂಗ್ಲೆಂಡಿನ ಟಿ 20 ಬ್ಯಾಟ್ಸ್‌ಮನ್ ಡೇವಿಡ್ ಮಲನ್.

19 ಟಿ 20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಸುಮಾರು 150 ರ ಸ್ಟ್ರೈಕ್ ರೇಟ್ ಹೊಂದಿರುವ ಮಲನ್ ಹೆಚ್ಚು ಗಮನ ಸೆಳೆದಿದ್ದಾರೆ. ₹ 1.5 ಕೋಟಿ ಮೂಲಬೆಲೆ ಹೊಂದಿರುವ ಮಲನ್ ಅವರನ್ನು ಖರೀದಿಸಲು ಫ್ರಾಂಚೈಸಿಗಳು ತಂಡಗಳು ಆಸಕ್ತಿ ತೋರಬಹುದು.

ಭಾರತೀಯ ಆಟಗಾರರಲ್ಲಿ, ಕೇದಾರ್ ಜಾಧವ್, ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ವೇಗದ ಬೌಲರ್ ಉಮೇಶ್ ಯಾದವ್ ಹೆಸರುಗಳು ಹರಾಜಿನ ಪಟ್ಟಿಯಲ್ಲಿವೆ.

ಭಾರತದ ಯುವ ಪ್ರತಿಭೆಗಳ ಅಬ್ಬರ: ಎಂದಿನಂತೆ, ಕೇರಳದ ಮೊಹಮ್ಮದ್ ಅಜರುದ್ದೀನ್ (ಜೂನಿಯರ್), ತಮಿಳುನಾಡಿನ ಹಲ್ಕ್ ಶಾರುಖ್ ಖಾನ್, ಆಲ್‌ರೌಂಡರ್ ಆರ್ ಸೋನು ಯಾದವ್, ಬರೋಡಾದ ವಿಷ್ಣು ಸೋಲಂಕಿ ಮತ್ತು ಬಂಗಾಳದ ಆಕಾಶ್ ದೀಪ್ ಮುಂತಾದ ದೇಶೀಯ ಆಟಗಾರರು ಈ ಬಾರಿ ಗಮನ ಸೆಳೆಯುತ್ತಿದ್ದಾರೆ.

ಈ ವರ್ಷ ಮುಂಬೈ ಹಿರಿಯ ತಂಡಕ್ಕೆ ಪಾದಾರ್ಪಣೆ ಮಾಡಿದ ಎಡಗೈ ವೇಗದ ಬೌಲರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ₹ 20 ಲಕ್ಷ ಮೂಲ ಬೆಲೆಯೊಂದಿಗೆ ಆಲ್‌ರೌಂಡರ್ ವಿಭಾಗದ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಇನ್ನುಳಿದಂತೆ ಮುಂಬೈ ಇಂಡಿಯನ್ಸ್ (15.35 ಕೋಟಿ) ಮತ್ತು ದೆಹಲಿ ಕ್ಯಾಪಿಟಲ್ಸ್ (13.40 ಕೋಟಿ ರೂ.) ತಂಡಗಳು ಕ್ರಮವಾಗಿ ಏಳು ಮತ್ತು ಎಂಟು ಆಟಗಾರರನ್ನು ಖರೀದಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.