ADVERTISEMENT

ಐಪಿಎಲ್‌ಗೆ ಮನೆಯಿಂದಲೇ ವೀಕ್ಷಕ ವಿವರಣೆ!

ಪಿಟಿಐ
Published 21 ಜುಲೈ 2020, 11:54 IST
Last Updated 21 ಜುಲೈ 2020, 11:54 IST
   

ನವದೆಹಲಿ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯಗಳ ನೇರಪ್ರಸಾರದ ವೀಕ್ಷಕ ವಿವರಣೆಕಾರರು ತಮ್ಮ ಮನೆಯೊಳಗಿಂದಲೇ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.

ಕೊರೊನಾ ವೈರಸ್‌ ಸೋಂಕು ತಡೆಗೆ ದೇಶದ ಬಹಳಷ್ಟು ಉದ್ಯಮ ಸಂಸ್ಥೆಗಳು, ಇಲಾಖೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯನಿರ್ವಹಿಸಲು ಅವಕಾಶ ಕೊಟ್ಟಿವೆ. ಅದೇ ಮಾದರಿಯಲ್ಲಿ ಪಂದ್ಯ ನಡೆಯುವ ತಾಣಗಳಿಗೆ ವೀಕ್ಷಕ ವಿವರಣೆಗಾರರ ಪ್ರಯಾಣ ತಪ್ಪಿಸಲು ಈ ಕ್ರಮಕ್ಕೆ ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯು ಚಿಂತನೆ ನಡೆಸಿದೆ ಎನ್ನಲಾಗಿದೆ.

ಅದರಲ್ಲೂ 60 ವರ್ಷ ದಾಟಿದವರಿಗೆ ಸೋಂಕಿನ ಅಪಾಯ ಹೆಚ್ಚು ಎನ್ನಲಾಗಿದೆ. ಆದ್ದರಿಂದ 71 ವರ್ಷ ತುಂಬಿರುವ ವೀಕ್ಷಕ ವಿವರಣೆಗಾರ ಸುನಿಲ್ ಗಾವಸ್ಕರ್ ಅವರೂ ಸೇರಿದಂತೆ ಕಾಮೆಂಟ್ರಿ ಮಾಡುವವರ ಸುರಕ್ಷೆತೆಗೆ ಈ ಯೋಚನೆ ಮಾಡಲಾಗಿದೆ.

ADVERTISEMENT

ಇನ್ನೊಂದೆಡೆ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಆದರೆ ಜನರು ಮನೆಯಿಂದಲೇ ನೇರಪ್ರಸಾರ ನೋಡುವುದು ಖಚಿತ. ಇದರಿಂದಾಗಿ ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ನಿರ್ಮಾಣವಾಗುವುದು ಖಚಿತ ಎಂದು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದ ಸಹಮಾಲೀಕ ನೆಸ್ ವಾಡಿಯಾ ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಸದ್ಯದ ಆರ್ಥಿಕ ಹಿನ್ನಡೆ ಇರುವುದರಿಂದಾಗಿ ಪ್ರಸಾರಕ ಸಂಸ್ಥೆಗೆ ದೊಡ್ಡ ಮಟ್ಟದ ಪ್ರಾಯೋಜಕತ್ವ ಹರಿದು ಬರುವುದೇ ಎಂಬ ಪ್ರಶ್ನೆಯೂ ಇದೆ. ‌

ಐಪಿಎಲ್ ಸಮಿತಿ ಸಭೆಯಲ್ಲಿ ಚರ್ಚೆಯ ಅಂಶಗಳು

* ಒಂದೇ ದಿನ ಎರಡು ಪಂದ್ಯಗಳ ಆಯೋಜನೆ ನಡೆಯಲಿದೆ.

* ಐಪಿಎಲ್ ತಂಡಗಳು ತಮ್ಮದೇ ಆದ ಮಾರ್ಗಸೂಚಿಗಳನ್ನು ಹೊಂದಿವೆ. ಆದರೂ ಬಿಸಿಸಿಐ ಒಂದು ಮಾರ್ಗದರ್ಶಿಯನ್ನು ನೀಡಲಿದೆ.

* ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿವೆ. ಆದ್ದರಿಂದ ಪ್ರವೇಶ ಶುಲ್ಕ ಇರುವುದಿಲ್ಲ. ಇದಕ್ಕೆ ತಂಡಗಳಿಗೆ ಬಿಸಿಸಿಐ ಪರಿಹಾರ ನೀಡಬಹುದೇ?

* ಆಕಾಶ್ ಛೋಪ್ರಾ, ದೀಪ್ ದಾಸ್‌ ಗುಪ್ತಾ ಮತ್ತು ಇರ್ಫಾನ್ ಪಠಾಣ್ ಸೇರಿದಂತೆ ಎಲ್ಲ ವೀಕ್ಷಕ ವಿವರಣೆಕಾರರು ತಮ್ಮ ಮನೆಯಿಂದಲೇ ಕಾಮೆಂಟ್ರಿ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.