ಅಬುಧಾಬಿ: ಮುಂಬೈ ಇಂಡಿಯನ್ಸ್ ನೀಡಿದ 192 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದಕಿಂಗ್ಸ್ ಇಲವೆನ್ ಪಂಜಾಬ್ ತಂಡ 48 ರನ್ ಅಂತರದ ಸೋಲೊಪ್ಪಿಕೊಂಡಿತು. ಇದರೊಂದಿಗೆ ಆಡಿರುವ 4 ಪಂದ್ಯಗಳಲ್ಲಿ ಮೂರನೇ ಸೋಲು ಅನುಭವಿಸಿತು.
ಟಾಸ್ ಗೆದ್ದ ಕಿಂಗ್ಸ್ ನಾಯಕ ಕೆಎಲ್ ರಾಹುಲ್ ಮುಂಬೈಗೆ ಬ್ಯಾಟಿಂಗ್ ಬಿಟ್ಟುಕೊಟ್ಟಿದ್ದರು. ಆರಂಭದಲ್ಲಿ ನಾಯಕನ ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಕಿಂಗ್ಸ್ ಬೌಲರ್‌ಗಳು ಕೊನೆಯಲ್ಲಿ ದುಬಾರಿಯಾದರು.
ಇನಿಂಗ್ಸ್ ಆರಂಭಿಸಿದಮುಂಬೈಗೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ರೋಹಿತ್ ಶರ್ಮಾ ಜೊತೆಗೆ ಕ್ರೀಸ್‌ಗೆ ಇಳಿದ ಕ್ವಿಂಟನ್ ಡಿ ಕಾಕ್ (0) ಮೊದಲ ಓವರ್‌ನಲ್ಲಿಯೇ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸೂರ್ಯಕುಮಾರ್ ಯಾದವ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು.
ನಾಯಕನ ಆಟವಾಡಿದ ರೋಹಿತ್, ಯುವ ಆಟಗಾರ ಇಶಾನ್ ಕಿಶನ್ (28)ಜೊತೆಗೂಡಿ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದರು.ಈ ಜೋಡಿ ಮೂರನೇ ವಿಕೆಟ್‌ಗೆ 62 ರನ್ ಸೇರಿಸಿತು. ಆರಂಭದಲ್ಲಿ ನಿಧಾನಗತಿಯ ಆಟವಾಡಿದ ರೋಹಿತ್ ಬಳಿಕ ರಟ್ಟೆಯರಳಿಸಿದರು. ಒಂದು ಹಂತದಲ್ಲಿ 37 ಎಸೆತಗಳಲ್ಲಿ 43 ರನ್ ಗಳಿಸಿದ್ದ ರೋಹಿತ್ ನಂತರದ 8 ಎಸೆತಗಳಲ್ಲಿ 27 ರನ್ ಗಳಿಸಿಕೊಂಡರು.ಒಟ್ಟು 45 ಎಸೆತಗಳನ್ನು ಎದುರಿಸಿದ ರೋಹಿತ್, 8 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 70 ರನ್ ಬಾರಿಸಿದರು.
ಪಾಂಡ್ಯ–ಕೀರನ್ ಅಬ್ಬರ
ರೋಹಿತ್ ವಿಕೆಟ್ ಪತನದ ಬಳಿಕ ಜೊತೆಯಾದಹಾರ್ದಿಕ್ ಪಾಂಡ್ಯ ಮತ್ತು ಕೀರನ್ ಪೊಲಾರ್ಡ್ ಐದನೇ ವಿಕೆಟ್ ಜೊತೆಯಾಟದಲ್ಲಿಕೇವಲ 23 ಎಸೆತಗಳಲ್ಲಿ ಅಜೇಯ 67 ರನ್ ಸಿಡಿಸಿದರು. ಪಾಂಡ್ಯ 11 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಹಿತ30 ರನ್ ಬಾರಿಸಿದರೆ, ಪೊಲಾರ್ಡ್ 20 ಎಸೆತಗಳಲ್ಲಿ 4 ಸಿಕ್ಸರ್, 3 ಬೌಂಡರಿ ಜೊತೆಗೆ 47 ರನ್ ಚಚ್ಚಿದರು.ಹೀಗಾಗಿ ಮುಂಬೈ ತಂಡ191 ರನ್‌ಕಲೆ ಹಾಕಿತು.
ಈ ಗುರಿ ಬೆನ್ನತ್ತಿದ ಪಂಜಾಬ್ ಪರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು. ಟೂರ್ನಿಯಲ್ಲಿ ತಲಾ ಒಂದೊಂದು ಶತಕ ಗಳಿಸಿರುವ ನಾಯಕ ರಾಹುಲ್ (17), ಮಯಂಕ್ (25) ಹೆಚ್ಚು ರನ್ ಗಳಿಸಲು ವಿಫಲರಾದರು. ಕರುಣ್ ನಾಯರ್ (0), ಗ್ಲೇನ್ ಮ್ಯಾಕ್ಸ್‌ವೆಲ್ (11), ಜಿಮ್ಮಿ ನೀಶಮ್ (7), ಸರ್ಫರಾಜ್ ಖಾನ್ (7) ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ.
ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದು ಕೆಎಲ್ ಪಡೆಗೆ ಮುಳುವಾಯಿತು. ನಿಕೋಲಸ್ ಪೂರನ್ (44) ಹೋರಾಟ ನಡೆಸಿದರಾದರೂ ಸಾಕಾಗಲಿಲ್ಲ. ಅಂತಿಮವಾಗಿ ಈ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 143 ರನ್ ಗಳಿಸಲಷ್ಟೇ ಶಕ್ತವಾಯಿತು.
ಮುಂಬೈ ಪರ ಜಸ್‌ಪ್ರೀತ್ ಬೂಮ್ರಾ, ಜೇಮ್ಸ್ ಪ್ಯಾಟಿನ್ಸನ್ ಮತ್ತು ರಾಹುಲ್ ಚಾಹರ್ ತಲಾ ಎರಡೆರಡು ವಿಕೆಟ್ ಪಡೆದರೆ,ಟ್ರಂಟ್ ಬೌಲ್ಟ್ ಮತ್ತು ಕೃಣಾಲ್ ಪಾಂಡ್ಯ ಒಂದೊಂದು ವಿಕೆಟ್ ಹಂಚಿಕೊಂಡರು.
ಈ ಜಯದೊಂದಿಗೆ ಮುಂಬೈ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಪಂಜಾಬ್ ಆರನೇ ಸ್ಥಾನಕ್ಕೆ ಕುಸಿದಿದೆ.
5 ಸಾವಿರ ರನ್ ಪೂರೈಸಿದರೋಹಿತ್
ಈ ಪಂದ್ಯದಲ್ಲಿ 2 ರನ್ ಗಳಿಸಿದ್ದ ವೇಳೆಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಐದು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಇದರೊಂದಿಗೆ ಈ ಸಾಧನೆ ಮಾಡಿದ ಮೂರನೇಬ್ಯಾಟ್ಸ್‌ಮನ್ ಎಂಬ ಶ್ರೇಯಕ್ಕೆ ಭಾಜನರಾದರು.
ರೋಹಿತ್‌ಐಪಿಎಲ್‌ನಲ್ಲಿ ಇದುವರೆಗೆ 192 ಪಂದ್ಯಗಳ 187 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ರೋಹಿತ್ 5,068 ರನ್ ಗಳಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾಐಪಿಎಲ್‌ನಲ್ಲಿ 5 ಸಾವಿರ ರನ್ ಕಲೆಹಾಕಿರುವ ಇನ್ನಿಬ್ಬರು ಬ್ಯಾಟ್ಸ್‌ಮನ್‌ಗಳು. ಕೊಹ್ಲಿ172 ಇನಿಂಗ್ಸ್‌ಗಳಲ್ಲಿ 5,430 ರನ್ ಮತ್ತು ರೈನಾ 189 ಇನಿಂಗ್ಸ್‌ಗಳಲ್ಲಿ 5,368 ರನ್ ಕಲೆಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.