ADVERTISEMENT

ಮಿಂಚಿದ ರಿಯಾನ್; ರಾಜಸ್ಥಾನ್ ವಿನ್!

ಕೋಲ್ಕತ್ತ ನೈಟ್‌ ರೈಡರ್ಸ್‌ಗೆ ಸತತ ಆರನೇ ಸೋಲು; ದಿನೇಶ್ ಕಾರ್ತಿಕ್ ಆಟ ವ್ಯರ್ಥ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:20 IST
Last Updated 25 ಏಪ್ರಿಲ್ 2019, 20:20 IST
   

ಕೋಲ್ಕತ್ತ (ಪಿಟಿಐ): ಹದಿನೇಳರ ಹರೆಯದ ರಿಯಾನ್ ಪರಾಗ್ ದಿಟ್ಟ ಬ್ಯಾಟಿಂಗ್‌ನಿಂದಾಗಿ ರಾಜಸ್ಥಾನ್ ರಾಯಲ್ಸ್‌ ತಂಡವು ಗುರುವಾರ ರಾತ್ರಿ ಮೂರು ವಿಕೆಟ್‌ಗಳಿಂದ ಕೋಲ್ಕತ್ತ ನೈಟ್ ರೈಡರ್ಸ್‌ ತಂಡವನ್ನು ಸೋಲಿಸಿತು.

ದಿನೇಶ್ ಕಾರ್ತಿಕ್ ಆವರ ಅಮೋಘ ಬ್ಯಾಟಿಂಗ್ ಬಲದಿಂದ ಕೆಕೆಆರ್‌ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 175 ರನ್‌ ಗಳಿಸಿತು. ಗುರಿ ಬೆನ್ನತ್ತಿದ ರಾಯಲ್ಸ್‌ ತಂಡವು ರಿಯಾನ್ (47; 31ಎ, 5ಬೌಂಡರಿ, 2ಸಿಕ್ಸರ್) ಮತ್ತು ಜೋಫ್ರಾ ಆರ್ಚರ್ (ಔಟಾಗದೆ 27; 12ಎಸೆತ, 2ಬೌಂಡರಿ, 2ಸಿಕ್ಸರ್) ಅವರಿಬ್ಬರ ನೆರವಿನಿಂದ 19.2 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 177 ರನ್‌ ಗಳಿಸಿತು. ಇದರಿಂದಾಗಿ ಕಾರ್ತಿಕ್ ಬಳಗವು ಸತತ ಆರನೇ ಪಂದ್ಯದಲ್ಲಿ ಸೋತಿತು. ಅದರ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಯಿತು.

ರಾಜಸ್ಥಾನ್ ತಂಡಕ್ಕೆ ಅಜಿಂಕ್ಯ ರಹಾನೆ (34 ರನ್) ಮತ್ತು ಸಂಜು ಸ್ಯಾಮ್ಸನ್ (22 ರನ್) ಉತ್ತಮ ಆರಂಭ ನೀಡಿದರು. ಆದರೆ ಕೆಕೆಆರ್ ತಂಡದ ಸುನಿಲ್ ನಾರಾಯಣ್ ಮತ್ತು ಪಿಯೂಷ್ ಚಾವ್ಲಾ ಅವರ ಸ್ಪಿನ್ ಮೋಡಿಯಿಂದಾಗಿ 98 ರನ್‌ಗಳಾಗುಷ್ಟರಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡ ರಾಯಲ್ಸ್‌ ಆತಂಕಕ್ಕೊಳಗಾಯಿತು. ಈ ಹಂತದಲ್ಲಿ ಜೊತೆಗೂಡಿದ ರಿಯಾನ್ ಮತ್ತು ಜೋಫ್ರಾ ಏಳನೇ ವಿಕೆಟ್‌ ಜೊತೆಯಾಟದಲ್ಲಿ 43 ರನ್‌ ಸೇರಿಸಿದರು. ಇದರಿಂದಾಗಿ ತಂಡದ ಜಯ ಸಾಧ್ಯವಾಯಿತು.

ADVERTISEMENT

ದಿನೇಶ್ ಏಕಾಂಗಿ ಹೋರಾಟ: ಜಯಿಸಲೇಬೇಕಾದ ಒತ್ತಡದಲ್ಲಿರುವ ಕೋಲ್ಕತ್ತ ನೈಟ್ ರೈಡರ್ಸ್‌ ತಂಡಕ್ಕೆ ನಾಯಕ ದಿನೇಶ್ ಕಾರ್ತಿಕ್ (ಔಟಾಗದೆ 97; 50ಎಸೆತ, 7ಬೌಂಡರಿ, 9ಸಿಕ್ಸರ್) ಆಸರೆಯಾದರು.

ಟಾಸ್ ಗೆದ್ದ ರಾಜಸ್ಥಾನ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಕೋಲ್ಕತ್ತ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತು. ಮೊದಲ ಓವರ್‌ನಲ್ಲಿಯೇ ಕ್ರಿಸ್ ಲಿನ್ ಅವರು ವರುಣ್ ಆ್ಯರನ್‌ಗೆ ಕ್ಲೀನ್‌ಬೌಲ್ಡ್‌ ಆದರು. ಐದನೇ ಓವರ್‌ನಲ್ಲಿ ಶುಭಮನ್ ಗಿಲ್ ಕೂಡ ಅದೇ ರೀತಿ ಔಟಾದರು. ಇದರಿಂದಾಗಿ ತಂಡದ ರನ್‌ ಗಳಿಕೆಯ ವೇಗ ಕುಸಿಯಿತು. ಆಗ ಕ್ರೀಸ್‌ನಲ್ಲಿದ್ದ ನಿತೀಶ್ ರಾಣಾ (21 ರನ್) ಜೊತೆಗೂಡಿದ ದಿನೇಶ್ ದಿಟ್ಟತನದಿಂದ ಆಡಿದರು. ರಾಣಾ ಔಟಾದ ಮೇಲೆ ಕ್ರೀಸ್‌ಗೆ ಬಂದ ಸುನಿಲ್ ನಾರಾಯಣ್ (11) ಒಂದು ಬೌಂಡರಿ, ಒಂದು ಸಿಕ್ಸರ್ ಸಿಡಿಸಿದರು. ಸ್ಪೋಟಕ ಬ್ಯಾಟ್ಸ್‌ಮನ್ ಆ್ಯಂಡ್ರೆ ರಸೆಲ್ ಅವರ ಮೇಲಿನ ನಿರೀಕ್ಷೆಯೂ ಹುಸಿಯಾಯಿತು.

ಆದರೆ, ದಿನೇಶ್ ಹೋರಾಟಕ್ಕೆ ತಡೆಯೊಡ್ಡಲು ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಕೆಕೆಆರ್ ತಂಡವು 15 ಓವರ್‌ಗಳಲ್ಲಿ ನೂರು ಮಾತ್ರ ಗಳಿಸಿತ್ತು. ದಿನೇಶ್ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಕೊನೆಯ ನಾಲ್ಕು ಓವರ್‌ಗಳಲ್ಲಿ 60 ರನ್‌ಗಳು ಸೇರಿದವು. ಅದರಲ್ಲೂ ಜಯದೇವ್ ಉನದ್ಕತ್ ಹಾಕಿದ ಕೊನೆಯ ಓವರ್‌ನಲ್ಲಿ ಅವರು ಒಂದು ಬೌಂಡರಿ, ಎರಡು ಸಿಕ್ಸರ್ ಹೊಡೆದರು. ಮೂರು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.