ADVERTISEMENT

ಮನೆಯಲ್ಲಿರಿ, ಸುರಕ್ಷಿತವಾಗಿರಿ; ಕೋವಿಡ್ ನಿಯಂತ್ರಣಕ್ಕೆ ಆರ್‌ಸಿಬಿ ಆಟಗಾರರ ಮನವಿ

ಏಜೆನ್ಸೀಸ್
Published 25 ಏಪ್ರಿಲ್ 2021, 10:55 IST
Last Updated 25 ಏಪ್ರಿಲ್ 2021, 10:55 IST
   

ಮುಂಬೈ: ದೇಶದಾದ್ಯಂತ ಕೋವಿಡ್-19 ಎರಡನೇ ಅಲೆ ಅತಿ ತೀವ್ರವಾಗಿ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಈ ಮಾರಣಾಂತಿಕ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಎಲ್ಲರೂ ಮನೆಯಲ್ಲೇ ಇರುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಮನವಿ ಮಾಡಿದ್ದಾರೆ.

ಆರ್‌ಸಿಬಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೊವನ್ನು ಹಂಚಲಾಗಿದೆ. ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲರು ಅಗತ್ಯ ಮುನ್ನಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ನಾಯಕ ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಗ್ಲೆನ್ ಮ್ಯಾಕ್ಸ್‌ವೆಲ್ ಸೇರಿದಂತೆ ಪ್ರಮುಖ ಆಟಗಾರರು ಹಾಗೂ ಕೋಚ್ ಮನವಿ ಮಾಡಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಸಂದೇಶದೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. 'ಹಾಯ್, ನಾನು ವಿರಾಟ್ ಕೊಹ್ಲಿ. ನಾಯಕರಾಗಿ ಮುಂದೆ ನಿಂತು ಮುನ್ನಡೆಸಲು ಹಾಗೂ ಸುತ್ತುಮುತ್ತಲಿನ ಜನರಿಗೆ ಸಹಾಯ ಮಾಡಲು ಬಯಸುತ್ತೇನೆ. ನೀವೆಲ್ಲರೂ ಅದನ್ನೇ ಮಾಡಲು ಕರೆ ನೀಡುತ್ತೇನೆ. ಸ್ಯಾನಿಟೈಸರ್ ಬಳಸಿ ಕೈಗಳನ್ನು ಸ್ವಚ್ಛಗೊಳಿಸಿರಿ, ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ತೆರಳಿ ಮತ್ತು ಎಲ್ಲ ಸಮಯದಲ್ಲೂ ಮಾಸ್ಕ್ ಧರಿಸಿ' ಎಂದು ಸಂದೇಶ ನೀಡಿದ್ದಾರೆ.

ADVERTISEMENT

'ಕಠಿಣ ಪರಿಸ್ಥಿತಿ ಎದುರಾದಾಗ ಸೂಪರ್ ಹೀರೊಗಾಗಿ ಕಾಯಲು ಸಾಧ್ಯವಿಲ್ಲ. ನೀವೇ ಸೂಪರ್ ಹೀರೊ ಆಗಬೇಕು. ಮನೆಯಲ್ಲೇ ಇರುವುದು ಕೋವಿಡ್ ಸಾಂಕ್ರಾಮಿಕ ರೋಗದಿಂದ ಸುರಕ್ಷಿತವಾಗಿರಲು ಉತ್ತಮ ಮಾರ್ಗವಾಗಿದೆ. ಎಲ್ಲರೂ ಜೊತೆಯಾಗಿ ಈ ಕಠಿಣ ಸಮಯವನ್ನು ಗೆಲ್ಲೋಣ' ಎಂದು ಎಬಿ ಡಿ ವಿಲಿಯರ್ಸ್ ಮನವಿ ಮಾಡಿದ್ದಾರೆ.

'ಈ ಸಂಕಷ್ಟದ ಸಮಯದಲ್ಲಿ ಕ್ರಿಕೆಟ್ ಮೂಲಕ ಜನರಿಗೆ ಸಾಧ್ಯವಾದಷ್ಟು ಮನರಂಜನೆ ನೀಡಿ ಸಂತೋಷವನ್ನು ಹಂಚಲು ಪ್ರಯತ್ನಿಸುತ್ತಿರುವುದಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದರು. ಇದಕ್ಕೆ ಪ್ರತಿಯಾಗಿ ಕೋವಿಡ್ ರೋಗವನ್ನು ಸೋಲಿಸಲು ಹಾಗೂ ಸುರಕ್ಷಿತವಾಗಿರಲು ಎಲ್ಲ ರೀತಿಯ ಮುನ್ನಚ್ಚೆರಿಕೆಗಳನ್ನು ಅನುಸರಿಸುವಂತೆ ವಿನಂತಿ ಮಾಡುತ್ತೇನೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.