ADVERTISEMENT

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌: ಮಾರ್ಗಸೂಚಿ ಪಾಲಿಸಿದರೆ ಅನುಮತಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 23:30 IST
Last Updated 19 ಡಿಸೆಂಬರ್ 2025, 23:30 IST
ಕಳೆದ ಜೂನ್‌ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವಕ್ಕೆ ಸೇರಿದ್ದ ಅಪಾರ ಪ್ರೇಕ್ಷಕರು   
ಕಳೆದ ಜೂನ್‌ನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ವಿಜಯೋತ್ಸವಕ್ಕೆ ಸೇರಿದ್ದ ಅಪಾರ ಪ್ರೇಕ್ಷಕರು      

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಾವಳಿ ಆಯೋಜಿಸಬೇಕಿದ್ದರೆ ಭದ್ರತೆಗೆ ಸಂಬಂಧಿಸಿದ ಕೆಲವು ಮಾರ್ಗಸೂಚಿಗಳನ್ನು ಆಯೋಜಕರು ಪಾಲಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.

ಐಪಿಎಲ್‌ ಸೇರಿ ಮುಂದೆ ನಡೆಯುವ ಎಲ್ಲಾ ಮಾದರಿಯ ಕ್ರಿಕೆಟ್‌ ಟೂರ್ನಿಗೂ ಅನ್ವಯ ಆಗುವಂತೆ 17 ಮಾರ್ಗಸೂಚಿಗಳನ್ನು ನಗರ ಪೊಲೀಸರು ಸಿದ್ಧಪಡಿಸಿದ್ದಾರೆ. ಮಾರ್ಗಸೂಚಿಗೆ ಸಂಬಂಧಿಸಿದ ಪತ್ರವನ್ನು ಶೀಘ್ರದಲ್ಲೇ ಕೆಎಸ್‌ಸಿಎಯ ನೂತನ ಆಡಳಿತ ಮಂಡಳಿಗೆ ನೀಡಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಕಳೆದ ಜೂನ್‌ನಲ್ಲಿ ಕಾಲ್ತುಳಿತ ಘಟನೆ ಸಂಭವಿಸಿದಾಗ ಕ್ರೀಡಾಂಗಣದಲ್ಲಿ ಪರಿಶೀಲನೆ ನಡೆಸಲಾಗಿತ್ತು. ಇತ್ತೀಚೆಗೆ ಪರಿಶೀಲನೆ ನಡೆಸಿ, ಕ್ರೀಡಾಂಗಣದಲ್ಲಿ ಇರುವ ಸಮಸ್ಯೆಗಳನ್ನು ಯಾವ ರೀತಿಯಲ್ಲಿ ಸರಿಪಡಿಸಬೇಕೆಂದು ಮಾರ್ಗಸೂಚಿ ಸಿದ್ಧ ಪಡಿಸಲಾಗಿದೆ. ಆಯೋಜಕರು ಲೋಷದೋಷಗಳನ್ನು ಸರಿಪಡಿಸಿದರೆ ಅನುಮತಿ ನೀಡುವ ಬಗ್ಗೆ ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಲಾಗುವುದು’ ಎಂದು ಮೂಲಗಳು ಹೇಳಿವೆ.

ADVERTISEMENT

‘ಸದ್ಯಕ್ಕೆ 17 ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ. ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲು ಅನುಮತಿ ಕೋರಿ ಪತ್ರ ಬಂದರೆ ಮತ್ತೆ ಕ್ರೀಡಾಂಗಣ ಪರಿಶೀಲನೆ ನಡೆಸಲಾಗುತ್ತದೆ’ ಎಂದು ಮೂಲಗಳು ಹೇಳಿವೆ.

ಪೊಲೀಸರ ಸೂಚನೆಗಳು ಏನೇನು?

  • ಕ್ರಿಕೆಟ್‌ ಪಂದ್ಯ ವೀಕ್ಷಣೆಗೆ ಬರುವವರಿಗೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು 

  • ಕ್ರೀಡಾಂಗಣದ ಪ್ರವೇಶ ದ್ವಾರಗಳು ಪಾದಚಾರಿ ಮಾರ್ಗದಲ್ಲಿಯೇ ಇವೆ. ಪ್ರೇಕ್ಷಕರು ಸರದಿಯಲ್ಲಿ ನಿಲುವುದಕ್ಕೆ ಕೆಎಸ್‌ಸಿಎ ಸ್ವತ್ತಿನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು

  • ಗೇಟ್‌ಗಳು ಕಿರಿದಾಗಿದ್ದು, ದುರಸ್ತಿ ಮಾಡಬೇಕು

  • ಅಂತರರಾಷ್ಟ್ರೀಯ ಪಂದ್ಯಾವಳಿಗಳ ವೇಳೆ ಮಹಿಳೆಯರು ಹಾಗೂ ಮಕ್ಕಳ ಪ್ರವೇಶ–ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು

  • ಆಂಬುಲೆನ್ಸ್ ಪ್ರವೇಶಕ್ಕೆ ಪ್ರತ್ಯೇಕ ಮಾರ್ಗ ಇರಬೇಕು 

  • ಅಗ್ನಿಶಾಮಕ ದಳ ಹಾಗೂ ಬೆಸ್ಕಾಂನಿಂದ ಪರಿಶೋಧನೆ ನಡೆಸಿ ವರದಿ ಪಡೆಯಬೇಕು

  • ಆಟಗಾರರಿಗೆ ಪ್ರತ್ಯೇಕವಾಗಿ ಪ್ರವೇಶ–ನಿರ್ಗಮನ ಮಾರ್ಗ ಕಾಯ್ದಿರಿಸಬೇಕು

  • ಪ್ರವೇಶ ದ್ವಾರಗಳ ಬಳಿ ಬ್ಯಾಗೇಜ್ ಸ್ಕ್ಯಾನರ್ ಅಳವಡಿಸಬೇಕು. ಸಿ.ಸಿ.ಟಿ.ವಿ ಕಣ್ಗಾವಲಿನಲ್ಲಿ ದೀರ್ಘಾವಧಿ ಸ್ಟೋರೇಜ್ ವ್ಯವಸ್ಥೆ ಮಾಡಬೇಕು

  • ಕೆಲಸಗಾರರು, ಸೆಕ್ಯೂರಿಟಿ ಗಾರ್ಡ್, ಮಳಿಗೆ ಇಡುವವರ ಬಗ್ಗೆ ಪೊಲೀಸರಿಂದ ಪ್ರಮಾಣ ಪತ್ರ ಪಡೆದುಕೊಳ್ಳಬೇಕು

  • ಪ್ರೇಕ್ಷಕರ ಪ್ರವೇಶ ಸಂಖ್ಯೆ ನಿಖರತೆಗಾಗಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳಬೇಕು

  • ಟಿಕೆಟ್ ವಿಚಾರಣೆ, ಮಾರಾಟ ಹಾಗೂ ಟೆಕೆಟ್‌ಗಾಗಿ ಕಾಯುವವರಿಗೆ ಪ್ರತ್ಯೇಕ ಸ್ಥಳ ವ್ಯವಸ್ಥೆ ಮಾಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.