ADVERTISEMENT

ಗೆಲುವಿನ ಹಳಿಗೆ ಮರಳುವ ತವಕದಲ್ಲಿ ಮುಂಬೈ–ಪಂಜಾಬ್

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 13:33 IST
Last Updated 22 ಏಪ್ರಿಲ್ 2021, 13:33 IST
ರೋಹಿತ್ ಶರ್ಮಾ
ರೋಹಿತ್ ಶರ್ಮಾ   

ಚೆನ್ನೈ (ಪಿಟಿಐ): ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ಪಂಜಾಬ್ ಕಿಂಗ್ಸ್‌ ತಂಡದ ಮುಂದೆ ಈಗ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಸವಾಲು ಎದುರಿಸಲಿದೆ.

ಚೆಪಾಕ್‌ನಲ್ಲಿ ಶುಕ್ರವಾರ ಐಪಿಎಲ್ ಟೂರ್ನಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದಿರುವ ಕೆ.ಎಲ್. ರಾಹುಲ್ ಬಳಗವು ಸತತ ಸೋಲುಗಳ ಕಹಿ ಉಂಡಿದೆ. ಬುಧವಾರ ನಡೆದಿದ್ದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಎದುರು ಪಂಜಾಬ್ ತಂಡವು 120 ರನ್‌ಗಳ ಸಾಧಾರಣ ಮೊತ್ತಕ್ಕೆ ಕುಸಿದಿತ್ತು.

ತಂಡದ ಆರಂಭಿಕ ಜೋಡಿ ರಾಹುಲ್ ಮತ್ತು ಮಯಂಕ್ ಅಗರವಾಲ್ ಉತ್ತಮ ಆರಂಭ ನೀಡದಿದ್ದರೆ ಕ್ರಿಸ್ ಗೇಲ್ ಮತ್ತು ನಿಕೋಲಸ್ ಪೂರನ್ ತಂಡಕ್ಕೆ ಬಲ ತುಂಬಬೇಕು. ಆದರೆ, ಕಳೆದ ಪಂದ್ಯದಲ್ಲಿ ಈ ರೀತಿಯಾಗಿರಲಿಲ್ಲ. ರಾಹುಲ್ ವೈಫಲ್ಯ ಅನುಭವಿಸಿದ್ದರು. ಅವರ ಹಿಂದೆಯೇ ಗೇಲ್, ಪೂರನ್ ಕೂಡ ಅಗ್ಗದ ಮೊತ್ತಕ್ಕೆ ಕೈಚೆಲ್ಲಿದ್ದರು. ಆದರೆ ದೀಪಕ್ ಹೂಡಾ ಭರವಸೆಯ ಆಟಗಾರನಾಗಿದ್ದಾರೆ. ಅವರು ತಮ್ಮ ಆಟದಲ್ಲಿ ಸ್ಥಿರತೆ ಕಾಪಾಡಿಕೊಂಡರೆ ತಂಡದ ಮಧ್ಯಮಕ್ರಮಾಂಕಕ್ಕೆ ಬಲ ಬರಲಿದೆ.

ADVERTISEMENT

ಬೌಲಿಂಗ್‌ನಲ್ಲಿ ಜೇ ರಿಚರ್ಡ್ಸನ್‌ ಮತ್ತು ರಿಲಿ ಮೆರಿಡಿತ್ ನಿರೀಕ್ಷೆಗೆ ತಕ್ಕಂತೆ ಆಟವಾಡುತ್ತಿಲ್ಲ. ಹೆಚ್ಚು ದುಬಾರಿಯಾಗುತ್ತಿದ್ದಾರೆ. ಅದ್ದರಿಂದ ಎರಡೂ ವಿಭಾಗಗಳಲ್ಲಿ ತಂಡವು ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯಬಹುದು.

ಮುಂಬೈ ತಂಡವು ಎಲ್ಲ ರೀತಿಯಿಂದಲೂ ಬಲಿಷ್ಠವಾಗಿದೆ. ಆದರೆ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ಸಫಲವಾಗುತ್ತಿಲ್ಲ. ರೋಹಿತ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರು. ಆದರೆ ಉಳಿದ ಪಂದ್ಯಗಳಲ್ಲಿ ಆ ರೀತಿಯ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು.

ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರೂ ತಮ್ಮ ನೈಜ ಲಯದಲ್ಲಿ ಇಲ್ಲ. ಕೀರನ್ ಪೊಲಾರ್ಡ್, ಹಾರ್ದಿಕ್ ಮತ್ತು ಕೃಣಾಲ್ ಪಾಂಡ್ಯ ಅವರ ಆಟದ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ.

ತಂಡಗಳು:

ಮುಂಬೈ ಇಂಡಿಯನ್ಸ್‌: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರಿಸ್ ಲಿನ್, ಕೃಣಾಲ್ ಪಾಂಡ್ಯ, ರಾಹುಲ್ ಚಾಹರ್, ಟ್ರೆಂಟ್ ಬೌಲ್ಟ್‌, ಪಿಯೂಷ್ ಚಾವ್ಲಾ, ಜಸ್‌ಪ್ರೀತ್ ಬೂಮ್ರಾ, ಆದಿತ್ಯ ತಾರೆ, ಧವಳ್ ಕುಲಕರ್ಣಿ, ಜೇಮ್ಸ್‌ ನಿಶಾಮ್, ಸೂರ್ಯಕುಮಾರ್ ಯಾದವ್, ಜಯಂತ್ ಯಾದವ್.

ಪಂಜಾಬ್ ಕಿಂಗ್ಸ್: ಕೆ.ಎಲ್. ರಾಹುಲ್ (ನಾಯಕ/ವಿಕೆಟ್‌ಕೀಪರ್), ಮಯಂಕ್ ಅಗರವಾಲ್, ಕ್ರಿಸ್ ಗೇಲ್, ಮನದೀಪ್ ಸಿಂಗ್, ನಿಕೊಲಸ್ ಪೂರನ್‌(ವಿಕೆಟ್‌ಕೀಪರ್), ಸರ್ಫರಾಜ್ ಖಾನ್, ದೀಪಕ್ ಹೂಡಾ, ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ, ಆರ್ಷದೀಪ್ ಸಿಂಗ್, ಶಾರೂಕ್ ಖಾನ್, ಕ್ರಿಸ್ ಜೋರ್ಡಾನ್, ಜೇ ರಿಚರ್ಡ್ಸನ್, ರಿಲಿ ಮೆರಿಡಿತ್, ಫ್ಯಾಬಿಯನ್ ಅಲೆನ್, ಮೊಯಿಸೆಸ್ ಹೆನ್ರಿಕ್ಸ್.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.