ADVERTISEMENT

ಮೊಹಾಲಿಯಲ್ಲಿ ರಾಹುಲ್‌, ಮಯಂಕ್ ‘ಕಿಂಗ್ಸ್‌’

ಮುಂಬೈ ಇಂಡಿಯನ್ಸ್‌ ತಂಡವನ್ನು ಕಾಡಿದ ಪಂಜಾಬ್‌ನ ಮೊಹಮ್ಮದ್‌ ಶಮಿ, ಹಾರ್ಡಸ್‌, ಮುರುಗನ್‌; ವೈಫಲ್ಯ ಕಂಡ ಕೃಣಾಲ್‌ ಪಾಂಡ್ಯ

ಪಿಟಿಐ
Published 30 ಮಾರ್ಚ್ 2019, 19:21 IST
Last Updated 30 ಮಾರ್ಚ್ 2019, 19:21 IST
ಕೆ.ಎಲ್‌.ರಾಹುಲ್ ಅವರ ಬ್ಯಾಟಿಂಗ್ ವೈಖರಿ –ಪಿಟಿಐ ಚಿತ್ರ
ಕೆ.ಎಲ್‌.ರಾಹುಲ್ ಅವರ ಬ್ಯಾಟಿಂಗ್ ವೈಖರಿ –ಪಿಟಿಐ ಚಿತ್ರ   

ಮೊಹಾಲಿ : ಕರ್ನಾಟಕದ ಕೆ.ಎಲ್‌.ರಾಹುಲ್ ಮತ್ತು ಮಯಂಕ್ ಅಗರವಾಲ್‌ ಇಲ್ಲಿನ ಐ.ಎಸ್‌.ಬಿಂದ್ರಾ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ‘ಕಿಂಗ್ಸ್‌’ ಆಗಿ ಮೆರೆದರು. ಇವರಿಬ್ಬರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಜಯಭೇರಿ ಮೊಳಗಿಸಿತು.

177 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಕಿಂಗ್ಸ್ ಪರ ರಾಹುಲ್ (ಅಜೇಯ 71; 57 ಎಸೆತ, 1 ಸಿಕ್ಸರ್‌, 6 ಬೌಂಡರಿ) ಮತ್ತು ಕ್ರಿಸ್‌ ಗೇಲ್‌ (40; 24 ಎ, 4 ಸಿ, 3 ಬೌಂ) ಅರ್ಧಶತಕದ ಜೊತಯಾಟ ಆಡಿದರು. ಗೇಲ್‌ ಐಪಿಎಲ್‌ನಲ್ಲಿ 300 ಸಿಕ್ಸರ್‌ಗಳ ದಾಖಲೆಯ ಸಾಧನೆ ಮಾಡಿದರು. ತಂಡದ ಮೊತ್ತ 53 ರನ್‌ಗಳಾಗಿದ್ದಾಗ ಪಾಂಡ್ಯ ಸಹೋದರರಿಗೆ ಗೇಲ್ ವಿಕೆಟ್ ಒಪ್ಪಿಸಿದರು.

ನಂತರ ರಾಹುಲ್‌ ಜೊತೆಗೂಡಿದ ಮಯಂಕ್‌ ನಿರಾಯಾಸವಾಗಿ ರನ್ ಗಳಿಸಿದರು. ಎರಡನೇ ವಿಕೆಟ್‌ಗೆ ಇವರಿಬ್ಬರ 64 ರನ್‌ಗಳ ಜೊತೆಯಾಟ ತಂಡದ ಗೆಲುವನ್ನು ಖಾತರಿಪಿಡಿಸಿತು. ಅರ್ಧಶತಕದ ಸನಿಹ ಮಯಂಕ್ ಔಟಾದರೂ ರಾಹುಲ್ ಅಬ್ಬರ ಮುಂದುವರಿಯಿತು. ಡೇವಿಡ್ ಮಿಲ್ಲರ್ ಜೊತೆಗೂಡಿ ತಂಡವನ್ನು
ಗೆಲುವಿನ ದಡ ಸೇರಿಸಿದರು.
ಇದು ಕಿಂಗ್ಸ್ ಇಲೆವನ್‌ ತಂಡಕ್ಕೆ ಮೂರು ಪಂದ್ಯಗಳಲ್ಲಿ ಎರಡನೇ ಜಯವಾಗಿದೆ. ಮುಂಬೈ ಇಂಡಿಯನ್ಸ್‌ ಮೂರು ಪಂದ್ಯಗಳಲ್ಲಿ ಎರಡನೇ ಸೋಲಿನೊಂದಿಗೆ ನಿರಾಸೆಗೆ ಒಳಗಾಯಿತು.

ADVERTISEMENT

ಆರಂಭದಲ್ಲಿ ಗೇಲ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಅವರು ಔಟಾದ ಸಂದರ್ಭದಲ್ಲಿ ರಾಹುಲ್ ಎರಡಂಕಿ ಮೊತ್ತವನ್ನು ದಾಟಿದ್ದರಷ್ಟೆ. ನಂತರ ಅವರ ನೈಜ ಸಾಮರ್ಥ್ಯ ಬೆಳಕಿಗೆ ಬಂತು. ಹಾರ್ದಿಕ್ ಪಾಂಡ್ಯ ಹಾಕಿದ 15ನೇ ಓವರ್‌ನಲ್ಲಿ ರಾಹುಲ್ ಮತ್ತು ಮಿಲ್ಲರ್‌ 19 ರನ್ ಕಬಳಿಸಿದರು. ಜಯ ಖಚಿತವಾದ ನಂತರ ಜಸ್‌ಪ್ರೀತ್ ಬೂಮ್ರಾ ಅವರನ್ನೂ ರಾಹುಲ್ ದಂಡಿಸಿದರು.

ಪಾಂಡ್ಯ ಸಹೋದರರಿಗೆ ನಿರಾಸೆ: ಪಾಂಡ್ಯ ಸಹೋದರರಿಗೆ ಶನಿವಾರ ನಿರಾಸೆಯ ದಿನವಾಗಿತ್ತು. ಕೃಣಾಲ್ ಪಾಂಡ್ಯ ನಾಲ್ಕು ಓವರ್‌ಗಳಲ್ಲಿ 43 ರನ್ ನೀಡಿದರೆ ಹಾರ್ದಿಕ್‌ ಮೂರು ಓವರ್‌ಗಳಲ್ಲಿ 39 ರನ್‌ ಬಿಟ್ಟುಕೊಟ್ಟಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಪರ ಹಾರ್ದಿಕ್‌ ಸ್ವಲ್ಪ ಮಿಂಚಿದರೆ ಕೃಣಾಲ್‌ ವೈಫಲ್ಯ ಕಂಡರು.

ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡಿ ಕಾಕ್‌ (60; 39 ಎ, 2 ಸಿ, 6 ಬೌಂ) ಮೊದಲ ವಿಕೆಟ್‌ಗೆ ಉತ್ತಮ ಜೊತೆಯಾಟ ಆಡಿದರು. ಆದರೆ ಮುಂಬೈ ಇಂಡಿಯನ್ಸ್‌ ತಂಡದ ಇತರ ಆಟಗಾರರಿಗೆ ನಿರೀಕ್ಷಿತ ಸಾಮರ್ಥ್ಯ ತೋರಲು ಆಗಲಿಲ್ಲ.

ಕ್ರಿಸ್ ಗೇಲ್ ಸಿಕ್ಸರ್‌ಗಳ ‘ತ್ರಿಶತಕ’

ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್‌ ಐಪಿಎಲ್‌ನಲ್ಲಿ 300 ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಆಟಗಾರ ಎಂದೆನಿಸಿಕೊಂಡರು. ಶನಿವಾರದ ಪಂದ್ಯದ ಮೂರನೇ ಓವರ್‌ನಲ್ಲಿ ಮೆಕ್‌ಲೆನಾಗನ್ ಅವರನ್ನು ಸತತ ಎರಡು ಬಾರಿ (2 ಮತ್ತು 3ನೇ ಎಸೆತ) ಸಿಕ್ಸರ್‌ಗೆ ಅಟ್ಟುವ ಮೂಲಕ ಅವರು ಈ ಸಾಧನೆ ಮಾಡಿದರು.

ಇನಿಂಗ್ಸ್‌ನಲ್ಲಿ ಅವರು ಒಟ್ಟು ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿ ಗಳಿಸಿದರು. 24 ಎಸೆತಗಳಲ್ಲಿ 40 ರನ್‌ ಗಳಿಸಿ ಕೃಣಾಲ್‌ ಪಾಂಡ್ಯ ಎಸೆತದಲ್ಲಿ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿ ಔಟಾದರು. ಇದು ಗೇಲ್ ಅವರ 115ನೇ ಪಂದ್ಯ ಆಗಿತ್ತು.

143 ಪಂದ್ಯ ಆಡಿರುವ ಎಬಿ ಡಿವಿಲಿಯರ್ಸ್‌ 192 ಸಿಕ್ಸರ್‌ ಸಿಡಿಸಿ ಹೆಚ್ಚು ಸಿಕ್ಸರ್‌ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಮಹೇಂದ್ರ ಸಿಂಗ್ ಧೋನಿ ಇದ್ದಾರೆ. ಅವರು 177 ಪಂದ್ಯಗಳಲ್ಲಿ 187 ಸಿಕ್ಸರ್ ಗಳಿಸಿದ್ದಾರೆ. ಸುರೇಶ್ ರೈನಾ (178 ಪಂದ್ಯಗಳಲ್ಲಿ 186) ಮತ್ತು ರೋಹಿತ್ ಶರ್ಮಾ (176 ಪಂದ್ಯಗಳಲ್ಲಿ 185) ಕ್ರಮವಾಗಿ ನಾಲ್ಕು ಮತ್ತು ಐದನೇ
ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.