ADVERTISEMENT

ಆರ್‌ಸಿಬಿಗೆ ಮತ್ತೊಂದು‌ ಜಯದ ಕನಸು

ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡದ ನಾಯಕ–ಉಪನಾಯಕರ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 19:29 IST
Last Updated 14 ಏಪ್ರಿಲ್ 2019, 19:29 IST
ಎಬಿ ಡಿವಿಲಿಯರ್ಸ್‌ (ಎಡ) ಮತ್ತು ಕೊಹ್ಲಿ ಆರ್‌ಸಿಬಿ ತಂಡದ ಬ್ಯಾಟಿಂಗ್ ವಿಭಾಗದ ಭರವಸೆಯಾಗಿದ್ದಾರೆ –ಎಎಫ್‌ಪಿ ಚಿತ್ರ
ಎಬಿ ಡಿವಿಲಿಯರ್ಸ್‌ (ಎಡ) ಮತ್ತು ಕೊಹ್ಲಿ ಆರ್‌ಸಿಬಿ ತಂಡದ ಬ್ಯಾಟಿಂಗ್ ವಿಭಾಗದ ಭರವಸೆಯಾಗಿದ್ದಾರೆ –ಎಎಫ್‌ಪಿ ಚಿತ್ರ   

ಮುಂಬೈ: ಮೊದಲ ಸುತ್ತಿನ ಕೊನೆಯ ಪಂದ್ಯದಲ್ಲಿ ‘ಚೊಚ್ಚಲ’ ಗೆಲುವು ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಎರಡನೇ ಸುತ್ತಿನಲ್ಲಿ ಶುಭಾರಂಭ ಮಾಡುವ ಹುಮ್ಮಸ್ಸು.

ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ತಂಡವನ್ನು ಆರ್‌ಸಿಬಿ ಎದುರಿಸಲಿದೆ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಕ್ರಮವಾಗಿ ಆರ್‌ಸಿಬಿ ಮತ್ತು ಮುಂಬೈ ತಂಡಗಳ ನಾಯಕರಾಗಿ‌ದ್ದಾರೆ. ಇವರಿಬ್ಬರ ಮುಖಾಮುಖಿ ಕುತೂಹಲ ಕೆರಳಿಸಿದೆ. ಮಾರ್ಚ್ 28ರಂದು ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಆರು ವಿಕೆಟ್‌ಗಳಿಂದ ಆತಿಥೇಯರನ್ನು ಮಣಿಸಿತ್ತು.

ADVERTISEMENT

ಸತತ ಆರು ‍ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಆರ್‌ಸಿಬಿ ಶನಿವಾರ ರಾತ್ರಿ ಮೊಹಾಲಿಯಲ್ಲಿ ನಡೆದ ಪಂದ್ಯ
ದಲ್ಲಿ ಕೊನೆಗೂ ಜಯದ ಸವಿ ಉಂಡಿತ್ತು. ನಾಯಕ ವಿರಾಟ್ ಕೊಹ್ಲಿ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌ ಮೇಲೆ ಅವಲಂಬಿತವಾಗಿರುವ ತಂಡ ಶನಿವಾರವೂ ಇವರಿಬ್ಬರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಗೆದ್ದಿತ್ತು.

ಕಿಂಗ್ಸ್ ಇಲೆವನ್ ವಿರುದ್ಧ ಗೆದ್ದರೂ ತಂಡ ಇನ್ನೂ ಪಾಯಿಂಟ್ ಪಟ್ಟಿಯ ಕೊನೆಯಲ್ಲಿದ್ದು ಪ್ಲೇ ಆಫ್ ಹಂತಕ್ಕೇರುವ ಕನಸು ಜೀವಂತವಾಗಿ ಉಳಿಯಬೇಕಾದರೆ ಉಳಿದಿರುವ ಎಲ್ಲ ಪಂದ್ಯಗಳನ್ನು ಗೆಲ್ಲಬೇಕು. ಹೀಗಾಗಿ ಒತ್ತಡದಲ್ಲೇ ಸೋಮವಾರ ಕಣಕ್ಕೆ ಇಳಿಯಲಿದೆ. ಏಳು ಪಂದ್ಯಗಳಿಂದ 270 ರನ್‌ ಗಳಿಸಿರುವ ವಿರಾಟ್ ಕೊಹ್ಲಿ ಮತ್ತು ಅಷ್ಟೇ ಪಂದ್ಯಗಳಿಂದ 232 ರನ್ ಗಳಿಸಿರುವ ಡಿವಿಲಿಯರ್ಸ್‌ ಅವರನ್ನು ಹೊರತುಪಡಿಸಿದರೆ ವಿಕೆಟ್ ಕೀಪರ್‌ ಪಾರ್ಥಿವ್ ಪಟೇಲ್ ಆರ್‌ಸಿಬಿಯ ಭರವಸೆಯಾಗಿದ್ದಾರೆ.

ಅಕ್ಷದೀಪ್ ನಾಥ್‌, ಮೊಯಿನ್ ಅಲಿ, ಮಾರ್ಕಸ್ ಸ್ಟೊಯಿನಿಸ್‌ ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್‌ ಅವರಿಗೆ ಇನ್ನೂ ನಿರೀಕ್ಷೆಗೆ ತಕ್ಕಂತೆ ಆಡಲು ಆಗಲಿಲ್ಲ. ಯಜುವೇಂದ್ರ ಚಾಹಲ್‌ ತಮ್ಮ ಸ್ಪಿನ್ ಮೋಡಿ ಮೂಲಕ ಎದುರಾಳಿಗಳನ್ನು ಕಂಗೆಡಿಸುವಲ್ಲಿ ಸಫಲರಾಗಿದ್ದಾರೆ. ಈ ವರೆಗೆ 11 ವಿಕೆಟ್‌ಗಳನ್ನು ಅವರು ಕಬಳಿಸಿದ್ದಾರೆ. ಮೊಹಮ್ಮದ್ ಸಿರಾಜ್‌, ನವದೀಪ್ ಸೈನಿ, ಉಮೇಶ್ ಯಾದವ್‌ ಮುಂತಾದವರಿಗೆ ಪರಿಣಾಮ ಬೀರಲು ಆಗುತ್ತಿಲ್ಲ.

ರೋಹಿತ್ ಶರ್ಮಾ ಮೇಲೆ ನಿರೀಕ್ಷೆಯ ಭಾರ: ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಸೋತಿರುವ ಮುಂಬೈ ಇಂಡಿಯನ್ಸ್‌ ಮತ್ತೆ ಗೆಲುವಿನ ಹಾದಿಯಲ್ಲಿ ಸಾಗಲು ಪ್ರಯತ್ನಿಸಲಿದೆ. ಗಾಯದ ಸಮಸ್ಯೆಯಿಂದ ಸುಧಾರಿಸಿಕೊಂಡಿರುವ ನಾಯಕ ರೋಹಿತ್ ಶರ್ಮಾ ಅಂಗಣಕ್ಕೆ ಮರಳಿರುವುದು ಮುಂಬೈ ಇಂಡಿಯನ್ಸ್ ಪಾಳಯಕ್ಕೆ ಖುಷಿ ತಂದಿದೆ.

ಕ್ವಿಂಟನ್ ಡಿ ಕಾಕ್‌, ಇಶಾನ್ ಕಿಶನ್‌, ಸೂರ್ಯಕುಮಾರ್ ಯಾದವ್‌, ಕೀರನ್ ಪೊಲಾರ್ಡ್‌ ಮತ್ತು ಕೃಣಾಲ್ ಪಾಂಡ್ಯ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಭರವಸೆ ತುಂಬಿದ್ದಾರೆ. ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದೆ. ಆದರೆ ಕಳೆದ ಪಂದ್ಯದಲ್ಲಿ ಫೀಲ್ಡಿಂಗ್ ಸಂದರ್ಭದಲ್ಲಿ ಬಿದ್ದು ಭುಜಕ್ಕೆ ಪೆಟ್ಟಾಗಿರುವುದರಿಂದ ಅಲ್ಜಾರಿ ಜೋಸೆಫ್‌ ಈ ಪಂದ್ಯದಲ್ಲಿ ಆಡುವುದು ಸಂದೇಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.