ADVERTISEMENT

ಐಪಿಎಲ್‌: ಆರ್‌ಸಿಬಿ–ಸೂಪರ್‌ ಕಿಂಗ್ಸ್‌ ಮೊದಲ ‘ಫೈಟ್‌’

ಎರಡು ವಾರಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಪಿಟಿಐ
Published 19 ಫೆಬ್ರುವರಿ 2019, 20:34 IST
Last Updated 19 ಫೆಬ್ರುವರಿ 2019, 20:34 IST
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ   

ನವದೆಹಲಿ: ವಿರಾಟ್‌ ಕೊಹ್ಲಿ ಸಾರಥ್ಯದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮತ್ತು ಮಹೇಂದ್ರ ಸಿಂಗ್‌ ಧೋನಿ ಮುಂದಾಳತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ತಂಡಗಳು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 12ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಈ ಬಾರಿಯ ಲೀಗ್‌ನ ಮೊದಲ ಎರಡು ವಾರಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಲೀಗ್‌ನ ಮೊದಲ ಹಣಾಹಣಿ ಮಾರ್ಚ್‌ 23ರಂದು ಚೆನ್ನೈಯಲ್ಲಿ ಆಯೋಜನೆಯಾಗಿದೆ. ಮೊದಲ ಹಂತದಲ್ಲಿ ಒಟ್ಟು 17 ಪಂದ್ಯಗಳು ಆಯೋಜನೆಯಾಗಿವೆ.

ADVERTISEMENT

ಆರ್‌ಸಿಬಿ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡು ಪಂದ್ಯಗಳನ್ನು ಆಡಲಿದೆ. ಮಾರ್ಚ್‌ 28ರಂದು ರೋಹಿತ್‌ ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್‌ ಮತ್ತು ಏಪ್ರಿಲ್‌ 5ರಂದು ದಿನೇಶ್‌ ಕಾರ್ತಿಕ್‌ ನಾಯಕತ್ವದ ಕೋಲ್ಕತ್ತ ನೈಟ್‌ ರೈಡರ್ಸ್‌ ಎದುರು ಕೊಹ್ಲಿ ಬಳಗ ಸೆಣಸಲಿದೆ. 14 ದಿನಗಳ ಅವಧಿಯಲ್ಲಿ ಆರ್‌ಸಿಬಿ ಒಟ್ಟು ಐದು ಪಂದ್ಯಗಳನ್ನು ಆಡಲಿದೆ. ಡೆಲ್ಲಿ ಕ್ಯಾಪಿಟಲ್ಸ್‌ ಕೂಡಾ ಇಷ್ಟೇ ಪಂದ್ಯಗಳಲ್ಲಿ ಹೋರಾಡಲಿದೆ. ಈ ತಂಡ ತವರಿನ ಅಂಗಳದಲ್ಲಿ ಮೂರು ಪಂದ್ಯಗಳಲ್ಲಿ ಸೆಣಸಲಿದೆ.

ಆರ್‌ಸಿಬಿ ಮತ್ತು ಡೆಲ್ಲಿಯನ್ನು ಬಿಟ್ಟು ಉಳಿದ ತಂಡಗಳು ತವರಿನಲ್ಲಿ ಮತ್ತು ತವರಿನ ಹೊರಗೆ ತಲಾ ಎರಡು ಪಂದ್ಯಗಳನ್ನು ಆಡಲಿವೆ.

ಶನಿವಾರ ಮತ್ತು ಭಾನುವಾರ ತಲಾ ಎರಡು ಪಂದ್ಯಗಳು ನಡೆಯಲಿವೆ. ಆದರೆ ಪಂದ್ಯಗಳ ಸಮಯವನ್ನು (ಸಂಜೆ 4 ಮತ್ತು ರಾತ್ರಿ 8) ಬದಲಾವಣೆ ಮಾಡಲು ಬಿಸಿಸಿಐ ಚಿಂತಿಸಿದ್ದು ಈ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ.

ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟವಾದ ನಂತರ ಎರಡನೇ ಹಂತದ ವೇಳಾಪಟ್ಟಿ ಬಿಡುಗಡೆ ಮಾಡಲು ಬಿಸಿಸಿಐ ಚಿಂತಿಸಿದೆ. ಒಂದೊಮ್ಮೆ ಈಗ ನಿಗದಿಯಾಗಿರುವ ದಿನಗಳಂದು ಚುನಾವಣೆ ನಡೆದರೆ ಅಂದಿನ ಪಂದ್ಯವನ್ನು ಮುಂದೂಡಲು ಮಂಡಳಿ ತೀರ್ಮಾನಿಸಿದೆ.

ಮಾರ್ಚ್‌ 24ರಂದು ಒಟ್ಟು ಎರಡು ಪಂದ್ಯಗಳು ನಡೆಯಲಿವೆ. ಮಧ್ಯಾಹ್ನದ ಹೋರಾಟದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಕೋಲ್ಕತ್ತ ನೈಟ್‌ರೈಡರ್ಸ್‌ ಎದುರಾಗಲಿವೆ. ಮುಂಬೈಯಲ್ಲಿ ನಿಗದಿಯಾಗಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ಹೋರಾಡಲಿವೆ.

‘ಮೊದಲ ಎರಡು ವಾರಗಳ ಪಂದ್ಯಗಳು ಸುಸೂತ್ರವಾಗಿ ನಡೆಯುವ ನಿರೀಕ್ಷೆ ಇದೆ. ಲೋಕಸಭಾ ಚುನಾವಣೆಯ ದಿನಾಂಕ ‍ಪ್ರಕಟವಾದ ನಂತರ ಸಂಬಂಧ ಪಟ್ಟ ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಜೊತೆ ಚರ್ಚಿಸಿ ಎರಡನೇ ಹಂತದ ವೇಳಾಪಟ್ಟಿ ಬಿಡುಗಡೆ ಮಾಡುತ್ತೇವೆ’ ಎಂದು ಐಪಿಎಲ್‌ ಆಡಳಿತ ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.