ADVERTISEMENT

ಮಸೀದಿ ಅಂಗಳದಲ್ಲಿ ಅರಳಿದ ‘ಸ್ವಿಂಗ್ ಸುಲ್ತಾನ’

ಕ್ರಿಕೆಟ್‌ನ ಎಲ್ಲ ಮಾದರಿಗಳಿಗೆ ಎಡಗೈ ಆಲ್‌ರೌಂಡರ್ ಇರ್ಫಾನ್‌ ಪಠಾಣ್ ವಿದಾಯ

ಗಿರೀಶದೊಡ್ಡಮನಿ
Published 4 ಜನವರಿ 2020, 19:45 IST
Last Updated 4 ಜನವರಿ 2020, 19:45 IST
ಇರ್ಫಾನ್ ಪಠಾಣ್
ಇರ್ಫಾನ್ ಪಠಾಣ್   
""
""

ಬೆಂಗಳೂರು: ಹದಿನಾರು ವರ್ಷಗಳ ಹಿಂದಿನ ಮಾತು. ಕರಾಚಿಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲ ಓವರ್‌ನ ಮೂರು ಎಸೆತಗಳಲ್ಲಿ ಪಾಕಿಸ್ತಾನದ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿದ್ದರು. ಅದಕ್ಕೆ ಕಾರಣರಾಗಿದ್ದು ಭಾರತದ ಎಡಗೈ ಮಧ್ಯಮವೇಗಿ ಇರ್ಫಾನ್ ಪಠಾಣ್.

ಬರೋಡಾದ ಇರ್ಫಾನ್‌ ಅವರ ಹೆಸರು ಕೇಳಿದಾಗಲೆಲ್ಲ. ಅವರ ಆ ಹ್ಯಾಟ್ರಿಕ್ ಸಾಧನೆಯೇ ಮೊದಲು ಕಣ್ಣಿಗೆ ಕಟ್ಟುತ್ತದೆ. ಭಾರತದ ಕ್ರಿಕೆಟ್‌ಪ್ರೇಮಿಗಳು ರೋಮಾಂಚನಗೊಳ್ಳುತ್ತಾರೆ. ಬದ್ಧ ಎದುರಾಳಿ ಪಾಕ್‌ ತಂಡದ ಅಂಗಳದಲ್ಲಿಯೇ ಇಂತಹದೊಂದು ಸಾಧನೆ ಅಪರೂಪದ್ದು. ಆ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ನಾಯಕತ್ವ ವಹಿಸಿದ್ದು ಇನ್ನೊಂದು ವಿಶೇಷ.

ಆಗಲೇ ಅವರ ಬಾಲ್ಯದ ಬದುಕು ವಿಶ್ವದ ಗಮನ ಸೆಳೆದಿತ್ತು. ಪಠಾಣ್ ಕುಟುಂಬದ ಇರ್ಫಾನ್‌ ಮತ್ತು ಅವರ ಅಣ್ಣ ಯುಸೂಫ್ ಕ್ರಿಕೆಟ್‌ ಹವ್ಯಾಸ ಆರಂಭವಾಗಿದ್ದು ತಮ್ಮ ತಂದೆ ಮೌಲ್ವಿಯಾಗಿದ್ದ ಮಸೀದಿಯ ಅಂಗಳದಿಂದ. ಇರ್ಫಾನ್‌ ಎಡಗೈ ಯಿಂದ ಹೊರಹೊಮ್ಮುತ್ತಿದ್ದ ಸ್ವಿಂಗ್ ಮತ್ತು ವೇಗದ ಎಸೆತಗಳು ಅಲ್ಲಿಯ ಮನೆಗಳ ಗೋಡೆಗಳಿಗೆ ಅಪ್ಪಳಿಸುತ್ತಿದ್ದವು. ಯುಸೂಫ್ ಬ್ಯಾಟಿಂಗ್ ರಭಸಕ್ಕೆ ಚೆಂಡು ಇನ್ನೊಂದು ಓಣಿಗೆ ಹೋಗಿ ಬೀಳುತ್ತಿತ್ತು. ಬೌಲಿಂಗ್‌ನಲ್ಲಿ ಉತ್ತಮವಾಗಿದ್ದರೂ ತನ್ನಣ್ಣನಂತೆ ಬ್ಯಾಟಿಂಗ್ ಮಾಡುವತ್ತಲೂ ಇರ್ಫಾನ್‌ ಪ್ರಯತ್ನಿಸಿದರು. ಇದರ ಫಲವಾಗಿ ಅವರು ಆಲ್‌ರೌಂಡರ್‌ ಆದರು.

ADVERTISEMENT

ಸಹೋದರರಿಬ್ಬರೂ ಅರೇಬಿಕ್ ಓದಿ ಇಸ್ಲಾಂ ವಿದ್ವಾಂಸರಾಗಲಿ ಎಂಬ ಆಸೆ ಪಾಲಕರದ್ದಾಗಿತ್ತು. ಅಲ್ಲಿಯ ಕೆಲವು ಹಿರಿಯರೂ ಕೂಡ ಅದನ್ನೇ ಬಯಸಿದ್ದರು. ಕ್ರಿಕೆಟ್‌ ಆಡುವ ಬಗ್ಗೆ ಅವರಲ್ಲಿ ಅಸಮಾಧಾನವೂ ಇತ್ತು. ಓದಿನತ್ತ ಗಮನ ಕೊಡಿ ಎಂದು ಬುದ್ಧಿವಾದ ಹೇಳಿದ್ದರು. ಆದರೆ, ಕೊನೆಗೂ ಮೇಲುಗೈ ಸಾಧಿಸಿದ್ದು ಕ್ರಿಕೆಟ್‌ಪ್ರೀತಿಯೇ.

ಕಡೆಗೆ ಇಡೀ ಕುಟುಂಬವೇ ಅವರಿ ಬ್ಬರ ಬೆಂಬಲಕ್ಕೆ ನಿಂತಿತು. ಅದರಿಂದಾಗಿ ಭಾರತದ ಕ್ರಿಕೆಟ್‌ ರಂಗದಲ್ಲಿ ಅಣ್ಣ–ತಮ್ಮ ಕ್ರಿಕೆಟ್‌ ತಾರೆಗಳಾಗಿ ಬೆಳಗಿದರು. ಶ್ರೇಷ್ಠ ಆಲ್‌ರೌಂಡರ್ ಕಪಿಲ್‌ ದೇವ್ ಅವರಂತೆ ಇರ್ಫಾನ್ ಎಂದು ಹಲವರು ಹೇಳುವ ಮಟ್ಟಕ್ಕೆ ಬೆಳೆದರು. ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ ಮತ್ತು ಮಹೇಂದ್ರಸಿಂಗ್ ಧೋನಿ ನಾಯಕತ್ವದಲ್ಲಿ ತಂಡಕ್ಕೆ ಇರ್ಫಾನ್ ಕೊಟ್ಟ ಕಾಣಿಕೆ ಬಹಳಷ್ಟಿವೆ. 2007ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಅವರೂ ಇದ್ದರು.

ಮೈಸೂರಿನಲ್ಲಿ 2015ರಲ್ಲಿ ನಡೆದಿದ್ದ ರಣಜಿ ಪಂದ್ಯದಲ್ಲಿ ಆಡಲು ಬಂದಿದ್ದ
ಯುಸೂಫ್‌ ಪಠಾಣ್ ಮತ್ತು ಇರ್ಫಾನ್ ಪಠಾಣ್ –ಪ್ರಜಾವಾಣಿ ಸಂಗ್ರಹ

ಬೆಂಗಳೂರು ಮತ್ತು ಇರ್ಫಾನ್ ಶತಕ

ಇರ್ಫಾನ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಏಕೈಕ ಶತಕ ದಾಖಲಿಸಿದ್ದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. ಅದೂ ಪಾಕಿಸ್ತಾನ ಎದುರಿನ ಟೆಸ್ಟ್ ಪಂದ್ಯದಲ್ಲಿ. ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಸೌರವ್ ಗಂಗೂಲಿ ದ್ವಿಶತಕ ಮತ್ತು ಯುವರಾಜ್ ಸಿಂಗ್ ಶತಕ ಸಿಡಿಸಿದ್ದರು. ಎಂಟನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಇರ್ಫಾನ್ 133 ಎಸೆತಗಳಲ್ಲಿ 102 ರನ್‌ ಗಳಿಸಿ ಪಾಕ್‌ ಬೌಲರ್‌ಗಳನ್ನು ಕಾಡಿದ್ದರು. ಅವರು ಈಚೆಗೆ ಬೆಂಗಳೂರಿನಲ್ಲಿ ಒಂದು ಕ್ರಿಕೆಟ್ ಅಕಾಡೆಮಿಯನ್ನೂ ಆರಂಭಿಸಿದ್ದಾರೆ.

ಬಾಲ್ಯದಿಂದಲೂ ಆಧ್ಯಾತ್ಮ, ಪ್ರಾರ್ಥನೆಗಳ ನಂಟಿನಲ್ಲಿ ಬೆಳೆದ ಇರ್ಫಾನ್‌ ನಡೆ, ನುಡಿಯಲ್ಲಿ ತಾರಾ ವರ್ಚಸ್ಸಿನ ಅಹಂ ಯಾವತ್ತೂ ಇಣುಕಿರಲಿಲ್ಲ. ಯುಸೂಫ್ ಸದಾ ಮೌನಿ. ಅದರೆ, ಇರ್ಫಾನ್ ಮಾತಿನ ಮಲ್ಲ. ಆರು ವರ್ಷಗಳ ಹಿಂದೆ ಮೈಸೂರಿಗೆ ರಣಜಿ ಪಂದ್ಯ ಆಡಲು ಬರೋಡಾ ತಂಡದೊಂದಿಗೆ ಬಂದಾಗಲೂ ಎಲ್ಲರೊಂದಿಗೆ ಮುಕ್ತವಾಗಿ ಬೆರೆತಿದ್ದರು.

ಆಗ ತಾವು ರಾಷ್ಟ್ರೀಯ ತಂಡಕ್ಕೆ ಮರಳುವ ಸಾಧ್ಯತೆಯ ಕುರಿತು ಪ್ರತಿಕ್ರಿಯಿಸಿದ್ದ ಅವರು, ‘ಭಾರತ ತಂಡದಲ್ಲಿ ಆಡುವುದೇ ಸೌಭಾಗ್ಯ. ಆದರೆ ಗಾಯ ಮತ್ತು ಫಾರ್ಮ್‌ ಕೊರತೆಗಳಿಂದ ಮೇಲೆ ಬರಬೇಕಷ್ಟೇ. ಒಬ್ಬ ಕ್ರೀಡಾಪಟುವಿನ ಜೀವನದಲ್ಲಿ ಇದೆಲ್ಲ ಸಹಜ. ನಾವು ನಮ್ಮ ದೇಹವನ್ನು ಸಾಮಾನ್ಯರಿಗಿಂತ ಹೆಚ್ಚಿನ ಮಟ್ಟದಲ್ಲಿ ದುಡಿಸಿಕೊಳ್ಳುತ್ತೇವೆ. ಸಹಜ ಚಲನೆಗಳನ್ನು ಗರಿಷ್ಠ ಸಾಮರ್ಥ್ಯ ಮೀರಿ ರೂಢಿಸಿಕೊಳ್ಳುತ್ತೇವೆ. ಇಂದಿನ ಪೈಪೋಟಿಯ ಯುಗದಲ್ಲಿ ಇದೆಲ್ಲ ಅನಿವಾರ್ಯ. ಭಾರತ ತಂಡದಲ್ಲಿ ಹೊಸ ಪ್ರತಿಭೆಗಳು ಬರುತ್ತಿದ್ದಾರೆ. ಅನುಭವಿಗಳು ಮಾರ್ಗದರ್ಶನ ನೀಡಬೇಕು. ಆಗಲೇ ಆಟ ಮತ್ತು ತಂಡಕ್ಕೆ ಶ್ರೇಯಸ್ಸು’ ಎಂದಿದ್ದರು.

ಶನಿವಾರ ಅವರು ಎಲ್ಲ ಮಾದರಿಗಳ ಕ್ರಿಕೆಟ್‌ಗೂ ಅವರು ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಆದರೆ 2012ರಿಂದ ಈಚೆಗೆ ಅವರು ಭಾರತ ತಂಡದಿಂದ ಹೊರಗುಳಿದಿದ್ದರು. ಗಾಯದ ಸಮಸ್ಯೆ ಮತ್ತು ಫಾರ್ಮ್‌ ಕೊರತೆಗಳು ಅವರನ್ನು ಕಾಡಿದ್ದು ಇದಕ್ಕೆ ಕಾರಣ. ಹೋದ ಐಪಿಎಲ್‌ ಋತುವಿನಲ್ಲಿ ಅವರು ಕಾಮೆಂಟೇಟರ್ ಆಗಿ ಕಾಣಿಸಿಕೊಂಡಿದ್ದರು. ಬಹುಶಃ ಮುಂದಿನ ದಿನಗಳಲ್ಲಿ ತಮ್ಮ ಮಾತಿನ ವೈಖರಿ ಮೂಲಕ ಜನಮನ ಗೆಲ್ಲಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.