ADVERTISEMENT

ಇಶಾನ್ ನನ್ನೊಂದಿಗೆ ಇನಿಂಗ್ಸ್ ಆರಂಭಿಸುತ್ತಾರೆ, ಇರುವುದು ಅದೊಂದೇ ಆಯ್ಕೆ: ರೋಹಿತ್

ಪಿಟಿಐ
Published 5 ಫೆಬ್ರುವರಿ 2022, 12:05 IST
Last Updated 5 ಫೆಬ್ರುವರಿ 2022, 12:05 IST
ರೋಹಿತ್ ಶರ್ಮಾ: ಪಿಟಿಐ ಚಿತ್ರ
ರೋಹಿತ್ ಶರ್ಮಾ: ಪಿಟಿಐ ಚಿತ್ರ   

ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಅವರೊಂದಿಗೆ ಇನಿಂಗ್ಸ್ ಓಪನಿಂಗ್ ಮಾಡುವುದಾಗಿ ಭಾರತದ ಏಕದಿನ ಕ್ರಿಕೆಟ್ ತಂಡದ ನೂತನ ನಾಯಕ ರೋಹಿತ್ ಶರ್ಮಾ ಶನಿವಾರ ಹೇಳಿದ್ದಾರೆ.

ತಡವಾಗಿ ತಂಡ ಸೇರಿಕೊಂಡ ಮಯಂಕ್ ಅಗರವಾಲ್ ಕಡ್ಡಾಯ ಕ್ವಾರಂಟೈನ್‌ನಲ್ಲಿರುವ ಹಿನ್ನೆಲೆಯಲ್ಲಿ ತಂಡಕ್ಕೆ ಇರುವ ಏಕೈಕ ಯುವ ಆಟಗಾರನ ಆಯ್ಕೆ ಇಶಾನ್ ಕಿಶನ್ ಎಂದು ಹೇಳಿದ್ದಾರೆ.

ಶಿಖರ್ ಧವನ್ ಮತ್ತು ಋತುರಾಜ್ ಗಾಯಕ್ವಾಡ್ ಅವರಿಗೆ ಕೋವಿಡ್-19 ದೃಢಪಟ್ಟ ನಂತರ ಕಿಶನ್ ಅವರನ್ನು ಏಕದಿನ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ. ಸದ್ಯ ಅವರು ಪ್ರತ್ಯೇಕ ವಾಸದಲ್ಲಿದ್ದಾರೆ.

ADVERTISEMENT

‘ನಮಗೆ ಇರುವ ಏಕೈಕ ಆಯ್ಕೆ ಇಶಾನ್ ಕಿಶನ್ ಮತ್ತು ಅವರು ನನ್ನೊಂದಿಗೆ ಇನಿಂಗ್ಸ್ ಆರಂಭಿಸುತ್ತಾರೆ’ ಎಂದು ರೋಹಿತ್ ಏಕದಿನ ಸರಣಿ ಆರಂಭಕ್ಕೂ ಮುನ್ನಾದಿನದಂದು ಹೇಳಿದರು.

‘ಮಯಂಕ್ ಅಗರವಾಲ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ ಮತ್ತು ಅವರು ಇನ್ನೂ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇದ್ದಾರೆ. ಅವರು ತಡವಾಗಿ ತಂಡವನ್ನು ಸೇರಿದರು. ನಿಯಮಗಳ ಪ್ರಕಾರ, ಯಾರಾದರೂ ಪ್ರವಾಸದಲ್ಲಿದ್ದರೆ ಅವರನ್ನು 3 ದಿನ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇರಿಸಬೇಕಾಗುತ್ತದೆ. ಮಯಂಕ್ ಇನ್ನೂ ಕ್ವಾರಂಟೈನ್ ಪೂರ್ಣಗೊಳಿಸಿಲ್ಲ, ಆದ್ದರಿಂದ ಇಶಾನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ’ ಎಂದು ಅವರು ಹೇಳಿದರು.

‘ನಾವು ಇಂದು ಅಭ್ಯಾಸ ನಡೆಸಿದ್ದೇವೆ. ಯಾವುದೇ ಗಾಯದ ಸಮಸ್ಯೆ ಇಲ್ಲದಿದ್ದರೆ ಸದ್ಯ ತಂಡದಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.