
ಗಣೇಶ್
ಐಎಸ್‌ಪಿಎಲ್ (ISPL) ಕ್ರಿಕೆಟ್ ಲೀಗ್‌ನಲ್ಲಿ ಕನ್ನಡಿಗ, ಕೊಪ್ಪಳದ ಗಣೇಶ್ ಅವರು ಚೆನ್ನೈ ಸಿಂಗಮ್ಸ್ ತಂಡದ ಪರ ಆಡಲು ಸಜ್ಜಾಗಿದ್ದಾರೆ.
ಕೊಪ್ಪಳದ ಗಣೇಶ್ ಅವರ 4ನೇ ತರಗತಿಯಲ್ಲೇ ಟೆನಿಸ್ ಬಾಲ್ ಕ್ರಿಕೆಟ್ ಆರಂಭಿಸಿದರು. ಮೊದಲಿಗೆ ಬೌಲರ್ ಆಗಿ ಆಡುತ್ತಿದ್ದ ಗಣೇಶ್, ಕಾಲಕ್ರಮೇಣ ದೊಡ್ಡ ಹೊಡೆತಗಳನ್ನು ಹೊಡೆಯುವ ಬ್ಯಾಟರ್ ಆಗಿ ರೂಪಾಂತರಗೊಂಡರು.
ಅನೇಕ ಆಟಗಾರರಂತೆ ಲೆದರ್ ಬಾಲ್ ಕ್ರಿಕೆಟ್‌ನಲ್ಲಿ ಗಣೇಶ್‌ಗೆ ಹೆಚ್ಚಿನ ಅನುಭವವಿಲ್ಲ. ಬೆಂಗಳೂರಿನಲ್ಲಿ ಕೇವಲ ಒಂದು ತಿಂಗಳಷ್ಟೇ ಲೆದರ್ ಬಾಲ್ ಕ್ರಿಕೆಟ್ ಆಡಿದ ಅನುಭವ ಅವರಿಗೆ ಇದೆ. ಆದರೆ ಅವರ ಕ್ರಿಕೆಟ್ ಆಟ ಸಂಪೂರ್ಣವಾಗಿ ಟೆನಿಸ್ ಬಾಲ್ ಕ್ರಿಕೆಟ್‌ನಲ್ಲೇ ಬೆಳೆದಿದೆ.
ಈ ಕುರಿತು ಮಾತನಾಡಿದ ಗಣೇಶ್, ‘ನನಗೆ ಚೆಂಡನ್ನು ಬಲವಾಗಿ ಹೊಡೆಯುವ ಶಕ್ತಿ ಇದೆ. ಅದಕ್ಕಾಗಿಯೇ ನಾನು ISPLವರೆಗೆ ತಲುಪಿದ್ದೇನೆ. ಸ್ವೀಪ್ ಶಾಟ್ ನನ್ನ ನೆಚ್ಚಿನ ಮತ್ತು ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿ ಉಳಿದಿದೆ’ ಎಂದು ಹೇಳಿದರು.
ISPL ಸೀಸನ್–3ರಲ್ಲಿ ಗಣೇಶ್ ಅವರಿಗೆ ಲೀಗ್‌ನಲ್ಲಿನ ಮೊದಲ ಅವಕಾಶವಾಗಿದೆ. ಹಿಂದಿನ ಎರಡು ಸೀಸನ್‌ಗಳಲ್ಲಿ ಅವರು ಅಲ್ಪ ಅಂತರದಿಂದ ಆಯ್ಕೆಯಿಂದ ತಪ್ಪಿಸಿಕೊಂಡಿದ್ದರು. ಚೆನ್ನೈ ಸಿಂಗಮ್ಸ್ ತಂಡದಿಂದ ಆಯ್ಕೆಯಾಗಿರುವುದು ಅವರಿಗೆ ಭಾವನಾತ್ಮಕ ಕ್ಷಣವಾಗಿದೆ.
‘ದಕ್ಷಿಣ ವಲಯದಿಂದ ಆಯ್ಕೆಯಾಗಿರುವುದಕ್ಕೆ ನನಗೆ ಬಹಳ ಹೆಮ್ಮೆ. ಒಂದು ತಂಡದಲ್ಲಿ ಕೇವಲ ಎರಡು ದಕ್ಷಿಣ ವಲಯದ ಆಟಗಾರರೇ ಕಡ್ಡಾಯವಾಗಿರುವುದರಿಂದ ಆಯ್ಕೆ ಪ್ರಕ್ರಿಯೆ ತುಂಬಾ ಕಠಿಣವಾಗಿತ್ತು. ಚೆನ್ನೈ ಸಿಂಗಮ್ಸ್ ನನ್ನನ್ನು ಆಯ್ಕೆ ಮಾಡಿಕೊಂಡಿರುವುದರಿಂದ ನನ್ನ ಗುರಿ ಇನ್ನಷ್ಟು ಸ್ಪಷ್ಟವಾಗಿದೆ’ ಎಂದು ಅವರು ಹೇಳಿದರು.
ಚೆನ್ನೈ ಸಿಂಗಮ್ಸ್ ತಂಡದ ವಾತಾವರಣವನ್ನು ಗಣೇಶ್ ತುಂಬಾ ಮೆಚ್ಚಿಕೊಂಡಿದ್ದಾರೆ. ಕೋಚ್‌ಗಳು ಹಾಗೂ ಸಹಾಯಕ ಸಿಬ್ಬಂದಿ ಎಲ್ಲರೂ ಆಟಗಾರರನ್ನು ಸಮಾನವಾಗಿ ನೋಡಿಕೊಳ್ಳುತ್ತಾರೆ. ಸೀನಿಯರ್–ಜೂನಿಯರ್ ಎಂಬ ಯಾವುದೇ ವ್ಯತ್ಯಾಸ ಇಲ್ಲ. ಮೊದಲ ದಿನದಿಂದಲೇ ಕುಟುಂಬದ ಭಾವನೆ ಮೂಡುತ್ತದೆ ಎಂದು ಹೇಳಿದರು.
ISPL ಸೀಸನ್ 3 ಆರಂಭಕ್ಕೂ ಮುನ್ನ ಗಣೇಶ್ ತಮ್ಮ ಹುಟ್ಟೂರಾದ ಕೊಪ್ಪಳದ ಜನರಿಗೆ ಧನ್ಯವಾದ ತಿಳಿಸಿದ್ದಾರೆ. ತಮ್ಮ ಕ್ರಿಕೆಟ್ ಪಯಣದ ಆರಂಭದಿಂದಲೇ ಬೆಂಬಲ ನೀಡಿದ ಎಲ್ಲರಿಗೂ ಕನ್ನಡದ್ಲೇ ಕೃತಜ್ಞತೆ ಸಲ್ಲಿಸಿ, ಮುಂದಿನ ದಿನಗಳಲ್ಲೂ ತಮ್ಮನ್ನೂ ಚೆನ್ನೈ ಸಿಂಗಮ್ಸ್ ತಂಡವನ್ನೂ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.