
ಗುವಾಹಟಿ: ಭಾರತ ಕ್ರಿಕೆಟ್ ತಂಡವು ತವರಿನಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಸರಣಿಗಳಲ್ಲಿ ವೈಫಲ್ಯ ಅನುಭವಿಸಿರುವ ಹಿನ್ನೆಲೆಯಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ.
ಅವರು ಕೋಚ್ ಸ್ಥಾನಕ್ಕೆ ನೇಮಕವಾದ ನಂತರ ಭಾರತ ತಂಡವು ನ್ಯೂಜಿಲೆಂಡ್ ಮತ್ತು ಇದೀಗ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಗಳಲ್ಲಿ ‘ವೈಟ್‌ವಾಷ್’ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ಮತ್ತು ರವಿಶಾಸ್ತ್ರಿ ಸೇರಿದಂತೆ ಹಲವು ದಿಗ್ಗಜರು ಗಂಭೀರ್ ಅವರ ಕಾರ್ಯಶೈಲಿಯ ಕುರಿತು ಟೀಕಿಸಿದ್ದಾರೆ.
ಬುಧವಾರ ಎರಡನೇ ಟೆಸ್ಟ್ ಮುಕ್ತಾಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗಂಭೀರ್, ‘ನನ್ನ ಭವಿಷ್ಯವನ್ನು ಬಗ್ಗೆ ಬಿಸಿಸಿಐ ನಿರ್ಧಾರ ಮಾಡಲಿದೆ. ನಾನು ಮುಖ್ಯವಲ್ಲ. ಆದರೆ ಭಾರತದ ಕ್ರಿಕೆಟ್ ಮಹತ್ವದ್ದು ಎಂದು ಮುಖ್ಯ ಕೋಚ್ ಆಗಿ ನೇಮಕವಾದ ನಂತರದ ಮೊದಲ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೆ. ಈಗಲೂ ಅದಕ್ಕೆ ಬದ್ಧ’ ಎಂದರು.
‘ಜನರು ನನ್ನ ಸಾಧನೆಗಳನ್ನು ಬೇಗನೆ ಮರೆಯುತ್ತಾರೆ. ನಮ್ಮ ಯುವ ಆಟಗಾರರ ತಂಡವು ಇಂಗ್ಲೆಂಡ್‌ನಲ್ಲಿ ಮಾಡಿದ ಸಾಧನೆಯನ್ನು ಮರೆಯುತ್ತಾರೆ. ಆದರೆ ನ್ಯೂಜಿಲೆಂಡ್ ವಿರುದ್ಧದ ಸರಣಿ ಫಲಿತಾಂಶ ಕುರಿತು ಮಾತನಾಡುತ್ತಾರೆ. ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್ ಜಯಿಸಿದ ತಂಡವು ನನ್ನದೇ ಎಂಬುದನ್ನೂ ಮರೆಯುತ್ತಾರೆ’ ಎಂದು ಹೇಳಿದರು.
‘ಸೋಲಿನ ಹೊಣೆ ಹೊರುವುದರಲ್ಲಿ ನಾನು ಮೊದಲಿಗ. ನಂತರ ಇದು ಎಲ್ಲರ ಹೊಣೆಯೂ ಆಗಿದೆ. 95 ರನ್‌ಗಳಿಗೆ 1 ವಿಕೆಟ್ ಇತ್ತು. ಅದು 122 ರನ್ ಗಳಿಗೆ 7 ವಿಕೆಟ್ ಆಗಿದ್ದು ಸ್ವೀಕಾರಾರ್ಹವಲ್ಲ. ವೈಯಕ್ತಿಕವಾಗಿ ಯಾರೋ ಒಬ್ಬರನ್ನು ಟೀಕಿಸುವುದು ಸರಿಯಲ್ಲ. ನಾನು ಯಾವತ್ತೂ ಯಾರೋ ಒಬ್ಬರನ್ನು ಟೀಕಿಸಿ ಮುಂದೆಯೂ ಆ ರೀತಿ ಮಾಡುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.